ಇನ್ನಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚಿರತೆಯ ಮೃತದೇಹ ಪತ್ತೆ : ದಹನ ಕಾರ್ಯ ಮಾಡಿದ ಅರಣ್ಯ ಇಲಾಖೆ – ಕಹಳೆ ನ್ಯೂಸ್
ಬೆಳೆ ಸಮೀಕ್ಷೆಗೆ ತೆರಳಿದ್ದ ಗ್ರಾಮ ಆಡಳಿತ ಅಧಿಕಾರಿಗೆ ಚಿರತೆಯ ಮೃತ ದೇಹ ಸಿಕ್ಕಿರುವ ಘಟನೆ ಇನ್ನಂಜೆಯಲ್ಲಿ ನಡೆದಿದೆ.
ಸುಮಾರು ಮೂರುವರೆ ವರ್ಷ ಪ್ರಾಯದ ಗಂಡು ಚಿರತೆಯೊಂದರ ಮೃತದೇಹ ಇನ್ನಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲುಗುಡ್ಡೆ – ಕುಂಜಾರ್ಗ ಬಳಿಯ ಕಾಡಿನಲ್ಲಿ ಪತ್ತೆಯಾಗಿದೆ.
ಇನ್ನಂಜೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಬೆಳೆ ಸಮೀಕ್ಷೆಗೆ ತೆರಳಿದ್ದ ಗ್ರಾಮ ಆಡಳಿತಾಧಿಕಾರಿ ಅವಿನಾಶ್ ಮತ್ತು ಗ್ರಾಮ ಸಹಾಯಕ ಜೇಸುದಾಸ್ ಸೋನ್ಸ್ ಅವರು ಕುಂಜಾರ್ಗದಲ್ಲಿ ಸತ್ತಿರುವ ಚಿರತೆಯನ್ನು ಗಮನಿಸಿದ್ದರು. ಚಿರತೆ ಮೃತಪಟ್ಟಿರುವ ಮಾಹಿತಿಯನ್ನು ಇನ್ನಂಜೆ ಗ್ರಾ. ಪಂ. ಅಧ್ಯಕ್ಷೆ ಮಾಲಿನಿ ಶೆಟ್ಟಿ ಅರಣ್ಯ ಇಲಾಖೆ ಮತ್ತು ಪಶು ಇಲಾಖೆಗೆ ತಿಳಿಸಿದ್ದು ಕುಂದಾಪುರ ಉಪವಿಭಾಗದ ವಲಯ ಅರಣ್ಯಾಧಿಕಾರಿ ವಾರಿಜಾಕ್ಷಿ, ಪಡುಬಿದ್ರಿ ಉಪ ವಲಯ ಅರಣ್ಯಾಧಿಕಾರಿಗಳಾದ ಜೀವನ್‍ದಾಸ್ ಶೆಟ್ಟಿ, ಗುರುರಾಜ್ ಕೆ. ಹಾಗೂ ಕಾಪು ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿ ಡಾ| ಅರುಣ್ ಹೆಗ್ಡೆ ಸ್ಥಳಕ್ಕೆ ಆಗಮಿಸಿ ಚಿರತೆಯ ಮೃತದೇಹ ಪರಿಶೀಲನೆ ನಡೆಸಿದ್ದಾರೆ. ಬಳಿಕ ಸಮೀಪದ ಗದ್ದೆಯೊಂದರಲ್ಲಿ ಅರಣ್ಯ ಇಲಾಖೆಯ ಸಂಪ್ರದಾಯದಂತೆ ದಹಿಸಲಾಗಿದೆ. ಕಳೆದ ಬಾರಿ ಇದೇ ರೀತಿಯಲ್ಲಿ ಹೆಬ್ರಿ ಸಮೀಪ, ಚಿರತೆ ಒಂದು ಅಪಘಾತದಲ್ಲಿ ಮೃತಪಟ್ಟಿತ್ತು. ಜಿಲ್ಲೆಯಲ್ಲಿ ಇದು ಮೃತಪಟ್ಟ ರೀತಿಯಲ್ಲಿ ಪತ್ತೆಯಾದ ಎರಡನೆಯ ಚಿರತೆ ದೇಹವಾಗಿದೆ.