Recent Posts

Monday, January 20, 2025
ಸುದ್ದಿ

ಮೈಸೂರಿನಲ್ಲಿ ಎಲ್ಲೆಲ್ಲೂ ನವನವೀನ ಬೊಂಬೆಗಳ ದರ್ಬಾರ್ – ಕಹಳೆ ನ್ಯೂಸ್

ಮೈಸೂರು: ನವರಾತ್ರಿ ಸಮಯದಲ್ಲಿ ಮನೆಗಳಲ್ಲಿ ಬೊಂಬೆಗಳನ್ನು ಪ್ರತಿಷ್ಠಾಪಿಸಿ ಪೂಜಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದು ಬಂದಿದ್ದು, ಮೈಸೂರಿನಲ್ಲಿ ಬೊಂಬೆಗಳ ದರ್ಬಾರ್ ಎಲ್ಲರ ಮನಸೆಳೆಯಿತು. ಈ ಕುರಿತಾದ ವಿಶೇಷ ವರದಿ ಇಲ್ಲಿದೆ.

ನವನವೀನ ಬೊಂಬೆಗಳು ಮನೆಯನ್ನು ಶೋಭಿಸಿ ಮನೆಮಂದಿಗೆ ಮನೋಲ್ಲಾಸ ನೀಡುತ್ತವೆ. ಇವುಗಳನ್ನು ಕಣ್ತುಂಬಿಸಿಕೊಳ್ಳುವುದೇ ಒಂದು ಸಡಗರ. ಸಂಭ್ರಮ. ಒಂದೆಡೆ ಮನೆಗಳಲ್ಲಿ ಬೊಂಬೆಗಳ ದರ್ಬಾರ್ ನಡೆದರೆ ಮತ್ತೊಂದೆಡೆ ವಿವಿಧ ಬಗೆಯ, ವಿವಿಧ ನಮೂನೆಯ ಬೊಂಬೆಗಳನ್ನು ಸಾರ್ವಜನಿಕ ದರ್ಶನಕ್ಕಿಡುವುದು ನಗರಗಳಲ್ಲಿ ಕಂಡುಬರುತ್ತದೆ. ಇವುಗಳನ್ನು ಕಣ್ತುಂಬಿಸಿಕೊಂಡು ಜನ ಖುಷಿಪಡುತ್ತಾರೆ. ಇದೀಗ ಜನ ನೋಡಲೆಂದೇ ಆಂಧ್ರದಿಂದ ಲಕ್ಷಾಂತರ ಬೊಂಬೆಗಳು ಅರಮನೆ ನಗರಿ ಮೈಸೂರಿಗೆ ಆಗಮಿಸಿದ್ದು, ಜಗನ್ಮೋಹನ ಅರಮನೆಯಲ್ಲಿ ಪ್ರತಿಷ್ಠಾಪಿತಗೊಂಡು ಬದುಕಿನ ವಿವಿಧ ಮಜಲುಗಳನ್ನು ತೆರೆದಿಡುತ್ತಿವೆ. ಇಲ್ಲಿ ಪುರಾಣಗಳ ದೇವದೇವತೆಯರು ಧರೆಗಿಳಿದಿದ್ದರೆ, ಮರೆತು ಹೋದ ಹಳ್ಳಿಸೊಗಡು ನೆನಪಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಥೆ, ಕಾವ್ಯಗಳು, ಕಲೆಗಳು ಅನಾವರಣಗೊಂಡು ಮೇಳೈಸುತ್ತವೆ. ಕಣ್ಣು ಹಾಯಿಸುತ್ತಾ ಹೋದಂತೆಯೇ ಒಂದು ಚೆಂದದ ಬೊಂಬೆಗಳ ಲೋಕ ತೆರೆಯುತ್ತಾ ಹೋಗುತ್ತದೆ. ಇಲ್ಲಿ ಏನಿದೆ ಏನಿಲ್ಲ ಎನ್ನುವಂತಿಲ್ಲ. ಎಲ್ಲವೂ ಇಲ್ಲಿಯೇ ಇದೆ ಎಂಬ ಭಾವ ಮನವನ್ನಾವರಿಸುತ್ತದೆ. ಇಲ್ಲಿರುವ ಬೊಂಬೆಗಳು ಬರೀ ಬೊಂಬೆಗಳಾಗಿರದೆ ಮಾತನಾಡುತ್ತಾ ಹೋಗುತ್ತವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅರಮನೆಯ ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿ ಟ್ರಸ್ಟ್ ಆಶ್ರಯದಲ್ಲಿ ಆಂಧ್ರಪ್ರದೇಶದ ಶ್ರೀ ಗಾಯತ್ರಿ ಸೇವಾ ಟ್ರಸ್ಟ್ ಬೃಹತ್ ಬೊಂಬೆ ಪ್ರದರ್ಶನವನ್ನು ಏರ್ಪಡಿಸಿದ್ದು, ಇದು ದಸರಾ ಕಳೆದ ನಂತರವೂ ಅಂದರೆ ನವೆಂಬರ್೧೦ ರವರೆಗೂ ನಡೆಯಲಿದೆ. ಆದರೆ ದಸರಾ ಸಮಯದಲ್ಲಿಯೇ ಈ ಬೊಂಬೆ ಪ್ರದರ್ಶನ ನಡೆಯುತ್ತಿರುವುದು ದಸರಾಕ್ಕೆ ಕಳೆಕಟ್ಟಿದಂತಾಗಿದೆ.

1 ಲಕ್ಷ ಬೊಂಬೆಗಳ ಅಮೂಲ್ಯ ಸಂಗ್ರಹವಿದ್ದು ರಾಮಾಯಣ, ಮಹಾಭಾರತ, ಪೌರಾಣಿಕ ಮತ್ತು ಸಾಮಾಜಿಕ ಕ್ಷೇತ್ರ ಸೇರಿದಂತೆ ಸುಮಾರು ೪೦ ವಿಚಾರಗಳಿಗೆ ಸಂಬಂಧಿಸಿದಂತೆ ಬೊಂಬೆಗಳನ್ನು ಸಂಗ್ರಹಿಸಿಟ್ಟಿರುವುದು ವಿಶೇಷವಾಗಿದೆ. ಬೇರೆ ರಾಜ್ಯಗಳ ಗೊಂಬೆಗಳೂ ಇವೆ. ಸಾಮಾನ್ಯವಾಗಿ ಬೊಂಬೆ ಪ್ರದರ್ಶನ ಎಂದರೆ ಬರೀ ಬೊಂಬೆಗಳು ಇರುತ್ತವೆ. ಆದರೆ ವಿಚಾರ, ವಿಷಯಗಳಿಗೆ ತಕ್ಕಂತೆ ಬೊಂಬೆಗಳು ಇರುವುದು ಅಪರೂಪ.

ಆದರೆ ಇಲ್ಲಿ ಹಾಗಿಲ್ಲ. ಪೌರಾಣಿಕ ಪಾತ್ರಗಳಾದ ಮಹೇಶ್ವರಿ, ವೈಷ್ಣವಿ, ಚಾಮುಂಡಿ, ರುದ್ರಿ, ಸರಸ್ವತಿ, ಕೃಷ್ಣ, ಕೃಷ್ಣ ಬಲರಾಮ, ಅರ್ಜುನಂ, ಕೃಷ್ಣಾರ್ಜುನ, ಆಂಜನೇಯ, ಹಣ್ಣು ತರಕಾರಿ, ರಾಮ ಲಕ್ಷ್ಮಣ, ದೋಣಿ, ಹತ್ತು ತಲೆಯ ರಾವಣ, ಹಸು, ಶಿವ ಪಾರ್ವತಿ, ಕುಂಭಕರ್ಣ ಮೊದಲಾದ ಬೊಂಬೆಗಳಿದ್ದು ಇವುಗಳ ಜೋಡಣೆ ಚಾರಿತ್ರಿಕ, ಐತಿಹಾಸಿಕ, ಪುರಾಣ, ಇತಿಹಾಸ, ಸಂಸ್ಕೃತಿಯನ್ನು ಬಿಂಬಿಸುತ್ತಾ ಆಯಾ ವಿಚಾರಗಳನ್ನು ತೆರೆದಿಡುತ್ತವೆ. ಈ ಬೊಂಬೆಗಳ ಸಂಗ್ರಹದಲ್ಲಿ ಆಂಧ್ರಪ್ರದೇಶ, ಮಧ್ಯಪ್ರದೇಶ, ಒರಿಸ್ಸಾ, ಕರ್ನಾಟಕ ರಾಜ್ಯಗಳ ಬೊಂಬೆಗಳಿವೆ.

ಇಷ್ಟಕ್ಕೂ ಮೈಸೂರಿನಲ್ಲಿ ಇಂತಹವೊಂದು ಪ್ರದರ್ಶನ ಏರ್ಪಡಿಸುವ ಮೂಲಕ ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿ ಟ್ರಸ್ಟ್ ಕಲೆ, ಸಂಸ್ಕೃತಿ, ಪರಂಪರೆ ಉಳಿಸುವ ನಿಟ್ಟಿನಲ್ಲಿ ಶ್ರಮವಹಿಸಿರುವುದು ನಿಜಕ್ಕೂ ಶ್ಲಾಘನೀಯ ವಿಚಾರವಾಗಿದೆ. ಮೈಸೂರಿಗೆ ಆಗಮಿಸುವ ಪ್ರವಾಸಿಗರು ನಗರ ಪ್ರದಕ್ಷಿಣೆ ಮಾಡುವ ವೇಳೆ ಬೊಂಬೆಗಳ ಪ್ರದರ್ಶನ ನಡೆಯುತ್ತಿರುವ ಜಗನ್ಮೋಹನ ಅರಮನೆಯತ್ತ ಹೆಜ್ಜೆ ಹಾಕಿದರೆ ಪ್ರದರ್ಶನ ಆಯೋಜಿಸಿದಕ್ಕೆ ಸಾರ್ಥಕವಾಗುತ್ತದೆ.