ಬಸ್ಸಿನಲ್ಲಿ ಮಹಿಳಾ ಪ್ರಯಾಣಿಕೆಗೆ ನಿರ್ವಾಹಕನಿಂದ ನಿಂದನೆ ಆರೋಪ ; ಬಸ್ ಕಂಡಕ್ಟರ್, ಡ್ರೈವರ್ ವಿರುದ್ಧ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು – ಕಹಳೆ ನ್ಯೂಸ್
ಮಂಗಳೂರು : ನಗರದ ಖಾಸಗಿ ಬಸ್ಸೊಂದರಲ್ಲಿ ಪ್ರಯಾಣಿಕರೊಬ್ಬರನ್ನು ನಿರ್ವಾಹಕ ನಿಂದಿಸಿರುವ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೇರಳಕಟ್ಟೆ ಸಮೀಪದ ಜಲಾಲ್‌ಬಾಗ್ ನಿವಾಸಿಯಾಗಿರುವ ಕೆ.ಮುಫೀದಾ ರಹ್ಮಾನ್ ಅವರು ವಕೀಲೆಯಾಗಿದ್ದು, ಸೋಮವಾರ ಖಾಸಗಿ ಬಸ್ಸಿಗೆ ಹತ್ತುವ ವೇಳೆ ಚಾಲಕನು ಅಜಾಗರೂಕತೆಯಿಂದ ಮುಂದಕ್ಕೆ ಚಲಾಯಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇನ್ನು ತಾನು ಬಸ್ಸಿಗೆ ಹತ್ತುವಾಗ ಚಾಲಕನು ದುಡುಕಿನಿಂದ ಮುಂದಕ್ಕೆ ಚಲಾಯಿಸಿದ. ಈ ವೇಳೆ ಕೆಳಗೆ ಬೀಳುವಂತಾಗಿ ಬೊಬ್ಬೆ ಹಾಕಿದೆ. ಆದರೂ ಚಾಲಕ ಬಸ್ಸನ್ನು ನಿಲ್ಲಿಸಲಿಲ್ಲ. ಈ ವೇಳೆ ಬಸ್ ಕಂಡೆಕ್ಟರ್ ನನ್ನ ಕೈ ಹಿಡಿದೆಳೆದು ನಿಮಗೆ ಬೇಗ ಬಸ್ಸಿಗೆ ಹತ್ತಲು ಆಗುವುದಿಲ್ಲವಾ? ಬಿದ್ದು ಸಾಯುತ್ತೀಯಾ? ಎಂದು ಬೈದಿದ್ದಾನೆ.
ಇದಕ್ಕೆ ನಾನು ಪ್ರತಿರೋಧ ತೋರಿದಾಗ ನಾನು ಬಸ್ಸಿನಿಂದ ಇಳಿಯುವವರೆಗೆ ನನಗೆ ಅವಾಚ್ಯ ಶಬ್ದದಿಂದ ಬೈದು ಸಾರ್ವಜನಿಕರ ಮುಂದೆ ಮಾನಹಾನಿಗೊಳಿಸಿದ್ದಾನೆ ಎಂದು ವಕೀಲೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರಿನ ಆಧಾರದಲ್ಲಿ ಬಸ್ ಚಾಲಕ ಮತ್ತು ಕಂಡಕ್ಟರ್ ವಿರುದ್ಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.