ಪದವಿ ತರಗತಿಯ ಬೋಧನಾ ವಿಷಯಗಳ ಗೊಂದಲವನ್ನು ಸರಿಪಡಿಸುವಂತೆ ಕುಲಪತಿಗಳಿಗೆ ಮನವಿ ಸಲ್ಲಿಸಿದ ಮ.ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಎಸ್ ಆರ್ ಹರೀಶ್ ಆಚಾರ್ಯ – ಕಹಳೆ ನ್ಯೂಸ್
ಮಂಗಳೂರು : ವಿಶ್ವವಿದ್ಯಾನಿಲಯದ ಪದವಿ ಕಾಲೇಜುಗಳಲ್ಲಿ ತರಗತಿಗಳು ಪ್ರಾರಂಭವಾಗಿ ಸುಮಾರು 45 ದಿನಗಳ ನಂತರ ಪಠ್ಯಕ್ರಮದ ವಿಷಯಗಳ ಬಗ್ಗೆ ಗೊಂದಲ ಪ್ರಾರಂಭವಾಗಿದೆ. ಇದರಿಂದ ಇದುವರೆಗೆ ತರಗತಿಗಳನ್ನು ಕೇಳಿಸಿಕೊಂಡ ವಿದ್ಯಾರ್ಥಿಗಳು ಮತ್ತು ಬೋಧನಾ ಕಾರ್ಯವನ್ನು ಮಾಡಿದ ಅಧ್ಯಾಪಕರು ಗೊಂದಲಕ್ಕೀಡಾಗಿದ್ದಾರೆ. ಅಧ್ಯಾಪಕರು ಮತ್ತೊಮ್ಮೆ ಬೇರೆಯೇ ಪಠ್ಯದ ವಿಷಯವನ್ನು ಬೋಧಿಸಬೇಕಾದ ಅನಿವಾರ್ಯತೆಗೆ ಮತ್ತು ವಿದ್ಯಾರ್ಥಿಗಳು ಬೇರೆ ಪಠ್ಯದ ವಿಷಯವನ್ನು ಮತ್ತೆ ಅಭ್ಯಾಸ ಮಾಡುವ ಆತಂಕಕ್ಕೆ ಒಳಗಾಗಿದ್ದು, ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಮೂಡಿರುವ ಈ ರೀತಿಯ ಗೊಂದಲಗಳಿಂದ ಶೈಕ್ಷಣಿಕ ವಾತಾವರಣವು ಹಾಳಾಗುವುದು ಮಾತ್ರವಲ್ಲದೇ ವಿಶ್ವವಿದ್ಯಾನಿಲಯದ ಘನತೆಗೂ ಕುಂದುಂಟಾಗುತ್ತದೆ. ಆದುದರಿಂದ ಈ ಗೊಂದಲವನ್ನು ಮಂಗಳೂರು ವಿಶ್ವವಿದ್ಯಾನಿಲಯವು ತಕ್ಷಣವೇ ಸರಿಪಡಿಸಬೇಕೆಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯರಾದ ಎಸ್ ಆರ್ ಹರೀಶ್ ಆಚಾರ್ಯರವರು ಮನವಿ ಮಾಡಿಕೊಂಡಿದ್ದಾರೆ.
ಪದವಿ ಕಾಲೇಜುಗಳ ಬಿಎ ತರಗತಿಯ 5ನೇ ಸೆಮಿಸ್ಟರ್ ನ ಆಯ್ಕೆಯ ವಿಷಯಗಳಲ್ಲಿ ಹ್ಯೂಮನ್ ರಿಸೋರ್ಸ್ ಡೆವಲಪ್ಮೆಂಟ್ ಅಂಡ್ ಮ್ಯಾನೇಜ್ಮೆಂಟ್ (HRDM) ಅಥವಾ ಫೈನಾನ್ಸಿಯಲ್ ಬ್ಯಾಂಕಿಂಗ್ (Financial Banking) ಆಯ್ಕೆಯ ವಿಷಯಗಳಲ್ಲಿ ಹ್ಯೂಮನ್ ರಿಸೋರ್ಸ್ ಡೆವಲಪ್ಮೆಂಟ್ ಅಂಡ್ ಮ್ಯಾನೇಜ್ಮೆಂಟ್ (HRDM) ವಿಷಯವನ್ನು ಆಯ್ಕೆ ಮಾಡಿಕೊಂಡು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಇದರ ಬದಲು ಬೇರೆ ವಿಷಯವನ್ನು ಅಧ್ಯಯನ ಮಾಡಬೇಕಾಗಿ ಬಂದಿದೆ. ಬೋಧನಾ ಕಾರ್ಯವನ್ನು ಮಾಡಿರುವ ಅರ್ಥಶಾಸ್ತ್ರ ಪ್ರಾಧ್ಯಾಪಕರು ಮತ್ತೆ ಬೇರೆ ವಿಷಯವನ್ನು ಅಧ್ಯಾಪನ ಮಾಡಬೇಕಾಗಿದೆ.
ಹಾಗೆಯೇ ಪದವಿ ತರಗತಿಗಳ ಮೂರನೇ ಸೆಮಿಸ್ಟರ್ ನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (Artificial Intelligence) ಅಥವಾ ಫೈನಾನ್ಸಿಯಲ್ ಎಜುಕೇಶನ್ ಅಂಡ್ ಅವೇರ್ನೆಸ್ (Financial Education and Awarnes) ವಿಷಯಗಳ ಆಯ್ಕೆ ಕಳೆದ ಶೈಕ್ಷಣಿಕ ಸಾಲಿನಲ್ಲಿ ಇತ್ತು. ಈ ಶೈಕ್ಷಣಿಕ ಸಾಲಿನಲ್ಲಿಯೂ ಅದು ಮುಂದುವರಿದು ವಿದ್ಯಾರ್ಥಿಗಳು ಅವರ ಆಯ್ಕೆಯ ವಿಷಯವನ್ನು ಅಧ್ಯಯನ ಮಾಡಿದ್ದರು. ಮತ್ತು ಅದಕ್ಕೆ ಸಂಬಂಧಿಸಿದ ಅಧ್ಯಾಪಕರು ಬೋಧನಾ ಕಾರ್ಯವನ್ನು ಕೂಡ ಮಾಡಿದ್ದರು. ಆದರೆ ಈಗ ಶೈಕ್ಷಣಿಕ ವರ್ಷದ ಮಧ್ಯ ಭಾಗದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (Artificial Intelligence) ವಿಷಯವನ್ನು ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳು ತೊಂದರೆಗೀಡಾಗುತ್ತಿದ್ದಾರೆ. ವಿಶ್ವವಿದ್ಯಾನಿಲಯವು ಈಗ ಶೈಕ್ಷಣಿಕ ವರ್ಷದ ಮಧ್ಯ ಭಾಗದಲ್ಲಿ ಮೂರನೇ ಸೆಮಿಸ್ಟರ್ ನ ಆಯ್ಕೆಯ ವಿಷಯವನ್ನು ಫೈನಾನ್ಸಿಯಲ್ ಎಜುಕೇಶನ್ ಅಂಡ್ ಇನ್ವೆಸ್ಟ್ಮೆಂಟ್ ಅವೆರ್ನೆಸ್ (Financial Education and Awarnes)/ ಸೈಬರ್ ಸೆಕ್ಯೂರಿಟಿ (Cyber Security) ಎಂದು ಬದಲಾವಣೆ ಮಾಡುತ್ತಿರುವುದರಿಂದ ಸಹಜವಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (Artificial Intelligence) ವಿಷಯವನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಮತ್ತು ಬೋಧನಾ ಕಾರ್ಯವನ್ನು ಮಾಡಿರುವ ಅಧ್ಯಾಪಕರು ಆತಂಕಿತರಾಗಿದ್ದಾರೆ.
ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಭೋದನಾ ವಿಷಯಗಳ ಆಯ್ಕೆಯಲ್ಲಿ ಉಂಟಾಗುವ ಈ ರೀತಿಯ ಗೊಂದಲಗಳಿಂದ ಸಹಜವಾಗಿ ಶೈಕ್ಷಣಿಕ ವಾತಾವರಣವು ಹಾಳಾಗುತ್ತದೆ. ವಿದ್ಯಾರ್ಥಿಗಳು, ಪೆÇೀಷಕರು ಮತ್ತು ಸಾರ್ವಜನಿಕರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಶೈಕ್ಷಣಿಕ ಗುಣಮಟ್ಟದ ಬಗ್ಗೆ ಪ್ರಶ್ನೆಗಳು ಪ್ರಾರಂಭವಾಗುತ್ತದೆ. ಹಾಗೆಯೇ ಬೋಧನಾ ಕಾರ್ಯವನ್ನು ಕೈಗೊಂಡಿರುವ ಅಧ್ಯಾಪಕರು ತಮ್ಮದಲ್ಲದ ತಪ್ಪಿಗೆ ವಿದ್ಯಾರ್ಥಿಗಳ ಮುಂದೆ ತಪ್ಪಿತಸ್ಥರ ರೀತಿಯಲ್ಲಿ ಕೈಕಟ್ಟಿ ನಿಲ್ಲಬೇಕಾಗುತ್ತದೆ. ಆದುದರಿಂದ ಮಂಗಳೂರು ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳ ಶೈಕ್ಷಣಿಕ ಹಿತ ದೃಷ್ಟಿಯನ್ನು ಮುಂದಿಟ್ಟುಕೊಂಡು ಈ ಗೊಂದಲವನ್ನು ತಕ್ಷಣವೇ ಸರಿಪಡಿಸಬೇಕೆಂದು ಒತ್ತಾಯಿಸಿದರು.