ಹೊಸದಿಲ್ಲಿ: ಗಂಗಾ ನದಿಯ ಉಳಿವಿಗಾಗಿ ಜೂನ್ 22ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸ್ವಾಮಿ ಜ್ಞಾನ ಸ್ವರೂಪ ಸಾನಂದ್ ಎಂದೇ ಹೆಸರುವಾಸಿಯಾಗಿದ್ದ ಐಐಟಿ ಮಾಜಿ ಪ್ರಾಧ್ಯಾಪಕ ಜಿ.ಡಿ.ಅಗರ್ವಾಲ್ (87) ಹೃಷಿಕೇಶದ ಏಮ್ಸ್ ಆಸ್ಪತ್ರೆಯಲ್ಲಿ ಗುರುವಾರ ಮೃತಪಟ್ಟಿದ್ದಾರೆ.
ಐಐಟಿ ಕಾನ್ಪುರದಲ್ಲಿ ಪ್ರೊಫೆಸರ್ ಆಗಿ ಹಾಗೂ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದ ಅಗರ್ವಾಲ್ ಅಪ್ಪಟ ಪರಿಸರವಾದಿಯಾಗಿ ತಮ್ಮ ಬದುಕನ್ನು ಗಂಗಾ ನದಿಯ ಉಳಿವಿನ ಹೋರಾಟಕ್ಕೆ ಮುಡುಪಾಗಿಟ್ಟಿದ್ದರು. ಅಭಿವೃದ್ಧಿಯ ಹೆಸರಿನಲ್ಲಿ ಗಂಗಾ ನದಿ ತೀರದ ಪ್ರದೇಶಗಳಲ್ಲಿ ಬೇಕಾಬಿಟ್ಟಿಯಾಗಿ ಅಣೆಕಟ್ಟೆ, ಬ್ಯಾರೇಜ್, ಸುರಂಗಗಳನ್ನು ನಿರ್ಮಿಸುವುದರಿಂದ ನದಿಯ ಸರಾಗ ಹರಿವಿಗೆ ಧಕ್ಕೆಯಾಗಿ ಪರಿಸರ ಅಸಮತೋಲನ ಸೃಷ್ಟಿಯಾಗುತ್ತದೆ.
ಈ ಕಾಮಗಾರಿಗಳನ್ನು ಕೈಬಿಡುವುದರ ಜತೆಗೆ ಕೈಗಾರಿಕಾ ತ್ಯಾಜ್ಯ ನದಿ ಸೇರುವುದಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿ ಕೇಂದ್ರ ಹಾಗೂ ಉತ್ತರಾಖಂಡ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಜೂನ್‌ನಿಂದ ನಿರಶನ ನಡೆಸುತ್ತಿದ್ದರು. ಮಾತುಕತೆ ವಿಫಲಗೊಂಡಿದ್ದರಿಂದ ಅ. 9ರಂದು ನೀರು ಕುಡಿಯುವುದನ್ನೂ ನಿಲ್ಲಿಸಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.