ಮಂಗಳೂರು: ಸಚಿವ ಝಮೀರ್ ಅಹ್ಮದ್ ಮಂಗಳೂರಿಗೆ ಭೇಟಿ ನೀಡಿ ಉಚಿತ ಯಾತ್ರೆ ಕೈಗೊಳ್ಳುವ ಆಫರ್ ನೀಡಿದ ಘಟನೆ ನಡೆಯಿತು. ಖಾಸಗಿ ಕಾರ್ಯಕ್ರಮದ ನಿಮಿತ್ತ ಮಂಗಳೂರಿಗೆ ಭೇಟಿ ನೀಡಿದ್ದ ಸಚಿವ ಝಮೀರ್ ಮೊದಲು ಮಂಜನಾಡಿ ಮಸೀದಿಗೆ ಭೇಟಿ ನೀಡಿದ್ರು. ನಂತರ ಮುಸ್ಲಿಂ ಧರ್ಮಗುರುಗಳ ಜೊತೆಗೆ ಮಾತನಾಡಿದರು.
ಈ ವೇಳೆ ಹತ್ತು ಮಂದಿ ಮುಸ್ಲಿಂ ಗುರುಗಳಿಗೆ ಉಚಿತ ಹಜ್ ಯಾತ್ರೆ ಆಫರ್ ನೀಡಿದ್ರು. ಇನ್ನು ಜೋಡುಪಾಲದಲ್ಲಿ 200 ಮಂದಿಯನ್ನು ರಕ್ಷಿಸಿದ ನಾಲ್ವರಿಗೆ ದೇವಲಾಯಕ್ಕೆ ಹೋಗಲೆಂದು ತಲಾ 1 ಲಕ್ಷ ವಿತರಿಸಿದ ಘಟನೆಯೂ ನಡೆಯಿತು. ಹಾಗೂ 12 ಮಂದಿ ಯುವಕರಿಗೆ ಉಚಿತ ಉಮ್ರಾ ಯಾತ್ರೆಗೆ ತೆರಳಲು ಅವಕಾಶ ನೀಡಿದರು.
ಮಂಗಳೂರಿನ ಕುಡುಪು ಕರ್ನಾಟಕ ಹೌಸಿಂಗ್ ಬೋರ್ಡ್ ನಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖಾ ಕಚೇರಿಗಳ ಸಂಕೀರ್ಣ ‘ಮಾಪನ ಭವನ’ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮದ ವೇದಿಕೆಯಲ್ಲಿ ಸಚಿವರು ತಲಾ ಒಂದು ಲಕ್ಷ ರೂ. ನಗದನ್ನು ವೇದಿಕೆಯಲ್ಲೇ ವಿತರಿಸಿದರು.
ಈ ವೇಳೆ ಮಾತನಾಡಿದ ಸಚಿವ ಝಮೀರ್ ಅಹ್ಮದ್, ಅವರೆಲ್ಲರೂ ಮಧ್ಯಮ ವರ್ಗದ ಯುವಕರಾಗಿದ್ದು ಪ್ರಾಣ ರಕ್ಷಣೆ ಮಾಡಿದ್ದಾರೆ. ನಾಲ್ವರು ಭಜರಂಗದಳ ಸದಸ್ಯರಾಗಿದ್ದರೂ ಯಾವುದೇ ರೀತಿಯ ತಾರತಮ್ಯ ಮಾಡದೆ ದೇವಸ್ಥಾನಕ್ಕೆ ಹೋಗಲು ಉಡುಗೊರೆಯನ್ನು ನೀಡುತ್ತಿದ್ದೇನೆ ಎಂದು ಹೇಳಿದರು.