ಕಳೆಂಜ ಶ್ರೀವಿಷ್ಣುಮೂರ್ತಿ ದೇವರ ಆಭರಣ ಕಳವು : ಕಳ್ಳರ ನೀಚ ಕೃತ್ಯದಿಂದಾಗಿ ನವರಾತ್ರಿ ಪೂಜೆಗೆ ಬರಿದಾದ ‘ದೇವರ ಮೂರ್ತಿ’ : ಭಕ್ತರಲ್ಲಿ ಬೇಸರ – ಕಹಳೆ ನ್ಯೂಸ್
ಪೆರ್ನೆಯ ಕಳೆಂಜ- ದೇಂತಡ್ಕದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ದೇವರಿಗೆ ಸಮರ್ಪಿಸಲಾದ ಚಿನ್ನಾಭರಣಗಳು ನಾಪತ್ತೆಯಾಗಿದ್ದು ಈ ಬಗ್ಗೆ ದೇವಾಲಯದ ಮಾಜಿ ಕಾರ್ಯದರ್ಶಿ ಗೋಪಾಲ ಶೆಟ್ಟಿ ಎನ್. ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಕಳೆದ ಡಿಸೆಂಬರ್ ನಲ್ಲಿ ದೇವಾಲಯದ ಬ್ರಹ್ಮಕಲಶಾಭಿಷೇಕ ನಡೆದಿದ್ದು, ಈ ವೇಳೆ ಭಕ್ತಾರೊಬ್ಬರು ಸುಮಾರು ಮೂರು ಮುಕ್ಕಾಲು ಪವನಿನ ಐದು ಎಳೆಗಳಿಂದ ಕೂಡಿದ ಚಿನ್ನದ ಜೋಮಾಲೆಯನ್ನು ಶ್ರೀ ದೇವರಿಗೆ ಸಮರ್ಪಿಸಿದ್ದರು. ಈ ಜೋಮಾಲೆ ಹಾಗೂ ಎರಡು ಪವನಿನ ಇನ್ನೊಂದು ಚಿನ್ನದ ಸರವೂ ನಾಪತ್ತೆಯಾಗಿರುವುದು ಅ.೧೫ರಂದು ಬೆಳಕಿಗೆ ಬಂದಿದೆ.
ಸರಕಾರ ದೇವಾಲಯಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿದ್ದು, ಅಧಿಕಾರ ಸ್ವೀಕರಿಸಿದ ಅವರು ಅ.೧೫ರಂದು ಭಕ್ತಾದಿಗಳ ಸಮ್ಮುಖದಲ್ಲಿ ಮಹಜರು ನಡೆಸಿದಾಗ ಚಿನ್ನದ ಸರಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿವೆ. ಈ ಕುರಿತು ಪೊಲೀಸ್ ದೂರು ನೀಡಿರುವ ದೇವಾಲಯದ ಮಾಜಿ ಕಾರ್ಯದರ್ಶಿ ಗೋಪಾಲ ಶೆಟ್ಟಿ, ಕಬ್ಬಿಣದ ಕಪಾಟನ್ನು ದೇವಾಲಯದ ಕಾರ್ಯಾಲಯದಿಂದ ಕಳವುಗೈದು ಅದನ್ನು ಒಡೆದು ಅದರಲ್ಲಿದ್ದ ದಾಖಲೆಪತ್ರಗಳನ್ನು ನಾಶ ಮಾಡಲಾಗಿದೆ. ಆ ಖಾಲಿ ಕಪಾಟು ಭದ್ರತಾ ಕೊಠಡಿಯಲ್ಲಿರುವುದು ಇಂದು ಕಂಡು ಬಂದಿದೆ. ಭದ್ರತಾ ಕೊಠಡಿಯ ಕೀಲಿಕೈಯನ್ನು ಅನಧಿಕೃತವಾಗಿ ಹುಟ್ಟು ಹಾಕಿದ ಖಾಸಗಿ ಟ್ರಸ್ಟ್ ಮತ್ತು ಅದಕ್ಕೆ ಪೂರಕವಾದ ಸಮಿತಿಗೆ ದೇವಾಲಯದ ಮಾಜಿ ಅಧ್ಯಕ್ಷ ರೋಹಿತಾಕ್ಷ ಬಾಣಬೆಟ್ಟು, ಟಸ್ಟ್ ಅಧ್ಯಕ್ಷ ಭರತ್ ಕುಮಾರ್ ಆರಿಗ ಪಟ್ಟೆಗುತ್ತು, ಪಡ್ನೂರು ಗ್ರಾಮದ ಅವಿನಾಶ್ ಜೈನ್ ಪರಂಗಾಜೆ ಹಾಗೂ ಇದಕ್ಕೆ ಪೂರಕವಾದ ಸಮಿತಿಯ ಸದಸ್ಯರು ಇದಕ್ಕೆ ಕಾರಣಕರ್ತರಾಗಿದ್ದು, ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರತಿ ವರ್ಷ ನವರಾತ್ರಿ ವಿಜೃಂಭನೆಯಿAದ ನಡೆಯುತ್ತಿದ್ದು, ಈ ವರ್ಷ ದೇವಾಲಯದಲ್ಲಿ ಹಲವಾರು ಗೊಂದಲಗಳು ಉಂಟಾಗಿದ್ದು, ಇದೀಗ ಆಭರಣವೂ ಕಳವಾದ ಹಿನ್ನಲೆಯಲ್ಲಿ ಶ್ರೀ ವಿಷ್ಣುಮೂರ್ತಿ ದೇವರ ಮೂರ್ತಿಯಲ್ಲಿ ಯಾವುದೇ ಆಭರಣ ಇಲ್ಲವಾಗಿದೆ. ಆಭರಣವಿಲ್ಲದೆ ಕೇವಲ ಹೂವಿನಿಂದ ದೇವರ ಅಲಂಕಾರವನ್ನ ಮಾಡಲಾಗಿದ್ದು ಭಕ್ತರಲ್ಲಿ ಬೇಸರ ಉಂಟಾಗಿದೆ.