ಮೂಡುಬಿದಿರೆ: ‘ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಸೇವಾ ಮನೋಭಾವವನ್ನು ಬೆಳೆಸುತ್ತದೆ’ ಎಂದು ಮಾಜಿ ಸಚಿವರಾದ ಶಾಸಕ ಸುನಿಲ್ ಕುಮಾರ್ ಹೇಳಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಇರ್ವತ್ತೂರು ಕೊಳಕೆ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾದ ‘ಸ್ವಚ್ಛ ಪರಿಸರ ಮತ್ತು ಸ್ವಚ್ಛ ಸಮಾಜಕ್ಕಾಗಿ ಯುವಜನತೆ- ವಾರ್ಷಿಕ ವಿಶೇಷ ಶಿಬಿರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಪಠ್ಯ ಪುಸ್ತಕದಲ್ಲಿ ಕಲಿಯದ ಹಲವಾರು ಬದುಕಿನ ವಿಷಯಗಳು ಎನ್‌ಎಸ್‌ಎಸ್‌ನಲ್ಲಿ ಕಲಿಯಲು ಸಿಗುತ್ತವೆ. ಜೀವನಕ್ಕೆ ಒಳ್ಳೆಯ ಪಾಠ ನೀಡುತ್ತದೆ. ದೈಹಿಕ ಹಾಗೂ ಮನೋವಿಕಾಸಕ್ಕೆ ಪೂರಕವಾಗಿದೆ’ ಎಂದರು.
ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಮೊಹಮ್ಮದ್ ಸದಾಕತ್ ಮಾತನಾಡಿ, ‘ಫಲಾಪೇಕ್ಷೆ ಇಲ್ಲದ ಸೇವೆ, ಸಹಬಾಳ್ವೆಯನ್ನು ಎನ್‌ಎಸ್‌ಎಸ್ ಕಲಿಸುತ್ತದೆ. ವಿದ್ಯಾರ್ಥಿಗಳು ಶಿಸ್ತು, ಸಮಯ ಪಾಲನೆಯನ್ನು ರೂಢಿಸಿಕೊಳ್ಳಲು ಎನ್‌ಎಸ್‌ಎಸ್ ಸಹಕಾರಿಯಾಗಿದೆ’ ಎಂದರು.
ಇರ್ವತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭರತ್ ಕುಮಾರ್ ಜೈನ್, ಉಪಾಧ್ಯಕ್ಷೆ ದೀಪಾ ಶ್ರೀನಾಥ್ ಪೂಜಾರಿ, ಸದಸ್ಯ ಶರತ್ ಅಂಚನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ ಎಸ್. ವಾರ್ತಿ, ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲೆ ಝಾನ್ಸಿ ಪಿ. ಎನ್, ಕಾಲೇಜಿನ ವಾಣಿಜ್ಯ ವಿಭಾಗದ ಪ್ರಶಾಂತ್ ಎಂ. ಡಿ., ಕೊಳಕೆಮನೆ ಜಯ ಕೀರ್ತಿ ಕಡಂಬ, ಸಂಸ್ಕೃತ ವಿಭಾಗದ ಮುಖ್ಯಸ್ಥ ಅಂಬರೀಶ್ ಚಿಪಳೂಣಕರ್, ಎನ್‌ಎಸ್‌ಎಸ್ ಸಂಯೋಜಕ ಮತ್ತು ಶಿಬಿರಾಧಿಕಾರಿ ಅರುಣ್ ಒ. ಆರ್. ಸ್ವಾಗತಿಸಿದರು. ಸಂಖ್ಯಾಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ಯಾಲೆಟ್ ಮೋನಿಸ್ ಕಾರ್ಯಕ್ರಮ ನಿರ್ವಹಿಸಿದರು, ವಾಣಿಜ್ಯ ವಿಭಾಗದ ಉಪನ್ಯಾಸಕಿ ಮೇಘನಾ ವಂದಿಸಿದರು.