Tuesday, November 26, 2024
ಸುದ್ದಿ

“ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ರಸ್ತೆ ಬದಿಯಲ್ಲಿ ಬೊಬ್ಬೆ ಹೊಡೆಯುವ ಬದಲು ತನಿಖೆಗೆ ಒತ್ತು ನೀಡಿ” : ಕುಯಿಲಾಡಿ ಸುರೇಶ್ ನಾಯಕ್ – ಕಹಳೆ ನ್ಯೂಸ್

ಉಡುಪಿ : ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯ, ಕಮಿಷನ್ ದಂಧೆ, ಭ್ರಷ್ಟಾಚಾರದಿಂದ ಜನತೆಯ ಗಮನವನ್ನು ಬೇರೆಡೆಗೆ ಕೇಂದ್ರೀಕರಿಸಲು ಕಾಂಗ್ರೆಸಿಗರು ಹಾದಿ ಬೀದಿಗಳಲ್ಲಿ ಬೊಬ್ಬೆ ಹೊಡೆಯುವ ಬದಲು ಅಗತ್ಯ ವಿಚಾರಗಳ ಬಗ್ಗೆ ಸೂಕ್ತ ತನಿಖೆ ನಡೆಸಲು ಒತ್ತು ನೀಡುವುದು ಉತ್ತಮ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಪ್ರಸಕ್ತ ಕಾಂಗ್ರೆಸ್ ನೇತೃತ್ವದ ಸರಕಾರ ಚಾಲ್ತಿಯಲ್ಲಿದೆ. ತನಿಖಾ ಸಂಸ್ಥೆಗಳು ಸರಕಾರದ ಅಧೀನದಲ್ಲಿದೆ. ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಅಥವಾ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ಕಾಂಗ್ರೆಸಿಗರಿಗೆ ಏನಾದರೂ ಸಂಶಯಗಳಿದಲ್ಲಿ ಸಂಬಂಧಪಟ್ಟ ಇಲಾಖೆ ಮೂಲಕ ನ್ಯಾಯಯುತ ತನಿಖೆ ನಡೆಸಲು ಅವಕಾಶವಿದೆ. ಹುರುಳಿಲ್ಲದ ವಿಚಾರಗಳನ್ನು ವೈಭವೀಕರಿಸಿ ಅಸಂಬದ್ಧ ಪ್ರತಿಭಟನೆ ಮೂಲಕ ಪುಕ್ಕಟೆ ಪ್ರಚಾರ ಪಡೆಯುವ ಕಾಂಗ್ರೆಸ್ಸಿನ ಹುನ್ನಾರಕ್ಕೆ ಜನತೆ ಬೆಲೆ ನೀಡಲಾರರು ಎಂದು ಅವರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಬಗ್ಗೆ ಕಾರ್ಕಳದ ಶಾಸಕರು ಈಗಾಗಲೇ ಸೂಕ್ತ ಸ್ಪಷ್ಟೀಕರಣವನ್ನು ನೀಡಿದ್ದಾರೆ. ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ವ್ಯವಸ್ಥೆಗಳ ಬಗ್ಗೆಯೂ ಆಡಳಿತ ಮಂಡಳಿಯ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ. ಸರಕಾರದ ಆಡಳಿತ ವ್ಯವಸ್ಥೆಯಲ್ಲಿರುವ ನಿರ್ಮಿತಿ ಕೇಂದ್ರ, ಥೀಮ್ ಪಾರ್ಕ್ ಕಾಮಗಾರಿಯ ಗುತ್ತಿಗೆದಾರರಾಗಿ ಜವಾಬ್ದಾರಿ ನಿರ್ವಹಿಸುತ್ತಿದೆ. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಕೂಡಾ ಸರಕಾರದ ಆಧೀನಕ್ಕೆ ಒಳಪಟ್ಟಿರುವ ಸ್ವಾಯತ್ತ ಸಂಸ್ಥೆಯಾಗಿದ್ದು, ಬಿಜೆಪಿಗೆ ಸಂಬಂಧಪಟ್ಟಿರುವುದಿಲ್ಲ. ಈ ವಾಸ್ತವ ವಿಚಾರಗಳ ಬಗ್ಗೆ ಅರಿವಿದ್ದರೂ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಪ್ರತಿಭಟಿಸಲು ಯಾವುದೇ ನೈಜ ವಿಚಾರಗಳಿಲ್ಲದೇ ತಮ್ಮ ಪಕ್ಷದ ಸರಕಾರದ ಹುಳುಕುಗಳನ್ನು ಮುಚ್ಚಿಡಲು ಹರಸಾಹಸ ಪಡುತ್ತಿರುವುದು ಶೋಚನೀಯ.

ಜಾಹೀರಾತು
ಜಾಹೀರಾತು
ಜಾಹೀರಾತು

ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರು ಕಾಂಗ್ರೆಸ್. ಈ ಹಿಂದೆ ಬಿಜೆಪಿ ವಿರುದ್ಧ 40% ಸರಕಾರ, ಪೇ ಸಿಎಂ ಮುಂತಾದ ಶುದ್ಧ ಸುಳ್ಳಿನ ಅಭಿಯಾನಗಳನ್ನು ನಡೆಸಿದ್ದ ಕಾಂಗ್ರೆಸ್, ಇಂದು ತಾನೇ ತೋಡಿದ ಖೆಡ್ಡಾಕ್ಕೆ ಬಿದ್ದು ಒದ್ದಾಡುತ್ತಿದೆ. ಪ್ರತಿಯೊಂದು ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇತ್ತೀಚೆಗೆ ನಡೆದ ಐಟಿ ದಾಳಿಯಲ್ಲಿ ಗುತ್ತಿಗೆದಾರರಿಂದ ಕಾಂಗ್ರೆಸ್ ಸರಕಾರ ಸಂಗ್ರಹಿಸಿದ ನೂರಾರು ಕೋಟಿ ರೂಪಾಯಿಗಳ ಕಮಿಷನ್ ಹಣವನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿರುವುದು ಕಾಂಗ್ರೆಸ್ ಯಾವ ಮಟ್ಟದಲ್ಲಿ ರಾಜ್ಯದ ಲೂಟಿಯಲ್ಲಿ ತೊಡಗಿಸಿಕೊಂಡು ಕರ್ನಾಟಕವನ್ನು ಹಣದ ಎಟಿಎಮ್ ಮಾಡಿಕೊಂಡಿದೆ ಎಂಬುದು ಬಟ್ಟಾಬಯಲಾಗಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಚಿಕ್ಕಾಸೂ ಬಿಡುಗಡೆ ಮಾಡದೆ, ಜನಪರ ಯೋಜನೆಗಳಿಗೆ ಒತ್ತು ನೀಡದೇ, ಜನಹಿತ ಮರೆತು ಜನವಿರೋಧಿ ನೀತಿಯನ್ನು ಅನುಸರಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಜನತೆ ಸೂಕ್ತ ಸಮಯದಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.