JDS ಪಕ್ಷದಿಂದ ಸಿ.ಎಂ.ಇಬ್ರಾಹಿಂ ಉಚ್ಛಾಟನೆ ; ಎಚ್ ಡಿ ಕುಮಾರಸ್ವಾಮಿಗೆ ರಾಜ್ಯಾಧ್ಯಕ್ಷ ಪಟ್ಟ – ಕಹಳೆ ನ್ಯೂಸ್
ಬೆಂಗಳೂರು: ಬಿಜೆಪಿ ಜತೆಗೆ ಜೆಡಿಎಸ್ ಮೈತ್ರಿ ಘೋಷಣೆಯ ಬಳಿಕ ಪಕ್ಷದ ವರಿಷ್ಠರ ವಿರುದ್ಧ ಮುನಿಸಿಕೊಂಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರನ್ನು ಇದೀಗ ಪಕ್ಷದಿಂದಲೇ ಉಚ್ಛಾಟಿಸಲಾಗಿದೆ. ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್ ಡಿ ದೇವೇಗೌಡ ಅವರು ಈ ಬಗ್ಗೆ ಹೇಳಿದ್ದಾರೆ.
ಜೆಡಿಎಸ್- ಬಿಜೆಪಿ ಮೈತ್ರಿ ಬಳಿಕ ಇತ್ತೀಚೆಗೆ ಇಬ್ರಾಹಿಂ ಅವರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ನಮ್ಮದೇ ಒರಿಜಿನಲ್ ಜೆಡಿಎಸ್, ಕುಮಾರಸ್ವಾಮಿ ಮಾಡಿದ ಮೈತ್ರಿಗೆ ಒಪ್ಪಿಗೆಯಿಲ್ಲ ಎಂದಿದ್ದರು.
ನಗರದ ಜೆಪಿ ಭವನದಲ್ಲಿ ನಡೆದ ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೋರ್ ಕಮಿಟಿ ಸಭೆ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಹಿಂದಿನ ಅಧ್ಯಕ್ಷರ ಹೇಳಿಕೆಯನ್ನು ನಾನು ಪ್ರಸ್ತಾಪ ಮಾಡುವುದಿಲ್ಲ. ಅದರ ಅವಶ್ಯಕತೆಯೂ ಇಲ್ಲ, ಜೆಡಿಎಸ್ ಕೋರ್ ಕಮಿಟಿ ಸದಸ್ಯರ ಸಭೆ ಕರೆದು ಚರ್ಚೆ ನಡೆಸಿದ್ದೇವೆ, ಎಲ್ಲರ ಅಭಿಪ್ರಾಯ ಪಡೆದು ಸಿ.ಎಂ.ಇಬ್ರಾಹಿಂ ಉಚ್ಚಾಟಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಕುಮಾರಸ್ವಾಮಿ ರಾಜ್ಯಾಧ್ಯಕ್ಷ: ಸಿಎಂ ಇಬ್ರಾಹಿಂರಿಂದ ತೆರವಾದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್ ಡಿ ಕುಮಾರಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ.