Friday, September 20, 2024
ಸುದ್ದಿ

ಕರಾವಳಿ ದಸರಾದ ಪ್ರಮುಖ ಆಕರ್ಷಣೆ ಹುಲಿ ಕುಣಿತ – ಕಹಳೆ ನ್ಯೂಸ್

ಮಂಗಳೂರು: ನವರಾತ್ರಿ ವೇಳೆ ಕರಾವಳಿ ಜನರಿಗೆ ಥಟ್ಟನೆ ನೆನಪಾಗುವುದು ಹುಲಿ ಡಾನ್ಸ್. ಹುಲಿಯಂತೇ ಕಾಣುವ ವೇಷಧಾರಿಗಳಿಂದ ತಾಸೆಯ ತಾಳಕ್ಕೆ ವಿಶಿಷ್ಟ ನರ್ತನ ಕಂಡು ಬರುತ್ತದೆ. ಕರಾವಳಿಯ ದಸರಾ ಉತ್ಸವ ಮತ್ತು ಮೆರವಣಿಗೆಯಲ್ಲಿ ಈ ಹುಲಿ ಕುಣಿತವೇ ಮುಖ್ಯ ಆಕರ್ಷಣೆಯಾಗಿದ್ದು ಈ ಕುರಿತಾದ ಇಂಟ್ರೆಸ್ಟಿಂಗ್ ರಿಪೋರ್ಟು ಇಲ್ಲಿದೆ.

ದಸರಾ ಬಂದರೆ ಕರಾವಳಿಯಲ್ಲಿ ತಾಸೆಯ ಸದ್ದು ಮೊಳಗಲಾರಂಭಿಸುತ್ತದೆ. ತಾಸೆಯ ಬಡಿತದ ತಾಳಕ್ಕೆ ತಕ್ಕಂತೆ ತುಳುನಾಡಿನ ಪಿಲಿಗಳ ದರ್ಬಾರ್ ಶುರುವಾಗುತ್ತೆ. ಅದರಲ್ಲೂ ಕುದ್ರೋಳಿ ದೇವಾಲಯದಲ್ಲಿ ಮಂಗಳೂರು ದಸರಾ ವೈಭವಕ್ಕೆ ಚಾಲನೆ ದೊರೆಯುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಾಸೆಯ ಪೆಟ್ಟಿಗೆ ಹುಲಿ ವೇಷಧಾರಿಗಳ ನರ್ತನ ಆರಂಭವಾಗುತ್ತದೆ. ಒಂದೊಂದು ತಂಡದಲ್ಲಿ 10ಕ್ಕೂ ಮಿಕ್ಕಿ ಕಲಾವಿದರು ರ‍್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಕರಾವಳಿಯ ದಸರಾ ಉತ್ಸವದಲ್ಲಿ ಹುಲಿವೇಷಗಳಿಗೆ ವಿಶಿಷ್ಟ ಸ್ಥಾನವಿದೆ. ತಾಸೆ, ಡೋಲಿನ ಲಯಕ್ಕೆ ವೇಷಧಾರಿಗಳು ಪ್ರದರ್ಶಿಸುವ ಕಸರತ್ತು, ವರಸೆ ಎಂಥವರನ್ನು ಚಕಿತಗೊಳಿಸುತ್ತದೆ. ಮೈಸೂರಿನಲ್ಲಿ ನಾಡ ದೇವತೆ ಚಾಮುಂಡೇಶ್ವರಿಯನ್ನು ಚಿನ್ನದ ಅಂಬಾರಿಯಲ್ಲಿ ಹೊತ್ತು ಸಾಗುವ ಗಜಪಡೆಗಳನ್ನು ನೋಡುವುದೇ ಚಂದ. ಹಾಗೆಯೇ ಮಂಗಳೂರು ದಸರಾ ಮೆರವಣಿಗೆಯಲ್ಲಿ ಮಂಗಳೂರು ಪಿಲಿ ನಲಿಕೆಯೇ ಸ್ಪೆಷಲ್. ಪಿಲಿ ಅಂದರೆ ತುಳುವಿನಲ್ಲಿ ಹುಲಿ ಎಂದರ್ಥ. ಹುಲಿಯಂತೆ ಮೈಗೆ ಬಣ್ಣಬಳಿದು, ಹುಲಿಯಂತೆ ಹಾವ ಭಾವ ಪ್ರದರ್ಶಿಸುತ್ತಾ ತಾಸೆಯ ತಾಳಕ್ಕೆ ನೃತ್ಯ ಮಾಡುವುದೇ ಹುಲಿನಲಿಕೆ. ದಸರಾ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ದೇವಾಲಯಗಳ ಎದುರು ಈ ಹುಲಿನಲಿಕೆ ತಂಡಗಳ ನೃತ್ಯ ಇದ್ದೇ ಇರುತ್ತದೆ.

ಮಂಗಳೂರಿನ ರಥ ಬೀದಿ ವೆಂಕಟರಮಣ ದೇವಸ್ಥಾನ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ , ಬೋಳಾರ ಮಂಗಳಾದೇವಿ ದೇವಸ್ಥಾನ, ಉರ್ವ ಮಾರಿಗುಡಿ, ಕಟೀಲು ದುರ್ಗಾಪರಮೇಶ್ವರಿ ದೇವಾಲಯಗಳಲ್ಲಿ ಹುಲಿನಲಿಕೆ ತಂಡಗಳು ಆಗಮಿಸಿ ಹುಲಿನೃತ್ಯವನ್ನು ಪ್ರದರ್ಶಿಸುತ್ತೆ. ಹಾಗೇ ಜಿಲ್ಲೆಯ ನಾನಾ ಭಾಗಗಳಲ್ಲಿಯೂ ಸಾಮಾನ್ಯವೆಂಬತೆ ಕಾಣಸಿಗುತ್ತೆ.

ದಸರಾ ಸಂದರ್ಭದಲ್ಲಿ ಎಲ್ಲೆಂದರಲ್ಲಿ ಈ ಪಟ್ಟೆಪಿಲಿ, ಚಿಟ್ಟೆ ಪಿಲಿ, ಪಚ್ಚೆ ಪಿಲಿ, ಅಪ್ಪೆ ಪಿಲಿ, ಕಪ್ಪು ಪಿಲಿ, ಬೊಲ್ದು ಪಿಲಿ, ಹೀಗೆ ನಾನಾ ರೀತಿಯ ಹುಲಿಗಳು ಮತ್ತೆ ಮತ್ತೆ ಎದುರಾಗುತ್ತವೆ. ತಮ್ಮ ವಿಭಿನ ಕಸರತ್ತುಗಳಾದ ಮಂಕಿ ಡೈ, ಎರಡು ಕೈಗಳಿಂದ ನಡೆಯುವುದು ಸಹಿತ ವಿವಿಧ ಸಾಹಸಗಳನ್ನು ಈ ತಂಡಗಳು ಪ್ರದರ್ಶಿಸಿ ಜನ ಮನ ಗೆಲ್ಲುತ್ತವೆ. ಜನಾಕರ್ಷಣೆಗಾಗಿ ಹುಲಿವೇಷದಾರಿಗೆ ನೋಟಿನ ಮಾಲೆ ಹಾಕಲಾಗುತ್ತದೆ. ಸಾವಿರ ರೂಪಾಯಿಯಿಂದ ಹಿಡಿದು ೧ ಲಕ್ಷ ರೂಪಾಯಿವರೆಗೆನ ಮೌಲ್ಯದ ನೋಟಿನ ಮಾಲೆಯನ್ನು ಹಾಕಲಾಗುತ್ತದೆ. ಜಿಲ್ಲೆಯಾದ್ಯಂತ ಶಾರದೋತ್ಸವಕ್ಕೆ ಚಾಲನೆ ದೊರೆಯುತ್ತಿದ್ದಂತೆ ಹುಲಿವೇಶಗಳು ಮನೆಬಾಗಿಗೆ ಬಂದು ಮನತಣಿಸುತ್ತೆ.