ಬೆಂಗಳೂರು : ಅಂತಾರಾಷ್ಟ್ರೀಯ ಮಹಿಳಾ ಕಬಡ್ಡಿ ಕ್ರೀಡಾಪಟು ಧನಲಕ್ಷ್ಮೀ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಅರಿಶಿನಕುಂಟೆ ಆದರ್ಶನಗರದ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೊನ್ನೆ ಸ್ನೇಹಿತರೊಂದಿಗೆ ಮೈಸೂರು ದಸರಾ ನೋಡಿಕೊಂಡು ಬಂದಿದ್ದ ಧನಲಕ್ಷ್ಮೀ, ತಂದೆ ಹಾಗೂ ತಮ್ಮ ಮನೆಯಲ್ಲಿರುವಾಗಲೇ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನುಮಾನಗೊಂಡ ತಂದೆ ರೂಮ್ಗೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕೆ.ತಿಮ್ಮಲಾಪುರ ನಿವಾಸಿಯಾಗಿರುವ ಧನಲಕ್ಷ್ಮೀ, ಕಳೆದ 5 ವರ್ಷದಿಂದ ನೆಲಮಂಗಲದ ಅರಿಶಿನಕುಂಟೆ ಆದರ್ಶನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ 3 ಬಾರಿ ಕಬ್ಬಡಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಧನಲಕ್ಷ್ಮೀ, ಕಾಡುಗೋಡಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು.
ಈ ಬಗ್ಗೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾವುದೋ ವಿಚಾರದಲ್ಲಿ ಮನನೊಂದು ತನ್ನಷ್ಟಕ್ಕೆ ತಾನೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ಯುವತಿಯ ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.