ಭಾರತೀಯ ಗುರುವರ್ಯರು ವಿಶ್ವಕ್ಕೆ ನೀಡಿದ ಶಿಕ್ಷಣದ ಅಮೂಲ್ಯತೆಯನ್ನು ಚರಿತ್ರೆಯ ಪುಟಗಳು ಹೇಳುತ್ತದೆ – ಕೇಮಾರು ಸಾಂದೀಪನಿ ಆಶ್ರಮದ ಶ್ರೀಈಶ ವಿಠಲದಾಸ ಸ್ವಾಮೀಜಿ – ಕಹಳೆ ನ್ಯೂಸ್
ಶಿಕ್ಷಣದಿಂದಲೇ ಕಳೆದುದನ್ನು ಮರಳಿ ಪಡೆದುಕೊಳ್ಳಬಹುದು ಎಂದು ಕೇಮಾರು ಸಾಂದೀಪನಿ ಆಶ್ರಮದ ಶ್ರೀಈಶ ವಿಠಲದಾಸ ಸ್ವಾಮೀಜಿ ಅಭಿಪ್ರಾಯಪಟ್ಟರು.
ಚರಿತ್ರೆಯ ಎಲ್ಲಾ ಪುಟಗಳು ಭಾರತೀಯ ಗುರುವರ್ಯರು ವಿಶ್ವಕ್ಕೆ ನೀಡಿದ ಶಿಕ್ಷಣದ ಅಮೂಲ್ಯತೆಯನ್ನು ಹೇಳಿದೆ, ಇಡೀ ಭಾರತದ ಮೂಲೆ ಮೂಲೆಗಳಲ್ಲಿ ಗುರುಕುಲಗಳಲ್ಲಿ ಗುರುಗಳು ಕಲಿಸುತ್ತಿದ್ದರು. ಧಾರ್ಮಿಕ ಗ್ರಂಥಗಳಾದ ವೇದ, ವೇದಾಂಗ, ಉಪನಿಷತ್ತು, ಕಾವ್ಯ ನಾಟಕ, ಶಾಸ್ತ್ರಗಳ ಆಳ ಅಗಲ ಅವಶ್ಯಕತೆ ಮತ್ತು ಅನಿವಾರ್ಯತೆಯ ಅಧ್ಯಯನದಿಂದ ಭಾರತೀಯರು ಚಾರಿತ್ರ‍್ಯವಂತರು, ನೀತಿವಂತರು, ಪ್ರಾಮಾಣಿಕರು, ಧರ್ಮನಿಷ್ಟರು ಸತ್ಯವಂತರು ಸ್ವಾಭಿಮಾನಿಗಳಾಗಿ ಬದುಕಿದ್ದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ. ಗುರುಕುಲಗಳು ಜಗತ್ತಿನ ಶಿಕ್ಷರ್ಥಿಗಳಿಗೆ ಆಕರ್ಷಣೆಯಾಗುತ್ತಿತ್ತು. ಆಗ ಅಂಕಗಳು ಜ್ಞಾನದ ಮೂಲಕ ಮಾನವ ಬದುಕಿನ ನಿರ್ಧಾರ ಮಾಡುತ್ತಿತ್ತು, ರಾಜ ಮಹಾರಾಜರು ಗುರು ಕುಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಶ್ರೀಕೃಷ್ಣ, ಶ್ರೀ ರಾಮಚಂದ್ರ, ಧರ್ಮರಾಜ, ಸತ್ಯ ಹರಿಶ್ಚಂದ್ರ, ಭರತ, ಮೊದಲಾದವರು ಗುರುಕುಲದ ಪದ್ಧತಿ ಯಲ್ಲಿಯೇ ಕಲಿತವರು. ಧರ್ಮ, ಅರ್ಥ, ಕಾಮ, ಮೋಕ್ಷವೆಂಬ ಚತುರ್ವಿಧ ಪುರುಷಾರ್ಥಗಳನ್ನು ಸಾಧಿಸಿದವರು. ಧರ್ಮವನ್ನು ಆಧಾರವನ್ನಾಗಿರಿಸಿಕೊಂಡು ಬದುಕನ್ನು ಕಟ್ಟಿಕೊಂಡವರು. ಧರ್ಮಮಾರ್ಗದಲ್ಲಿ ಅರ್ಥವನ್ನು ಸಂಪಾದನೆ ಮಾಡುತ್ತಾ ನಿರ್ದಿಷ್ಟ ಕಾಲದಲ್ಲಿ ನಿರ್ದಿಷ್ಟ ಸಾಧನೆ ಪೂರೈಸಿ, ಸಮಯೋಚಿತವಾಗಿ ಯೋಚಿಸಿ, ಪುಟ್ಟ ಕಾರ್ಯದಲ್ಲೂ ಸ್ಪಷ್ಟಕಲ್ಪನೆಯನೆಯನ್ನಿರಿಸಿಕೊಂಡು, ಜಯಶೀಲರಾದವರು. ಲೋಕಕ್ಕೆ ಆದರ್ಶವಾದರು. ಉತ್ತಮ ಶಿಕ್ಷಣ ಪಡೆದ ಪರಿಣಾಮದಿಂದ ಧನ್ಯರಾದರು.
ನರನನ್ನು ನಾರಾಯಣನನ್ನಾಗಿ ಮಾಡುವ, ಮಾನವನನ್ನು ವಿಶ್ವಮಾನವನನ್ನಾಗಿ ಮಾಡುವ ಶಿಕ್ಷಣ ಪದ್ದತಿಯು ಇಂದು ಏನಾಗಿದೆ? ಯುವ ಜನಾಂಗವನ್ನು ಹಣಗಳಿಸುವ ಯಂತ್ರವನ್ನಾಗಿ, ಸ್ವಾರ್ಥಿಯನ್ನಾಗಿ, ಸಮಾಜದಿಂದ ವಿಮುಖನನ್ನಾಗಿ, ಸಾಂಸ್ಕೃತಿಕ ದರಿದ್ರನನ್ನಾಗಿ ಮಾಡುತ್ತಿದೆ. ಪ್ರೀತಿ-ವಾತ್ಸಲ್ಯ ಅನುಕಂಪ ಸೌಹಾರ್ದತೆ, ಮಾನವೀಯತೆಯ ಮೌಲ್ಯಗಳು ಮೂಲೆಗುಂಪಾಗುತ್ತಲಿವೆ. ನಮ್ಮ ಶಿಕ್ಷಣದಲ್ಲಿ ಧರ್ಮಕ್ಕೆ ಪ್ರಾಧಾನ್ಯ ಕೊಡದೇ ಇರುವದರಿಂದ ದುರಂತ ಬಂದೊದಗಿದೆ. ವಿದೇಶಿ ಶಿಕ್ಷಣ ನಮ್ಮ ಸಂಸ್ಕೃತಿಗೆ ಮಾರಕವಾಗಿದೆ. ಸತ್ಯ-ನ್ಯಾಯ ನೀತಿ ಪಾಲಿಸಬೇಕಾದವರು ಸುಳ್ಳನ್ನೇ ಬಂಡವಾಳ ಮಾಡಿಕೊಂಡು ಬದುಕುತ್ತಿದ್ದಾರೆ ದೇಶಾಭಿಮಾನಿಗಳಾಗಬೇಕಾದವರೇ ದೇಶದ್ರೋಹ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ನೀತಿರಹಿತ, ಮೌಲ್ಯರಹಿತ ಶಿಕ್ಷಣ ನಮ್ಮದಾಗಿದೆ. ನಿಜವಾಗಿ ನಮ್ಮ ಯುವಜನಾಂಗ ನೀತಿವಂತ, ಸದೃಢ, ಸದಾಚಾರಿ ದೇಶಪ್ರೇಮಿಗಳಾಗಬೇಕಾದರೆ ಧರ್ಮ ಅಧ್ಯಾತ್ಮಗಳಿಂದ ಕೂಡಿದ ಮಾನವೀಯ ಮೌಲ್ಯಗಳಿಂದ ಪೂರಕವಾದ ಶಿಕ್ಷಣ ನೀಡಬೇಕು, ಈ ನಿಟ್ಟಿನಲ್ಲಿ ನಮ್ಮ ಸಾಧನೆಗಳು ಯೋಜನೆ ಕೆಲಸ ಮಾಡಬೇಕು. ಮುಂದಿನ ಪೀಳಿಗೆ ಭವಿಷ್ಯವನ್ನು, ಅರೋಗ್ಯವನ್ನು ನೀಡಬೇಕು, ಮಾನವರಾಗಿ ಹುಟ್ಟಿದ್ದಕ್ಕೆ ಬದುಕು ಸಾರ್ಥಕ ಮಾಡಿಕೊಳ್ಳಬೇಕು ಸ್ವಾಮೀಜಿಗಳು ತಮ್ಮ ಆಶ್ರಮದ ಸತ್ಕಾರ್ಯ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟರು.