ಮೂಡುಬಿದಿರೆ: ಪಡುಮಾರ್ನಾಡು ಗ್ರಾಪಂ ವ್ಯಾಪ್ತಿಯ ಅಮನಬೆಟ್ಟು ಬಳಿಯ ಬಡ ಮಹಿಳೆ ಸುಮಾ ಕುಟುಂಬಕ್ಕೆ ಸರ್ವೋದಯ ಫ್ರೆಂಡ್ಸ್ ಬೆದ್ರನಿಂದ ರೂ.7 ಲಕ್ಷ ವೆಚ್ಚದಲ್ಲಿ `ಸರ್ವೋದಯ ನಿಲಯ’ ಎಂಬ ಹೆಸರಿನ ಮನೆ ನಿರ್ಮಿಸಿದ್ದು ಅದನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಮೂಡುಬಿದಿರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಶ್ರೀಪತಿ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ನಾವು ನಮ್ಮ ಧರ್ಮವನ್ನು ಉಳಿಸಿದರೆ ನಮ್ಮನ್ನು ಧರ್ಮ ರಕ್ಷಿಸುತ್ತದೆ. ಬಡವರಿಗೆ, ಅಸಹಾಯಕರಿಗೆ ನಾವು ಸಹಾಯ ಮಾಡಿದರೆ ಅದರ ಪುಣ್ಯಫಲ ನಮಗೆ ಮುಂದಿನ ದಿನಗಳಲ್ಲಿ ಸಿಗುತ್ತದೆ. ಎಲ್ಲರ ಸಹಕಾರದಿಂದ ಬಡ ಕುಟುಂಬಕ್ಕೆ ಸಹಕಾರ ಸಿಕ್ಕಿದೆ. ಮುಂದಿನ ದಿನಗಳಲ್ಲೂ ಇಂತಹ ಉತ್ತಮ ಕೆಲಸ ಸರ್ವೋದಯ ಫ್ರೆಂಡ್ಸ್ ನಿಂದ ಆಗಲಿ ಎಂದು ಶುಭ ಹಾರೈಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಸುಮಾ ಅವರು ಮಣ್ಣಿನ ಗೋಡೆ ಮತ್ತು ತಗಡು ಶೀಟ್ ಹೊದಿಸಿದ ಮನೆಯಲ್ಲಿ ಅಸಹಾಯಕ ಸ್ಥಿತಿಯಲ್ಲಿ ತನ್ನಿಬ್ಬರು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದರು. ತನ್ನಿಬ್ಬರು ಮಕ್ಕಳೊಂದಿಗೆ ತಗಡು ಸೀಟಿನ ಮನೆಯಲ್ಲಿ ಜೀವಿಸುತ್ತಿದ್ದ ಬಡ ಮಹಿಳೆಯ ಕುಟುಂಬಕ್ಕೆ ಸರ್ವೋದಯ ಫ್ರೆಂಡ್ಸ್ ಬೆದ್ರ ಹೊಸ ಬದುಕು ಕಲ್ಪಿಸಿದೆ ಎಂದರು.
ಸರ್ವೋದಯ ಫ್ರೆಂಡ್ಸ್ ಅಧ್ಯಕ್ಷ ಗುರು ದೇವಾಡಿಗ, ಅರಣ್ಯಾಧಿಕಾರಿ ಮಂಜುನಾಥ್ ಗಾಣಿಗ, ಪಡುಮಾರ್ನಾಡು ಗ್ರಾಪಂ ಅಧ್ಯಕ್ಷ ವಾಸುದೇವ ಭಟ್, ಸರ್ವೋದಯ ಫ್ರೆಂಡ್ಸ್ ಗೌರವಾಧ್ಯಕ್ಷ ರಂಜಿತ್ ಪೂಜಾರಿ, ಯುವಕ ಮಂಡಲ ಅಮನಬೆಟ್ಟು ಅಧ್ಯಕ್ಷ ಸಂದೀಪ್ ಆಚಾರ್ಯ, ಮಾರ್ನಾಡು ಶನಿಶ್ವರ ಪೂಜಾ ಸಮಿತಿ ಅಧ್ಯಕ್ಷ ರಮೇಶ್ ಶೆಟ್ಟಿ, ಪ್ರಜ್ವಲ್ ಮಾರ್ನಾಡ್, ಅನಿವಾಸಿ ಉದ್ಯಮಿ ಶೇಕ್ ಫಾಹಾದ್ ಮತ್ತಿತರರು ಉಪಸ್ಥಿತರಿದ್ದರು.