ನ.5 ರಂದು ವಗ್ಗ ಶ್ರೀ ಶಾರದಾಂಬ ಭಜನಾ ಮಂದಿರ ಕಾಡಬೆಟ್ಟು ನಲ್ಲಿ ಯಕ್ಷಾವಾಸ್ಯಮ್ ಕಾರಿಂಜ ಇದರ ತೃತೀಯ ವಾರ್ಷಿಕೋತ್ಸವ – ಕಹಳೆ ನ್ಯೂಸ್
ಬಂಟ್ವಾಳ: ಯಕ್ಷಾವಾಸ್ಯಮ್ ಕಾರಿಂಜ ಇದರ ತೃತೀಯ ವಾರ್ಷಿಕೋತ್ಸವ ನ.5 ರಂದು ವಗ್ಗ ಶ್ರೀ ಶಾರದಾಂಬ ಭಜನಾ ಮಂದಿರ ಕಾಡಬೆಟ್ಟು ಇಲ್ಲಿ ನಡೆಯಲಿದೆ ಎಂದು ಯಕ್ಷಾವಾಸ್ಯಮ್ ಕಾರಿಂಜ (ರಿ.) ಇದರ ಸಂಚಾಲಕಿಯಾದ ಸಾಯಿಸುಮಾ ಎಂ.ನಾವಡ ಅವರು ತಿಳಿಸಿದರು. ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರಗಳನ್ನು ತಿಳಿಸಿದರು.
ಕಳೆದ ಮೂರು ವರ್ಷಗಳಿಂದ ಸಂಸ್ಥೆಯು ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ಯಕ್ಷಗಾನದಲ್ಲಿ ಸಾಧನೆ ಮಾಡಿದ ವಿವಿಧ ಗಣ್ಯರನ್ನು ಗುರುತಿಸಿ ಪ್ರಶಸ್ತಿ ಪ್ರಧಾನ ಹಾಗೂ ವಿದ್ಯಾರ್ಥಿಗಳು ವಿದ್ಯಾರ್ಥಿ ಪುರಸ್ಕಾರವನ್ನು ನೀಡುತ್ತಾ ಬಂದಿದ್ದೇವೆ ಎಂದು ತಿಳಿಸಿದರು.
ಸಂಸ್ಥೆಯು ತೆಂಕುತಿಟ್ಟು ಯಕ್ಷಗಾನ ಅಭ್ಯಾಸ ತರಗತಿಗಳನ್ನು ಮಾಡುತ್ತಾ ಸಮಾಜದಲ್ಲಿ ಒಂದಷ್ಟು ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿದ್ದೇವೆ ಎಂದು ತಿಳಿಸಿದರು. ನ.5 ರಂದು ಬೆಳಿಗ್ಗೆ 9.30 ಯಕ್ಷಾವಾಸ್ಯಮ್ ಕಾರ್ಯಕ್ರಮವನ್ನು ಮಾಜಿ ಸಚಿವ ಬಿ.ರಮಾನಾಥ ರೈ ದೀಪೋಜ್ವಲನೆ ಮಾಡಲಿದ್ದಾರೆ. ಸಾಮಾಜಿಕ ಮುಂದಾಳು ಜಿನರಾಜ ಆರಿಗ, ಮಧ್ವ ಯಕ್ಷಕೂಟ ಇದರ ಸಂಚಾಲಕ ಭಾಸ್ಕರ ಶೆಟ್ಟಿ ಮಧ್ವ ಭಾಗವಹಿಸಲಿದ್ದಾರೆ.
ಪೂರ್ವಾಹ್ನ 10.30 ರ ಸಮಯದಲ್ಲಿ ಯಕ್ಷಗಾನ ಪೂರ್ವರಂಗ ಮತ್ತು ಮಕ್ಕಳ ಯಕ್ಷಗಾನ, ಬೆಳ್ಳಾರೆ ಮಂಜುನಾಥ ಭಟ್ ವಿರಚಿತ ಗಣಪತಿ ಕೌತುಕ ಯಕ್ಷಗಾನವನ್ನು ಯಕ್ಷಾವಾಸ್ಯಮ್ ಕಾರಿಂಜದ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಲಿದ್ದಾರೆ. ಶ್ರೀನಿವಾಸ ಬಳ್ಳಮಂಜ ಮತ್ತು ಸಾಯಿಸುಮಾ ಎಂ.ನಾವಡ ಅವರು ನಿರ್ದೇಶನ ಮಾಡಲಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ಯಕ್ಷಗಾಯನ ಕಾರ್ಯಕ್ರಮ ನಡೆಯಲಿದೆ. ಯಕ್ಷಗಾನದ ಹಾಡುಗಳನ್ನು ಯಕ್ಷಾವಾಸ್ಯಮ್ ಕಾರಿಂಜದ ವಿದ್ಯಾರ್ಥಿಗಳು ಪ್ರಸ್ತುತಿ ಪಡಿಸಲಿದ್ದು, ಶ್ರೀನಿವಾಸ ಬಳ್ಳಮಂಜ ನಿರ್ದೇಶನ ಮಾಡಲಿದ್ದಾರೆ. ಸಂಜೆ 4.30 ರ ವೇಳೆಗೆ ಸಭಾ ಪರ್ವ – ಯಕ್ಷಾವಾಸ್ಯಮ್ ಪ್ರಶಸ್ತಿ-ವಿದ್ಯಾರ್ಥಿ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ.
ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ, ಕಾರಿಂಜ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಉದ್ಯಮಿ ನಾಗೇಶ್ ಶೆಟ್ಟಿ ಬಂಟ್ವಾಳ, ವಗ್ಗ ಶ್ರೀ ಶಾರದಾಂಭ ಭಜನಾ ಮಂದಿರದ ಗೌರವಾಧ್ಯಕ್ಷ ಪ್ರಮೋದ್ ಕುಮಾರ್ ರೈ, ಮಧ್ವ ಶಿವಾಜಿ ಬಳಗದ ಅಧ್ಯಕ್ಷ ನಿತಿನ್, ಕಾವಳಪಡೂರು ಗ್ರಾ.ಪಂ.ಅಧ್ಯಕ್ಷ ಲಕ್ಮೀನಾರಾಯಣ ಶರ್ಮ, ಕಾವಳಮೂಡೂರು ಗ್ರಾ.ಪಂ.ಅಧ್ಯಕ್ಷ ಅಜಿತ್ ಶೆಟ್ಟಿ ಕಾರಿಂಜ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.
ಛಾಂದಸರು, ಪ್ರಸಂಗಕರ್ತರು,ಯಕ್ಷಗಾನ ವಿದ್ವಾಂಸರಾಗಿರುವ ಗಣೇಶ್ ಕೊಲೆಕಾಡಿ ಅವರಿಗೆ 2023 ರ ಈ ಬಾರಿಯ ಯಕ್ಷಾವಾಸ್ಯಮ್ ಪ್ರಶಸ್ತಿ ನೀಡಲಿದ್ದೇವೆ. ದೀವಿತ್ ಕೆ.ಎಸ್.ಪೆರಾಡಿ ಅವರು ಅಭಿನಂದನಾ ನುಡಿಯನ್ನು ನೀಡಲಿದ್ದಾರೆ.
ಈ ಬಾರಿ ಹತ್ತನೇ ಮತ್ತು ಪಿಯುಸಿ ವಿಭಾಗದಲ್ಲಿ ಉತ್ತಮ ಅಂಕ ಗಳಿಸಿದ ಸಂಸ್ಥೆಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಪುರಸ್ಕಾರ ಕಾರ್ಯಕ್ರಮ ನಡೆಯುತ್ತದೆ.
ಸಂಜೆ 6 ಯಿಂದ ನುರಿತ ಹಾಗೂ ಹವ್ಯಾಸಿ ಕಲಾವಿದರ ಒಗ್ಗೂಡುವಿಕೆಯಲ್ಲಿ ಅತಿಕಾಯ-ಇಂದ್ರಜಿತು ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಭಾಸ್ಕರ ಶೆಟ್ಟಿ ಮಧ್ವ, ಮಾಜಿ ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ ಉಪಸ್ಥಿತರಿದ್ದರು.