ಅಡಿಕೆ ವ್ಯಾಪಾರಿಯ ಒಂದು ಕೋಟಿ ಕಳವು ಪ್ರಕರಣ ; ಕಾರು ಚಾಲಕ ಸೇರಿ ನಾಲ್ವರನ್ನು ಬಂಧಿಸಿದ ಉಪ್ಪಾರಪೇಟೆ ಪೊಲೀಸರು – ಕಹಳೆ ನ್ಯೂಸ್
ಬೆಂಗಳೂರು: ಅಡಿಕೆ ವ್ಯಾಪಾರಿಯ ಗಮನ ಬೇರೆಡೆ ಸೆಳೆದು ಕಾರಿನಲ್ಲಿದ್ದ 1 ಕೋಟಿ ರೂ ಹಣ ಕಳವು ಮಾಡಿದ್ದ ಕಾರು ಚಾಲಕನಸಹಿತ ನಾಲ್ವರು ಆರೋಪಿಗಳನ್ನು ಉಪ್ಪಾರಪೇಟೆ ಠಾಣಾ ಪೊಲೀಸರು ಸೆರೆ ಹಿಡಿದಿದ್ದಾರೆ.
ಬಂಧಿತರನ್ನು ಸ್ವಾಮಿ (34), ಅನುಪಮಾ (38), ಪವನ್ (30) ಹಾಗೂ ಕಾರ್ತಿಕ್ (27) ಎಂದು ಗುರುತಿಸಲಾಗಿದೆ. ಅಕ್ಟೋಬರ್ 7ರಂದು ಬೆಂಗಳೂರಿಗೆ ಬಂದಿದ್ದ ಅಡಿಕೆ ವ್ಯಾಪಾರಿ ಉಮೇಶ್ ಎಂಬುವವರ ಕಾರಿನಲ್ಲಿದ್ದ 1 ಕೋಟಿ ಕಳ್ಳತನವಾಗಿತ್ತು. ಈ ಸಂಬAಧ ಕಾರು ಚಾಲಕ ಸ್ವಾಮಿಯ ಮೇಲೆ ಅನುಮಾನ ವ್ಯಕ್ತಪಡಿಸಿ ಅಕ್ಟೋಬರ್ 21ರಂದು ಉಪ್ಪಾರಪೇಟೆ ಠಾಣೆಗೆ ಉಮೇಶ್ ದೂರು ನೀಡಿದ್ದರು.
ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರ ಮೂಲದ ಉಮೇಶ್ ವಿವಿಧ ಜಿಲ್ಲೆಗಳ ರೈತರಿಂದ ಅಡಿಕೆ ಖರೀದಿಸಿ, ಹೊರ ರಾಜ್ಯಗಳಿಗೆ ರಫ್ತು ಮಾಡುವ ಕೆಲಸ ಮಾಡಿಕೊಂಡಿದ್ದರು. ಅಕ್ಟೋಬರ್ 7ರಂದು ಅಡಿಕೆ ಖರೀದಿಸಲು ಅಪಾರ ಪ್ರಮಾಣದ ಹಣದೊಂದಿಗೆ ಉಮೇಶ್, ತಮ್ಮ ಕಾರು ಚಾಲಕ ಸ್ವಾಮಿ ಜೊತೆ ಚಿತ್ರದುರ್ಗದಿಂದ ಹೊರಟಿದ್ದರು. ಕಾರಿನ ಡಿಕ್ಕಿಯಲ್ಲಿ ಹಣದ ಬ್ಯಾಗ್ ಇರಿಸಿದ್ದರು. ತುಮಕೂರಿನಲ್ಲಿ ಅಡಿಕೆ ಸಿಕ್ಕಿರಲಿಲ್ಲ. ಆದ್ದರಿಂದ ಬೆಂಗಳೂರಿನ ಚಂದ್ರಾಲೇಔಟ್‌ನ ಪಿಜಿಯಲ್ಲಿದ್ದ ಮಗಳನ್ನು ಮಾತನಾಡಿಸಿಕೊಂಡು ಹೋಗೋಣವೆಂದು ಬೆಂಗಳೂರಿಗೆ ಬಂದಿದ್ದರು.
ಮಧ್ಯಾಹ್ನ 2 ಗಂಟೆಗೆ ಗಾಂಧಿನಗರದ ಕಾಳಿದಾಸ ರಸ್ತೆಯಲ್ಲಿರುವ ಗಿರಿಯಾಸ್ ಬಳಿ ಕಾರು ನಿಲ್ಲಿಸಿದ್ದ ಉಮೇಶ್ ಹಾಗೂ ಸ್ವಾಮಿ, ಸಮೀಪದಲ್ಲಿದ್ದ ಹೋಟೆಲ್‌ನಲ್ಲಿ ಊಟ ಮಾಡಿಕೊಂಡು ಬಂದು ಚಂದ್ರಾಲೇಔಟ್‌ಗೆ ತೆರಳಿ ಮಗಳನ್ನು ಮಾತನಾಡಿಸಿಕೊಂಡು ಚಿತ್ರದುರ್ಗಕ್ಕೆ ಹೊರಟಿದ್ದರು. ನಂತರ ಚಹಾ ಕುಡಿಯಲು ಚಾಲಕ ಸ್ವಾಮಿ, ಡಾಬಸ್‌ಪೇಟೆ ಬಳಿ ಕೆಲ ನಿಮಿಷ ಕಾರು ನಿಲ್ಲಿಸಿದ್ದ. ಬಳಿಕ ಇಬ್ಬರೂ ಸಹ ಕಾರಿನಲ್ಲಿ ಭೀಮಸಮುದ್ರಕ್ಕೆ ಹೋಗಿ ನೋಡಿದಾಗ ಹಣದ ಬ್ಯಾಗ್ ನಾಪತ್ತೆಯಾಗಿತ್ತು. ಸಾಕಷ್ಟು ಹುಡುಕಾಟದ ನಂತರವೂ ಬ್ಯಾಗ್ ಸಿಗದಿದ್ದಾಗ ತಮ್ಮ ಸ್ನೇಹಿತನೊಂದಿಗೆ ಚರ್ಚಿಸಿದ ಬಳಿಕ ಉಪ್ಪಾರಪೇಟೆ ಠಾಣೆಗೆ ಬಂದು ಉಮೇಶ್ ದೂರು ನೀಡಿದ್ದರು.
ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರಿನ ಚಾಲಕ ಸ್ವಾಮಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು ಸಂಚು ರೂಪಿಸಿ ನಗರದ ಹೊರವಲಯದಲ್ಲಿ ಹಣ ಕಳ್ಳತನ ಮಾಡಿರುವುದು ತಿಳಿದುಬಂದಿದೆ. ಸದ್ಯ ನಾಲ್ವರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿAದ 90.19 ಲಕ್ಷ ರೂ ನಗದು, ಕದ್ದ ಹಣದಲ್ಲಿ ಖರೀದಿಸಿದ್ದ 6.49 ಲಕ್ಷ ಮೌಲ್ಯದ 2 ಆಯಪಲ್ ಐಫೋನ್‌ಗಳು, 1 ಇಯರ್ ಫೋನ್, 2 ವಾಚುಗಳು, 1 ಸ್ಮಾರ್ಟ್ ವಾಚ್, 61.670 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ 2 ಕಾರುಗಳು, 1 ಬೈಕ್, 4 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.