ಮೂಡುಬಿದಿರೆ: ತುಳು ರಂಗಭೂಮಿಯಲ್ಲಿ ವಿಭಿನ್ನವಾದ ನಾಟಕಗಳು ಬಂದಿವೆ. ಇದೀಗ ಪಿಂಗಾರ ಕಲಾವಿದೆರ್ ತಂಡದ ‘ಕದಂಬ’ ನಾಟಕವು ಶೀರ್ಷಿಕೆಯು ವಿಶಿಷ್ಟ ಮತ್ತು ಕುತೂಹಲವಾಗಿದ್ದು ಇದು ನಾಟಕ ರಂಗದಲ್ಲಿ ಬದಲಾವಣೆಯ ಗಾಳಿ ಬೀಸುವಂತೆ ಮಾಡಿದೆ ಈ ನಾಟಕವು ತುಳು ರಂಗಭೂಮಿಗೆ ಮೈಲುಗಲ್ಲಾಗಲಿ ಎಂದು ಹಿರಿಯ ರಂಗ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಹೇಳಿದರು.
ಅವರು ಮಣಿ ಕೋಟೆಬಾಗಿಲು ಅವರ ನಿರ್ದೇಶನದ 8ನೇ ನಾಟಕ ‘ಕದಂಬ”ವು ಕನ್ನಡ ಭವನದಲ್ಲಿ ನಡೆದ ಪ್ರಥಮ ಪ್ರದರ್ಶನದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಅಲಂಗಾರು ಶ್ರೀ ಬಡಗು ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಮಾತನಾಡಿ ತುಳು ನಾಟಕದ ಮೂಲಕ ಧಾರ್ಮಿಕ ಮತ್ತು ಸಾಮಾಜಿಕವಾಗಿ ಜನರಿಗೆ ಉತ್ತಮ ಸಂದೇಶವನ್ನು ನೀಡುತ್ತಾ ತುಳು ಭಾಷೆಯನ್ನು ಉಳಿಸಿ ಬೆಳೆಸುವಂತಹ ಕೆಲಸವನ್ನು ಮಣಿ ಕೋಟೆಬಾಗಿಲು ಮಾಡುತ್ತಿರುವುದು ಶ್ಲಾಘನೀಯ. ಉದ್ಯಮಿ ರವೀಂದ್ರ ಶೆಟ್ಟಿ ಬಜಗೋಳಿ ಮಾತನಾಡಿ ಮಣಿ ಅವರ ನಾಟಕಗಳಲ್ಲಿ ಸಾಮಾಜಿಕ ಸುಧಾರಣೆಯ ಸಂದೇಶ ಇರುತ್ತದೆ ಎಂದರು.
ಮಾಜಿ ಸಚಿವ ಅಭಯಚಂದ್ರ ಜೈನ್, ಉದ್ಯಮಿ ಶ್ರೀಪತಿ ಭಟ್, ಸತ್ಯಪ್ರಕಾಶ್ ಹೆಗ್ಡೆ, ಸತೀಶ್ ಕಾಶಿಪಟ್ಣ, ಕೋಟೆಬಾಗಿಲು ಮಹಮ್ಮಾಯಿ ದೇವಸ್ಥಾನದ ಗೌರವ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಸತೀಶ್ ಹೊಸ್ಮಾರು ಕಾರ್ಯಕ್ರಮ ನಿರೂಪಿಸಿದರು. ನಾಟಕದ ರಚನೆಗಾರ ಮಣಿ ಕೋಟೆಬಾಗಿಲು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.