Thursday, January 23, 2025
ಸುದ್ದಿ

ವಿವೇಕಾನಂದ ಕಾಲೇಜಿನಲ್ಲಿ ಸಂಶೋಧನಾ ಅವಕಾಶಗಳ ಕುರಿತು ಮಾಹಿತಿ ಕಾರ್ಯಗಾರ – ಕಹಳೆ ನ್ಯೂಸ್ದ

ಪುತ್ತೂರು : ವಿದ್ಯಾಸಂಸ್ಥೆಯ ಬೆಳವಣಿಗೆಯು ಶಿಕ್ಷಕರ ಮೇಲೆ ಅವಲಂಬಿತವಾಗಿದೆ. ನೀವು ಮಾಡುವ ಕೆಲಸದಿಂದ ಸಂಸ್ಥೆಗೆ ಸೂಕ್ತ ಸ್ಥಾನ-ಮಾನ ದೊರೆಯುತ್ತದೆ. ಒಂದು ಸಂಸ್ಥೆಯ ಬೆಳವಣಿಗೆಯಲ್ಲಿ ಶಿಕ್ಷಕರ ಶ್ರಮ ಅಗತ್ಯ. ತಾಳ್ಮೆಯು ನಮ್ಮನ್ನು ಓರ್ವ ಉತ್ತಮ ಸಂಶೋಧಕನನ್ನಾಗಿ ರೂಪಿಸುತ್ತದೆ. ಸಂಶೋಧನಾ ಲೇಖನಗಳನ್ನು ಬರೆಯಬೇಕಾದರೆ ಆರಿಸಿಕೊಳ್ಳಬೇಕಾದ ವಿಷಯವು ಮುಖ್ಯವಾಗಿರುತ್ತದೆ. ಇದಕ್ಕೆ ದೈಹಿಕ ಮತ್ತು ಮಾನಸಿಕ ತಯಾರಿಕೆಯು ಅತ್ಯಗತ್ಯ. ನಮ್ಮ ಸಾಧನೆಗೆ ಅಡ್ಡಿಪಡಿಸುವ ವಿಷಯಗಳನ್ನು ಲೆಕ್ಕಿಸದೆ ನಮ್ಮ ಸಾಧನೆಯತ್ತ ಗಮನ ಹರಿಸಬೇಕು.

ಒಳ್ಳೆಯ ಉದ್ದೇಶಕ್ಕಾಗಿ ಧನಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡಾಗ ಯಶಸ್ಸು ನಮ್ಮದಾಗುತ್ತದೆ ಎಂದು ಶೈಕ್ಷಣಿಕ ಅಧ್ಯಯನ ಮತ್ತು ಯೋಜನಾ ಕೇಂದ್ರ ಜವಾಹರ್ ಲಾಲ್ ನೆಹರು ವಿಶ್ವ ವಿದ್ಯಾಲಯ ದೆಹಲಿ ಇಲ್ಲಿನ ಸಹಾಯಕ ಪ್ರಾಧ್ಯಾಪಕ ರಮೇಶ್ ಸಾಲ್ಯಾನ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದಲ್ಲಿ ವಿವೇಕಾನಂದ ಸಂಶೋಧನಾ ಕೇಂದ್ರ ಮತ್ತು ಐಕ್ಯೂಎಸಿ ಘಟಕದ ಸಹಯೋಗದಲ್ಲಿ ನಡೆದ ಸಮಾಜವಿಜ್ಞಾನದಲ್ಲಿ ಸಂಶೋಧನಾ ಅವಕಾಶಗಳ ಕುರಿತು ಮಾಹಿತಿ ಕಾರ್ಯಗಾರ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಅಧ್ಯಕ್ಷೀಯ ಮಾತುಗಳನ್ನಾಡುತ್ತಾ, ಪ್ರತಿಯೊಬ್ಬರಲ್ಲೂ ಜ್ಞಾನ ಹಾಗೂ ಅರಿವು ಎಂಬುವುದು ಇದ್ದೇ ಇರುತ್ತದೆ. ಕಾಲೇಜು ಕೇವಲ ಉದ್ಯೋಗಕ್ಕೆ ಸೀಮಿತವಾಗಿರಬಾರದು. ಅದು ನಮ್ಮನ್ನು ಬೆಳೆಸುವ ಮೆಟ್ಟಿಲು. ನಾವು ಕೈಗೊಳ್ಳುವ ಕೆಲಸದಲ್ಲಿ ಆಸಕ್ತಿ ತೋರಿದರೆ ಅದು ನಮ್ಮನ್ನು ಬೆಳೆಸಿ ಒಂದು ಹಂತಕ್ಕೆ ತಂದು ನಿಲ್ಲಿಸುತ್ತದೆ. ಶೈಕ್ಷಣಿಕ ಸಂಶೋಧನೆಯು ತಂತ್ರಜ್ಞಾನದ ಕಾರಣದಿಂದ ಬಹಳ ಮುಂಚೂಣಿಯಲ್ಲಿದೆ. ತಂತ್ರಜ್ಞಾನದ ಸಹಾಯದಿಂದ ನಾವು ಹೆಚ್ಚು ವಿಷಯಗಳನ್ನು ತಿಳಿದುಕೊಳ್ಳಬಹುದು ಎಂದರು.

ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ. ಎನ್, ಕಾಲೇಜಿನ ಸಂಶೋಧನಾ ಕೇಂದ್ರದ ಮುಖ್ಯಸ್ಥ ಹಾಗೂ ಪರೀಕ್ಷಾಂಗ ಕುಲಸಚಿವ ಡಾ. ಹೆಚ್. ಜಿ ಶ್ರೀಧರ್, ಕಾಲೇಜಿನ ವಿಶೇಷಾಧಿಕಾರಿ ಮತ್ತು ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯ್ಕ್ ಬಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್ ಸ್ವಾಗತಿಸಿ, ಐಕ್ಯೂಎಸಿ ಘಟಕದ ಸಂಯೋಜಕ ಪ್ರೊ. ಶಿವಪ್ರಸಾದ್ ಕೆ. ಎಸ್ ವಂದಿಸಿ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿದ್ಯಾ.ಎಸ್ ನಿರೂಪಿಸಿದರು.