ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಇಸ್ರೋ ವಿಕ್ರಮ ಕಾರ್ಯಕ್ರಮ : “ದೇಶ ಸೇವೆ ವಿದ್ಯಾರ್ಥಿಗಳ ಗುರಿಯಾಗಲಿ” : ಕೃಷ್ಣಮೋಹನ್ ಶಾನ್‍ಭಾಗ್ – ಕಹಳೆ ನ್ಯೂಸ್
ಪುತ್ತೂರು : ವಿದ್ಯಾರ್ಥಿ ಜೀವನವು ಅತಿ ಅಮೂಲ್ಯವಾದುದು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ಓದಿನಲ್ಲಿ ತೊಡಗಿಸಿಕೊಳ್ಳಬೇಕು. ಸಾಮಾಜಿಕ ಮಾಧ್ಯಮಗಳಿಗೆ ಮಾರುಹೋಗದೆ ತಮ್ಮ ಗುರಿಯತ್ತ ಗಮನಹರಿಸಬೇಕು. ಯಾವುದೇ ವೃತ್ತಿಯಾದರೂ ದೇಶಸೇವೆಯೇ ಕಟ್ಟ ಕಡೆಯ ಗುರಿಯಾಗಲಿ ಎಂದು ಭಾರತೀಯ ಇಸ್ರೋ ಸಂಸ್ಥೆಯ ಎಲ್‍ಪಿಎಸ್‍ಸಿಯ ಜನರಲ್ ಮ್ಯಾನೇಜರ್ ಹಾಗೂ ವಿವೇಕಾನಂದ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿ ಕೃಷ್ಣಮೋಹನ್ ಶಾನ್‍ಭಾಗ್ ಹೇಳಿದರು.
ಪುತ್ತೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜು ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ನಡೆದ ಇಸ್ರೋ ವಿಕ್ರಮ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಇಸ್ರೋದ ಉಪ ನಿರ್ದೇಶಕ ಶಂಭಯ್ಯ ಮಾತನಾಡಿ ನವ ಭಾರತ ಆವಿಷ್ಕಾರದತ್ತ ತನ್ನ ಗಮನ ಹರಿಸಿದ್ದು ಬಾಹ್ಯಾಕಾಶ ಕ್ಷೇತ್ರದಲ್ಲಿಯೂ ತನ್ನ ಛಾಪು ಮೂಡಿಸುತ್ತಿದೆ. ಮಾನವ ಸಹಿತ ರಾಕೆಟ್ ಗಳನ್ನು ಕಳಿಸುವುದೇ ನಮ್ಮ ಮುಂದಿನ ಗುರಿ. ಇದನ್ನು ಇಸ್ರೋ ಯಶಸ್ವಿಯಾಗಿ ಮಾಡುವುದರಲ್ಲಿ ಯಾವುದೇ ಸಂದೇಹ ಬೇಡ ಎಂದು ನುಡಿದರು.
ಸಂಪನ್ಮೂಲ ವ್ಯಕ್ತಿಗಳು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ವಿವೇಕಾನಂದ ಪದವಿ ಪೂರ್ವ ಕಾಲೇಜು ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಸಂಪನ್ಮೂಲ ವ್ಯಕ್ತಿಗಳಿಗೆ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ ರಾವ್, ಕಾರ್ಯದರ್ಶಿ ಡಾ. ಮನಮೋಹನ, ಖಜಾಂಜಿ ವಾಮನ್ ಪೈ, ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ.ಪಿ, ಸಂಚಾಲಕ ಗೋಪಾಲಕೃಷ್ಣ ಭಟ್, ಆಡಳಿತ ಮಂಡಳಿಯ ಸದಸ್ಯೆ ವತ್ಸಲಾ ರಾಜ್ಙಿ, ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಉಪಸ್ಥಿತರಿದ್ದರು.
ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ ಸ್ವಾಗತಿಸಿದರು. ಉಪನ್ಯಾಸಕಿ ದೀಕ್ಷಿತಾ ನಿರೂಪಿಸಿ ವಂದಿಸಿದರು. ಬಳಿಕ ಕಾಲೇಜಿನ ಪಿಯುಸಿ ವಿಭಾಗದ ವಿದ್ಯಾರ್ಥಿಗಳು ಹಾಗೂ ಪುತ್ತೂರು ತಾಲೂಕಿನ ಮತ್ತು ಆಸುಪಾಸಿನ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಚಂದ್ರಯಾನ 3- ಆದಿತ್ಯ ಎಲ್-1 ವಿಕ್ರಮ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ನಡೆಯಿತು.