ಮೂಡುಬಿದಿರೆ: ಇತ್ತೀಚೆಗೆ ನಿಧನರಾಗಿರುವ ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ಅವತಿಗೆ ಸಮಾಜ ಮಂದಿರ ಸಭಾದ ನೇತೃತ್ವದಲ್ಲಿ ಸಾರ್ವಜನಿಕ ಶ್ರದ್ಧಾಂಜಲಿ ಅರ್ಪಿಸುವ ನುಡಿನಮನ ಕಾರ್ಯಕ್ರಮವು ಸಮಾಜಮಂದಿರದಲ್ಲಿ ಇಂದು ನಡೆಯಿತು.
ಸಮಾಜ ಮಂದಿರ ಸಭಾದ ಅಧ್ಯಕ್ಷ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅವರು ನುಡಿನಮನವನ್ನು ಸಲ್ಲಿಸುತ್ತಾ ಬೀಡಿ ಉದ್ದಿಮೆಯನ್ನು ಆರಂಭಿಸಿ ಸಾಧನೆ ಮಾಡಿರುವ ಆನಂದ ಆಳ್ವರು ಮಿಜಾರಿನಲ್ಲಿ ಮೊದಲ ಬಾರಿಗೆ ಕಂಬಳವನ್ನು ಆಯೋಜಿಸಿ ಅಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಗುಂಡೂರಾವ್ ಅವರನ್ನೇ ಉದ್ಘಾಟನೆಗೆ ಕರೆಸಿದ್ದ ಅವರು ಬದುಕಿನಲ್ಲಿ ಶ್ರೇಷ್ಠತೆಯನ್ನು ಕಂಡವರು.
ಕೃಷಿ ಚಟುವಟಿಕೆಯನ್ನು ಆರಂಭಿಸಿ ಉತ್ತಮ ಕೃಷಿಕನಾಗಿ, ಶಿಕ್ಷಣದಲ್ಲಿ ಆಸಕ್ತಿಯನ್ನು ಹೊಂದಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದವರು, ಶಿಸ್ತನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ಮಕ್ಕಳನ್ನೂ ಕೂಡಾ ಶಿಸ್ತು ಬದ್ಧವಾಗಿ ಬೆಳೆಸಿ ಆದರ್ಶ ವ್ಯಕ್ತಿಗಳಾಗಿ ರೂಪಿಸುವ ಮೂಲಕ ಆದರ್ಶಪ್ರಾಯರಾದವರು ಎಂದರು.
ಉದ್ಯಮಿ,ಮೂಡುಬಿದಿರೆ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕೆ.ಶ್ರೀಪತಿ ಭಟ್ ಮಾತನಾಡಿ ಆನಂದ ಆಳ್ವರು ಜೀವನದಲ್ಲಿ ನೇರ ನಡೆ ನುಡಿಯ ಶ್ರೇಷ್ಠ ಚಿಂತಕರಾಗಿದ್ದು ಸತ್ಯ, ಧರ್ಮವನ್ನು ಅಳವಡಿಸಿಕೊಂಡಿದ್ದರು. ವ್ಯವಹಾರದಲ್ಲಿ ಪಾರದರ್ಶಕವಾಗಿರಬೇಕೆಂಬುದನ್ನು ಹೇಳುತ್ತಿದ್ದ ಅವರು ಮನುಷ್ಯ ಸಮಾಜದಲ್ಲಿ ಹೇಗೆ ಬದುಕಬೇಕೆಂಬುದನ್ನು ತೋರಿಸಿಕೊಟ್ಟ ಮಹಾನ್ ವ್ಯಕ್ತಿ ಎಂದರು.ಉದ್ಯಮಿ ನಾರಾಯಣ ಪಿ.ಎಂ, ಕರ್ನಾಟಕ ಬ್ಯಾಂಕಿನ ನಿವೃತ್ತ ಜನರಲ್ ಮ್ಯಾನೇಜರ್ ಚಂದ್ರ ಶೇಖರ್ ರಾವ್ ನುಡಿನಮನವನ್ನು ಸಲ್ಲಿಸಿದರು.ಆನಂದ ಆಳ್ವರ ಪುತ್ರಿ ಮೀನಾಕ್ಷಿ ಆಳ್ವ ಮತ್ತು ಸಾರ್ವಜನಿಕರು ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ್ದರು.