Tuesday, November 26, 2024
ಸುದ್ದಿ

ವಿದ್ಯಾಗಿರಿಯಲ್ಲಿ ಸ್ವರ್ಗಸ್ಥರಾದ ಶತಾಯುಷಿ ಮಿಜಾರುಗುತ್ತು ಆನಂದ ಆಳ್ವರಿಗೆ ನುಡಿನಮನ ಕಾರ್ಯಕ್ರಮ- ಕಹಳೆ ನ್ಯೂಸ್

ಮೂಡುಬಿದಿರೆ : ಸ್ವರ್ಗಸ್ಥರಾದ ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ಅವರಿಗೆ ‘ನುಡಿನಮನ’ ಹಾಗೂ ‘ಸಹಬೋಜನ’ವು ಆಳ್ವಾಸ್ ಕಾಲೇಜಿನ ಕೃಷಿಸಿರಿ ವೇದಿಕೆಯಲ್ಲಿ ನಿನ್ನೆ ಶ್ರದ್ಧಾ-ಭಕ್ತಿಯಿಂದ ನೆರವೇರಿತು.

ನಿಟ್ಟೆ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ವಿನಯ ಹೆಗ್ಡೆ ಅವರು ನುಡಿನಮನ ಸಲ್ಲಿಸುತ್ತಾ ‘ಕೌಟುಂಬಿಕ ಜವಾಬ್ದಾರಿಯಿಂದ ತನ್ನ ವಿದ್ಯಾಭ್ಯಾಸ ಮೊಟುಕಾದರೂ, ವಿದ್ಯಾಕ್ಷೇತ್ರಕ್ಕೆ ಕೊಡುಗೆ ನೀಡಿ ಹಾಗೂ ವಿಶ್ವವಿದ್ಯಾಲಯಕ್ಕೆ ಸಮಾನಾಗಿ ಶಿಕ್ಷಣ ಸಂಸ್ಥೆ ಕಟ್ಟುವಲ್ಲಿ ಮಗನಿಗೆ (ಡಾ.ಮೋಹನ ಆಳ್ವ) ನೆರಳಾಗಿ ನಿಂತ ಆನಂದ ಆಳ್ವರ ವ್ಯಕ್ತಿತ್ವವು ಆದರ್ಶ ಹಾಗೂ ಅನುಕರಣೀಯ’ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

‘ಆಳ್ವರದ್ದು ಕೂಡುಕುಟುಂಬದ ಬದುಕು. ಒಂದೇ ಮನೆಯಲ್ಲಿ ಅಪ್ಪ, ಮಕ್ಕಳು, ಸೊಸೆ, ಮೊಮ್ಮಕ್ಕಳ ಪ್ರೀತಿ. ಅವರಿಗೆ ಊರೆಲ್ಲಾ ತನ್ನವರು ಎಂಬ ಕೌಟುಂಬಿಕ ಭಾವ. ಈ ಚಿಂತನೆ ಹಾಗೂ ಪ್ರೀತಿ ಕೊಟ್ಟವರು ಆನಂದ ಆಳ್ವರು’ ಎಂದು ಅವರು ಬಣ್ಣಿಸಿದರು.

‘ಆನಂದ ಆಳ್ವರನ್ನು ಸಮೀಪದಿಂದ ಬಲ್ಲೆನು. ಅವರದ್ದು ವಿಶಿಷ್ಟ ವ್ಯಕ್ತಿತ್ವ. ನಿಸ್ವಾರ್ಥ ಬದುಕು. ಬಹಿರಂಗದಲ್ಲಿ ಕಠಿಣದಂತೆ ಕಂಡರೂ, ನಂಬಿದ ಮಾರ್ಗದಲ್ಲಿ ನಿಷ್ಠೆಯಿಂದ ಬದುಕುವ ಮೃದುತ್ವ. ಅವರ ಛಾಯೆಯನ್ನು ನಾಲ್ವರು ಮಕ್ಕಳಲ್ಲೂ ಕಾಣಬಹುದು. ಮಕ್ಕಳ ಸಾಧನೆಗೆ ಅದುವೇ ಪ್ರೇರಣೆ’ ಎಂದು ಅವರು ಮೆಲುಕು ಹಾಕಿದರು.

‘ಅವರಿಗೆ ಸತ್ಯವೇ ದೇವರು. ಕೃಷಿಯೇ ಪ್ರಯೋಗ ಶಾಲೆ, ಕಂಬಳ ಶಿಸ್ತು, ಸಂಯಮದ ಸಂಸ್ಕøತಿ, ಜನರ ಒಡನಾಟವೇ ಉಸಿರಾಟವಾಗಿತ್ತು. ಮನೆಯವರು, ಅತಿಥಿಗಳೆಲ್ಲ ಸೇರಿ ಜೊತೆಯಾಗಿ ಊಟ ಮಾಡುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ’ ಎಂದು ಸ್ಮರಿಸಿದರು. ‘ಕುಟುಂಬದಲ್ಲಿ ಯಾವತ್ತೂ ಚರ್ಚೆಗಳು ಇರಬೇಕು. ಆದರೆ, ಅಂತಿಮವಾಗಿ ತಂದೆಯ ಮಾತು ಮಾರ್ಗದರ್ಶನ ಆಗಬೇಕು. ಬದುಕು ಮಾತು ಮೀರದಿರಬೇಕು’ ಎಂದು ಹಿತನುಡಿದರು.

ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಾತನಾಡಿ, ‘ಹಿಂದೂ ಸಂಪ್ರದಾಯದ ಗರುಡ ಪುರಾಣದಲ್ಲಿ ಶ್ರಾದ್ಧ ಹಾಗೂ ಮೋಕ್ಷಗಳ ಕುರಿತ ವಿವರಗಳಿವೆ. ಧರ್ಮ ನಿಷ್ಠ, ಧ್ಯಾನಿ, ಯೋಗಾದಿ ವಿಚಾರಗಳಿಂದ ಮೋಕ್ಷ ಪಡೆಯುತ್ತಾರೆ ಎಂಬ ಉಲ್ಲೇಖವಿದೆ. ಅಂತಹ ಬದುಕನ್ನು ಆನಂದಿಸಿದವರು ಆನಂದ ಆಳ್ವರು’ ಎಂದರು.

‘ಅವರದ್ದು ಜೀವರಾಜ ಆಳ್ವ, ನಾಗಪ್ಪ ಆಳ್ವ, ಅಮರನಾಥ ಶೆಟ್ಟಿ ಮತ್ತಿತರ ಸಾಧಕರ ಜೊತೆಗಿನ ಸಂಬಂಧ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಜೊತೆಗಿನ ಅನುಭಾವ. ಅವರ ಬಳಗವೇ ಬಹುದೊಡ್ಡದು’ ಎಂದು ಸ್ಮರಿಸಿದರು. ‘ಕೃಷಿ, ಸಮಾಜಸೇವೆ, ಸಾಂಸ್ಕೃತಿಕ ಕಾರ್ಯಕ್ರಮ, ಉದ್ಯಮ ಸೇರಿದಂತೆ ಹಲವು ಕ್ಷೇತ್ರದಲ್ಲಿ ಪ್ರಯೋಗ ನಡೆಸಿದ್ದಾರೆ’ ಎಂದರು.

ಕೃಷಿಸಿರಿ ವೇದಿಕೆಯಲ್ಲಿ ರಚಿಸಲಾದ ಪುಷ್ಪಾಲಂಕೃತ ಬೃಹತ್ ಮಂಟಪದಲ್ಲಿ ಇರಿಸಲಾದ ಮಿಜಾರುಗುತ್ತು ಆನಂದ ಆಳ್ವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು. ವಿವಿಧ ಕ್ಷೇತ್ರಗಳ ಸಾಧಕರು, ಆನಂದ ಆಳ್ವರ ಕುಟುಂಬ ಬಳಗ ಸೇರಿದಂತೆ ಮಿಜಾರುಗುತ್ತು ಮನೆತನಕ್ಕೆ ಆತ್ಮೀಯರಾದ ನಾಡಿನ ಗಣ್ಯಾತಿಗಣ್ಯರು ಹಾಗೂ ವಿದ್ಯಾರ್ಥಿಗಳು, ಹಿರಿಯರೆಲ್ಲ ಗೌರವ ಸಲ್ಲಿಸಿದರು. ವೈವಿಧ್ಯಮಯ ಭಕ್ಷ್ಯಗಳ, ಅಚ್ಚುಕಟ್ಟಾಗಿ ಆಯೋಜಿಸಿದ್ದ ಅನ್ನಸಂತರ್ಪಣೆಯಲ್ಲಿ ಎಲ್ಲರೂ ಜೊತೆಯಾಗಿ ಪಾಲ್ಗೊಂಡರು. 15 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು, ಉಪನ್ಯಾಸಕರು, ಶಿಕ್ಷಕರು, ಶಿಕ್ಷಕೇತರ ವರ್ಗದವರು ಸೇರಿದಂತೆ, 10 ಸಾವಿರಕ್ಕೂ ಅಧಿಕ ಹಿತೈಷಿಗಳು, ಸಾರ್ವಜನಿಕರು, ನೂರಾರು ಗಣ್ಯಾತಿಗಣ್ಯರು ಸೇರಿದ್ದರು.

ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸದಸ್ಯ ಪ್ರತಾಪ್ ಸಿಂಹ ನಾಯಕ್, ಶಾಸಕರಾದ ಉಮಾನಾಥ ಕೋಟ್ಯಾನ್, ಡಾ. ಭರತ್ ಶೆಟ್ಟಿ, ಯು. ರಾಜೇಶ್ ನಾಯ್ಕ್, ಕಿರಣ್ ಕೊಡ್ಗಿ, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ವಿನಯಕುಮಾರ್ ಸೊರಕೆ, ಬಿ.ನಾಗರಾಜ ಶೆಟ್ಟಿ, ಕೃಷ್ಣ ಜೆ. ಪಾಲೇಮಾರ್, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ, ಪ್ರಮುಖರಾದ ಫಾ.ಗೋಮ್ಸ್, ಎ.ಜೆ. ಶೆಟ್ಟಿ, ಸದಾನಂದ ಶೆಟ್ಟಿ, ಪ್ರದೀಪ್ ಕುಮಾರ್ ಕಲ್ಕೂರ, ಗಣೇಶ್ ಕಾರ್ಣಿಕ್, ಶ್ರೀಪತಿ ಭಟ್ ಇದ್ದರು.

ಆನಂದ ಆಳ್ವರ ಮಕ್ಕಳಾದ ಡಾ. ಎಂ.ಸೀತಾರಾಮ ಆಳ್ವ, ಮೀನಾಕ್ಷಿ ಆಳ್ವ, ಬಾಲಕೃಷ್ಣ ಆಳ್ವ, ಡಾ.ಎಂ.ಮೋಹನ ಆಳ್ವ, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಹಾಗೂ ಮಿಜಾರುಗುತ್ತು ಹಾಗೂ ಕೊಡ್ಮಣ್‍ಗುತ್ತು ಕುಟುಂಬಸ್ಥರು ಇದ್ದರು.