ಮಂಗಳೂರು: ಮಂಗಳೂರಲ್ಲೀಗ ನವರಾತ್ರಿಯ ಸಂಭ್ರಮ, ಸಡಗರ. ವರ್ಷದಿಂದ ವರ್ಷಕ್ಕೆ ಈ ನವರಾತ್ರಿಯ ವೈಭವ ಮಂಗಳೂರಲ್ಲಿ ವೃದ್ದಿಸುತ್ತಲೇ ಇದೆ. ಮಂಗಳೂರು ದಸರಾಕ್ಕೆ ಕುದ್ರೋಳಿ ಗೋಕರ್ಣನಾಥ ದೇವಾಲಯದ ವಿಶೇಷ ನವರಾತ್ರಿ ಮೆರುಗು ನೀಡುತ್ತಿದೆ. ನಾಳೆ ಸಿಎಂ ಕೂಡಾ ಭೇಟಿ ನೀಡಲಿದ್ದಾರೆ. ಬನ್ನಿ, ಅದ್ರ ಝಲಕ್ ನೋಡೋಣ.
ಮೈಸೂರಲ್ಲಿ ಚಾಮುಂಡೇಶ್ವರಿ ಅಗ್ರದೇವತೆಯಾದರೆ, ಮಂಗಳೂರು ದಸರಾಕ್ಕೆ ಶಾರದ ಮಾತೆಯೊಂದಿಗೆ ಶಕ್ತಿಯ ಪ್ರತೀಕವಾಗಿರುವ ನವದುರ್ಗೆಯರೇ ಆದಿ. ಇದು ದೂರದ ಮೈಸೂರು ದಸರಾದ ಮೆರಗನ್ನು ತುಳುನಾಡಿನ ಜನರಿಗೆ ಮಂಗಳೂರಿನಲ್ಲಿಯೇ ವೀಕ್ಷಿಸಲು ಅವಕಾಶ ಕಲ್ಪಿಸಿದೆ. ಮಂಗಳೂರು ದಸರಾ ಉತ್ಸವಕ್ಕೆ ಈಗಾಗಲೇ ಚಾಲನೆ ದೊರೆತಿದೆ. ಮೈಸೂರಿನಂತೆಯೇ ಮಂಗಳೂರು ದಸರಾ ಉತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ.
ದಸರಾ ಉತ್ಸವದ ಅಂಗವಾಗಿ ಮಂಗಳೂರಿನ ಕುದ್ರೋಳಿಯ ಗೋಕರ್ಣನಾಥೇಶ್ವರ ದೇವಾಲಯದಲ್ಲಿ ಸ್ವರ್ಗವೇ ಧರೆಗಿಳಿದು ಬಂದಂತೆ ಭಾಸವಾಗುತ್ತಿದೆ. ದೇವಾಲಯದಲ್ಲಿ ಪ್ರತಿಷ್ಠಾಪಿಸಲಾದ ನವದುರ್ಗೆಯರ ಮೂರ್ತಿಗಳು ವಿಶೇಷ ಮೆರಗು ನೀಡಿದೆ. ಮಂಗಳೂರು ದಸರಾದ ವಿಜೃಂಭಣೆ ವಿಕ್ಷಿಸಲು ಜನಸಾಗರವೇ ಹರಿದು ಬರುತ್ತಿದೆ.
ದಿನ ಕಳೆದಂತೆ ಕಡಲತಡಿಯಲ್ಲಿ ನವರಾತ್ರಿ ಉತ್ಸವದ ಸಡಗರ ಮುಗಿಲು ಮುಟ್ಟುತ್ತಿದೆ. ವೈಭವೋಪೇತ ವಿಶಿಷ್ಟ ಆಕರ್ಷಣೆಯ ನವರಾತ್ರಿ ಉತ್ಸವಕ್ಕೆ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ 10 ದಿನದ ದಸರಾ ಉತ್ಸವಕ್ಕೆ ಅಕ್ಟೋಬರ್ 10 ರಂದು ಚಾಲನೆ ನೀಡಲಾಯಿತು.
ನಾಳೆ ಸಿಎಂ ಕುಮಾರಸ್ವಾಮಿ ಅಧಿಕೃತವಾಗಿ ಮಂಗಳೂರು ದಸರಾ ಉದ್ಘಾಟಿಸಲಿದ್ದಾರೆ. ಇದಕ್ಕಾಗಿ ಸಕಲ ಸಿದ್ದತೆಗಳನ್ನ ಮಾಡಲಾಗಿದೆ. ವಿಶಿಷ್ಟ ಮೆರಗುಗಳೊಂದಿಗೆ ಲಕ್ಷಾಂತರ ಜನರನ್ನು ಮಂಗಳೂರಿನ ದಸರಾ ಮಹೋತ್ಸವ ಆಕರ್ಷಿಸುತ್ತಿದೆ. ಮಂಗಳೂರು ದಸರಾದ ವಿಶಿಷ್ಟ ಆಕರ್ಷಣೆ ನವದುರ್ಗೆಯರ ಪ್ರತಿಷ್ಟಾಪನೆ, ಮಂಗಳೂರಿನ ಕುದ್ರೋಳಿ ದೇವಾಲಯದಲ್ಲಿ ನವದುರ್ಗೆಯರ ದರ್ಶನ ಪಡೆಯುವುದೇ ಕಣ್ಣಿಗೆ ಹಬ್ಬ.
ನವದುರ್ಗೆಯರನ್ನು ಪ್ರತಿಷ್ಠಾಪಿಸಲಾದ ಮಂಟಪ ಸ್ವರ್ಗವೇ ಧರೆಗಿಳಿದು ಬಂದಂತೆ ಭಾಸವಾಗುತ್ತಿದೆ. ಶಕ್ತಿ ರೂಪಗಳಾದ ನವದುರ್ಗೆಯರನ್ನು ಪ್ರತಿಷ್ಟಾಪಸಿ ನವರಾತ್ರಿಯನ್ನು ಆಚರಿಸುವುದು ಮಂಗಳೂರು ದಸರಾ ವೈಶಿಷ್ಟ್ಯ. ಶಾರದ ಮಾತೆಯಂದಿಗೆ ಶಕ್ತಿಯ ರೂಪಗಳಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಿನಿ, ಸ್ಕಂದಮಾತ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ ಮತ್ತು ಸಿದ್ದಿಧಾತ್ರಿ ಹಾಗೂ ವಿಘ್ನನಿವಾರಕ ಗಣೇಶನನ್ನು ಇಲ್ಲಿ ಪ್ರತಿಷ್ಟಾಪಿಸಿ ವೈಭವಯುತವಾಗಿ 9 ದಿನಗಳ ಕಾಲ ಆರಾಧಿಸಲ್ಪಡುತ್ತಿರುವುದು ಇಲ್ಲಿನ ವೈಶಿಷ್ಟ್ಯ.
ಅಕ್ಟೋಬರ್ 20 ರವರೆಗೆ ನಡೆಯುವ ಈ ಮಂಗಳೂರು ದಸರಾ ಉತ್ಸವದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳುತ್ತಿದ್ದು, ದೇಶ ವಿದೇಶಗಳಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.