Recent Posts

Monday, January 20, 2025
ಸುದ್ದಿ

ಬದುಕನ್ನು ನಿರ್ವಹಿಸುವ ಕಲೆಯ ಅರಿವು ಮೂಡುತ್ತಿಲ್ಲ: ಡಾ.ಶ್ರೀಧರ ನಾಯ್ಕ್ – ಕಹಳೆ ನ್ಯೂಸ್

ಪುತ್ತೂರು: ಶಾಲಾ ಕಾಲೇಜು ಪರೀಕ್ಷೆಗಳಿಗಳಿಗಿಂತ ಜೀವನದ ಪರೀಕ್ಷೆಗಳು ಬಹು ಅಮೂಲ್ಯವಾದವುಗಳು. ಅಂಕದ ಪರೀಕ್ಷೆಯ ಬಗೆಗಿನ ಆಸಕ್ತಿ ಬದುಕನ್ನು ಅಂಕೆಯಲ್ಲಿಟ್ಟುಕೊಳ್ಳುವುದರ ಬಗೆಗೆ ಇಲ್ಲದಿರುವುದು ಖೇದಕರ. ಬದುಕನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ವೈಫಲ್ಯ ಕಾಣುತ್ತಿರುವುದೇ ಇಂದಿನ ಅನೇಕ ಸಾಮಾಜಿಕ, ಸಾಂಸ್ಕೃತಿಕ ವಿಘಡಣೆಗೆ ಕಾರಣವಾಗುತ್ತಿದೆ ಎಂದು ವಿವೇಕಾನಂದ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ ನಾಯ್ಕ್ ಹೇಳಿದರು.

ಅವರು ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳು ಆಯೋಜಿಸುವ ಮಣಿಕರ್ಣಿಕ ಮಾತುಗಾರರ ವೇದಿಕೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಪರೀಕ್ಷೆ ಆತಂಕ ಎಂಬ ವಿಷಯದ ಬಗೆಗೆ ಗುರುವಾರ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ಮಕ್ಕಳಿಗೆ ಅಂಕ ಪಡೆಯುವುದನ್ನೇ ಜೀವನದ ಗುರಿ ಎಂಬಂತೆ ತಿಳಿಸಿಕೊಡಲಾಗುತ್ತಿದೆ. ಬದುಕನ್ನು ನಿರ್ವಹಿಸುವ ಕಲೆಗಳ ಬಗೆಗೆ ಯಾರೂ ಬೋಧನೆ ಮಾಡುತ್ತಿಲ್ಲ. ಹಾಗಾಗಿಯೇ ಅತ್ಯುತ್ತಮ ಅಂಕ ಪಡೆಯುವವನು ಕೇವಲ ಉದ್ಯೋಗಿಯಾಗಿಯೇ ಉಳಿದರೆ, ತರಗತಿಗಳಲ್ಲಿ ಅನುತ್ತೀರ್ಣನಾಗುತ್ತಿದ್ದವನು ಬೃಹತ್ ಸಂಸ್ಥೆಗಳ ಒಡೆಯನಾಗುತ್ತಿದ್ದಾನೆ. ಪರಿಣಾಮವಾಗಿ ಶಿಕ್ಷಣದ ಮಹತ್ವ ಕಡಿಮೆಯಾಗುತ್ತಿದೆ. ಇದನ್ನು ಸರಿಪಡಿಸಬೇಕಾದ ಅನಿವಾರ್ಯತೆ ನಮ್ಮ ಕಣ್ಣ ಮುಂದಿದೆ ಎಂದು ನುಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಮ್ಮ ಸ್ಥಳೀಯ ಸಂಗತಿಗಳನ್ನು, ದೇಸೀಯ ಉತ್ಕೃಷ್ಟತೆಗಳನ್ನು ತಿಳಿಸಿಕೊಡುವ ಪ್ರಯತ್ನಗಳಾಗಬೇಕಿವೆ. ಮಾನವೀಯ ಮೌಲ್ಯಗಳ ಅಗತ್ಯತೆಗಳು, ಮಹತ್ವಗಳು ಯುವ ಸಮುದಾಯಕ್ಕೆ ಹರಿದುಬರಬೇಕಿದೆ. ಕೇವಲ ಮೊಬೈಲ್, ಇಂಟರ್‍ನೆಟ್‍ಗಳೇ ಜೀವನವಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಆಧುನಿಕ ಸೌಲಭ್ಯಗಳು, ಮಾಧ್ಯಮಗಳು ಬಂದ ನಂತರ ಮನುಷ್ಯ ಮನುಷ್ಯರ ನಡುವಣ ಸಂಬಂಧಗಳು ಶಿಥಿಲವಾಗುತ್ತಿವೆ. ಮಾನವ ಪ್ರೀತಿಯೇ ನಶಿಸಿಹೋದ ಮೇಲೆ ಯಾಂತ್ರೀಕೃತ ಬದುಕು ಜಾರಿಗೆ ಬರುತ್ತದೆ. ಅಂತಹ ಲಕ್ಷಣಗಳಿಗೆ ನಾವಿಂದು ಸಾಕ್ಷಿಯಾಗುತ್ತಿರುವುದು ದುರಂತ ಎಂದು ವಿಷಾದಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ತೇಜಶ್ರೀ ವೆಂಕಟೇಶ್, ಸಂಕೇತ್ ಕುಮಾರ್, ಪ್ರಶಾಂತ್ ರೈ, ದೀಕ್ಷಿತಾ, ಅನಘಾ ಶಿವರಾಮ್, ಅರುಣ್ ಕುಮಾರ್, ಕಾರ್ತಿಕ್, ಚರಿಷ್ಮಾ ಅಭಿಪ್ರಾಯ ವ್ಯಕ್ತಪಡಿಸಿದರು. ವಿದ್ಯಾರ್ಥಿನಿ ತೇಜಶ್ರೀ ವಾರದ ಮಾತುಗಾರ್ತಿಯಾಗಿಯೂ, ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿಗಳು ತಂಡ ಪ್ರಶಸ್ತಿಯನ್ನೂ ಪಡೆದರು.

ವೇದಿಕೆಯಲ್ಲಿ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ, ಉಪನ್ಯಾಸಕಿ ಭವ್ಯ ಪಿ.ಆರ್ ನಿಡ್ಪಳ್ಳಿ, ವೇದಿಕೆಯ ಕಾರ್ಯದರ್ಶಿ ಮೇಘ ಆರ್ ಸಾನಾಡಿ ಉಪಸ್ಥಿತರಿದ್ದರು. ಅಂತಿಮ ಪತ್ರಿಕೋದ್ಯಮ ವಿದ್ಯಾರ್ಥಿನಿ ಜೀವಿತ ಸ್ವಾಗತಿಸಿ, ಆಶಿಕಾ ಕಾರ್ಯಕ್ರಮ ನಿರ್ವಹಿಸಿದರು.