Monday, November 25, 2024
ಸುದ್ದಿ

ಬೆಳ್ತಂಗಡಿ ಬಜಿರೆ ಗ್ರಾಮದ ಕೊರಗಜ್ಜ ಕಟ್ಟೆ ವಿವಾದ : ತಾತ್ಕಾಲಿಕ ಅಂತ್ಯ ನೀಡಿದ ಜಿಲ್ಲಾಧಿಕಾರಿ : `ಕೊರಗ ಕಲ್ಲ್’ ಪುಣ್ಯ ಮಣ್ಣಿನಲ್ಲಿ ನಡೆದಿದ್ದೇನು ಗೊತ್ತಾ..? – ಕಹಳೆ ನ್ಯೂಸ್

ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಬಜಿರೆ ಗ್ರಾಮದ ಬಾಡಾರು ಎಂಬಲ್ಲಿ ನಡೆದ ಸತ್ಯ ಘಟನೆ. ಇಲ್ಲೊಂದು ಕೊರಗಜ್ಜನ ಕಟ್ಟೆ ಇದೆ. ಇದನ್ನು `ಕೊರಗ ಕಲ್ಲ್’ ಎಂದು ಕರೆಯುತ್ತಾರೆ. ಸುಮಾರು 500 ವರ್ಷಗಳ ಇತಿಹಾಸ ಹೊಂದಿರುವ “ಕೊರಗ ಕಲ್ಲ್”ಗೆ   ಹಿಂದಿನಿoದಲೂ ಪೂಜೆ, ಆರಾಧನೆ ನಡೆಯುತ್ತಿತ್ತು.

ಈ ಕಟ್ಟೆಯ ಹತ್ತಿರ ಅಂದ್ರೆ ಕೇವಲ ಅರ್ಧ ಕಿ.ಮೀ. ದೂರದಲ್ಲಿ ದೊಂಪದ ಬಲಿ ನಡೆಯುತ್ತದೆ. ದೊಂಪದ ಬಲಿ ನಡೆಸುತ್ತಿದ್ದವರು ಊರಿನ ಹತ್ತು ಸಮಸ್ತರು. ಇಲ್ಲಿ ಮೈಸಂದಾಯೆ, ದುಗಲಾಯೆ, ಬಾಡಾರ ಪಂಜುರ್ಲಿ, ಕಲ್ಲುರ್ಟಿ, ಕಲ್ಗುಡ, ಕಾಳ್ಳಮ್ಮ ದೈವಗಳಿದ್ದು ಎಲ್ಲ ದೈವಗಳಿಗೂ ಒಟ್ಟಿಗೆ ಗಗ್ಗರ ಇಡಲಾಗುತ್ತದೆ. ಬಳಿಕ ದೊಂಪದ ಬಲಿ ಸೇವೆಯೂ ನಡೆಯುತ್ತದೆ. ವರ್ಷಂಪ್ರತಿ ಜನವರಿ 5ರಂದು ದೈವಗಳಿಗೆ ದೊಂಪದ ಬಲಿ ನಡೆಯುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊರಗಜ್ಜನ ನುಡಿ
ಮೈಸಂದಾಯ-ದುಗ್ಗಲಾಯನಿಗೆ ಪೊಂಗರ್ತ್ಯಾರ್ ಮನೆಯಿಂದ ಭಂಡಾರ ಬರುತ್ತದೆ, ಬಾಡಾರ ಪಂಜುರ್ಲಿಗೆ ಮೇಗಿನ ಬಾಡರ್ ನಿಂದ ಭಂಡಾರ ಬರುತ್ತದೆ, ಕಲ್ಲುರ್ಟಿ, ಕಲ್ಗುಡ, ಕಾಳ್ಳಮ್ಮನಿಗೆ ಜೈನರ ಬಾಡಾರುನಿಂದ ಭಂಡಾರ ಬರುತ್ತದೆ. ಇದು ತಲೆತಲಾಂತರಗಳಿoದ ನಡೆಯುತ್ತಿದ್ದ ಸಂಪ್ರದಾಯ. ಮರುದಿನ ಜನವರಿ 6ರಂದು ಪಂಜುರ್ಲಿ ದೈವಕ್ಕೆ ಕೋಲ ಕಟ್ಟುವವ ಕೊರಗ ಕಲ್ಲಿನ ಕೊರಗಜ್ಜ ಕಟ್ಟೆಯಲ್ಲಿ ಕಟ್ಟಕಟ್ಟಲೆ ಪ್ರಕಾರ ಸೇವೆ ಕೊಡುತ್ತಿದ್ದರೇ ವಿನಃ ಈಗಿನಂತೆ ವಿಜ್ರಂಭಣೆಯಿoದ ಕೋಲ ನಡೆಯುತ್ತಿರಲಿಲ್ಲ. ಇದಕ್ಕೂ ಹತ್ತು ಸಮಸ್ತರೇ ಪಾಲ್ಗೊಳ್ಳುತ್ತಿರುವುದು ತಲೆತಲಾಂತರಗಳಿoದ ನಡೆಯುತ್ತಿದ್ದ ಸಂಪ್ರದಾಯ. ಪಂಜುರ್ಲಿಗೆ ಕೋಲ ಕಟ್ಟುವವನಿಗೆ ಕೊರಗಜ್ಜನ ಕಟ್ಟುಕಟ್ಟಲೆ ಗೊತ್ತಿರಲಿಲ್ಲ. ಅದಕ್ಕಾಗಿ ಅವರು ನೀವು ಹೇಳಿದ್ರೆ ಕೊರಗಜ್ಜನ ಕೋಲ ಕಟ್ಟುವವನನ್ನು ಕರೆದುಕೊಂಡು ಬರುತ್ತೇನೆ ಎಂದು ಊರ ಹತ್ತು ಸಮಸ್ತರಲ್ಲಿ ಹೇಳಿಕೊಂಡಿದ್ದರು. ಇದಕ್ಕೆ ಊರವರು ಒಪ್ಪಿಕೊಂಡಿದ್ದರು. ಅಂತೆಯೇ ಕಬಕದ ರಾಮಣ್ಣ ಎಂಬವರು ಬಂದು ಕೊರಗಜ್ಜನ ಪಾತ್ರಿಯಾಗಿ ನಿಂತು ನುಡಿ ಕೊಡುತ್ತಾರೆ. ಇದು ಐತಿಹಾಸಿಕ ಕೊರಗಜ್ಜನ ಕಟ್ಟೆಯಾಗಿದ್ದು, ಬಸಿರಿನ ಮರದ ಕೆಳಗಡೆ ಕಲ್ಲು ಇದೆ. ಇದನ್ನು ಹಾಗೆಯೇ ಬಿಟ್ಟರೆ ನಿರ್ಜಿಗ(ಗಲೀಜು) ಆಗಬಹುದು ಆದ್ದರಿಂದ ಕಟ್ಟೆ ಕಟ್ಟಿ ಎಂದು ನುಡಿಕೊಡುತ್ತಾನೆ ಕೊರಗಜ್ಜ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊರಗಜ್ಜ ಕಟ್ಟೆ ನಿಮಾಣ : ಹರಿದು ಬಂದ ಭಕ್ತ ಗಣ
ಈ ಹಿನ್ನೆಲೆಯಲ್ಲಿ ಊರವರು ತಮ್ಮ ತಮ್ಮ ಮನೆಗಳಿಂದ 500 ರೂಪಾಯಿಯಂತೆ ಹಣ ಸಂಗ್ರಹಿಸಿ ಕೊರಗಜ್ಜನಿಗೊಂದು ಚಂದದ ಕಟ್ಟೆಯನ್ನೂ ನಿರ್ಮಿಸಿದರು. ನಂತರ ತೆಂಬರೆಯ ಸದ್ದಿನಲ್ಲಿ ಬಹಳ ವಿಜ್ರಂಭಣೆಯಿoದ ಕೋಲ ನಡೆಯಿತು. ಕೊರಗಜ್ಜನ ಕಾರ್ನಿಕವೋ ಏನೋ ಹಂತ ಹಂತವಾಗಿ ಈ ಕೊರಗಜ್ಜನ ಸನ್ನಿಧಾನಕ್ಕೆ ಸಾವಿರಾರು ಮಂದಿ ಭಕ್ತರು ಕೋಲದಲ್ಲಿ ಭಾಗವಹಿಸಿದ್ದರು. ವರ್ಷದಿಂದ ವರ್ಷಕ್ಕೆ ಅಜ್ಜನಿಗೆ ಬರೋಬ್ಬರಿ 1000 ಕ್ಕೂ ಹೆಚ್ಚು ಅಗೇಲು ಸೇವೆ ಇಲ್ಲಿ ಸಂದಾಯವಾಗುತ್ತ ಬರುತ್ತಿದೆ. ಆದರೆ ಮೊದಲು ಊರಿನ ಹತ್ತು ಮನೆಯವರು ತರುತ್ತಿದ್ದ ಅಗೇಲು ಹಂತ ಹಂತವಾಗಿ ಸಾವಿರಾರು ಭಕ್ತರು ಈ ಕೊರಗಜ್ಜನ ಸನ್ನಿಧಾನಕ್ಕೆ ಅಗೇಲು ಸೇವೆ ನೀಡುತ್ತ ಬರುತ್ತಿದ್ದು, ಇದೀಗ ಬೇರೆ ಬೇರೆ ಊರುಗಳಿಂದ ಕೂಡ ಬಂದು ಕೊರಗಜ್ಜನಿಗೆ ಅಗೇಲು ಸೇವೆ ನೀಡುತ್ತಿದ್ದಾರೆ. ಹೀಗೆ ಸುಮಾರು ಹತ್ತು ವರ್ಷಗಳಿಂದ ನಡೆಯುತ್ತ ಬರುತ್ತಿದೆ. ಪ್ರತಿ ವರ್ಷ ಕೂಡ ಇದೇ ರೀತಿಯಾಗಿ ನಡೆದುಕೊಂಡು ಬರುತ್ತಿದೆ. ಹೀಗೆ ಕೊರಗಜ್ಜನ ಕಟ್ಟೆಯ ಸಮೀಪದ ಮನೆಯ ಮೇಗಿನ ಬಾಡಾರಿನ ಹರೀಶ್ ಎಂಬವರಿಗೆ ದೈವದ (ಚಾಕ್ರಿ) ಕೆಲಸವನ್ನು ಊರಿನವರ ನಿರ್ಧಾರದಂತೆ ಜವಾಬ್ದಾರಿ ನೀಡಲಾಗಿತ್ತು.

ದೈವಸ್ಧಾನದ ಲೆಕ್ಕಾಚಾರ ಕೇಳಿದ್ದೇ ತಪ್ಪಾ..?
ಇಷ್ಟೇಲ್ಲಾ ಅಗೇಲು ಸೇವೆಗಳು ಕೊರಗಜ್ಜನ ಕಟ್ಟೆಯಲ್ಲಿ ನಡೆದರು ಅದರ ಹಣವನ್ನು ಬಹಳ ಸಮಯ ಊರಿನವರು ಯಾರು ಪ್ರಶ್ನೇ ಮಾಡಿರಲಿಲ್ಲ. ಆದರೆ ಒಂದು ದಿನ ಮೇಗಿನ ಬಾಡಾರಿನ ಹರೀಶ್ ಅವರ ಜೊತೆಗೆ ಊರವರು ಇದರ ಲೆಕ್ಕ ಕೊಡಬೇಕು ಎಂದು ಕೇಳಿದಾಗ ಮೇಗಿನ ಬಾಡರ‍್  ನ ಹರೀಶ್ ಕೋಲ ನಷ್ಟದಲ್ಲಿ ನಡೆಯುತ್ತಿದೆ. ಇಲ್ಲಿ ಅಜ್ಜನಿಗೆ ನೆಲೆ ಇಲ್ಲ. ಈಗ ಇರುವ ಕಟ್ಟೆ ಸರ್ಕಾರಿ ಜಾಗದಲ್ಲಿದ್ದು, ಅದನ್ನು ವರ್ಗ ಜಾಗಕ್ಕೆ ಕೊಂಡೊಯ್ಯಬೇಕು ಎಂದು ಹೇಳಿದರು. ಇದಕ್ಕೆ ಊರಿನವರು ಇಷ್ಟು ಅಗೇಲ್ ಸಂದಾಯವಾದರೂ ನಷ್ಟದಲ್ಲಿ ನಡೆಯುವುದು ಹೇಗೆ? ಅಲ್ಲದೆ ಊರವರಿಗೆ ಲೆಕ್ಕ ಕೊಡುವುದಿಲ್ಲ ಅಂದ್ರೆ ಏನರ್ಥ ಎಂದು ಊರಿನವರು ಹರೀಶ್ ಅವರನ್ನು ಪ್ರಶ್ನೆ ಮಾಡಿದರು.

ನಂತರ ಪೂರೋಹಿತರ ಮೂಲಕ ಪ್ರಶ್ನಾ ಚಿಂತನೆ ಇಡುವ ಬಗ್ಗೆ ನಿರ್ಧರಿಸುತ್ತಾರೆ ಹರೀಶ್. ಆದರೆ ಇದನ್ನು ಊರವರಲ್ಲಿ ಪ್ರಸ್ತಾಪಿಸದೆ, ಯಾರ ಗಮನಕ್ಕೂ ತಾರದೆ ಪ್ರಶ್ನೆ ಇಟ್ಟು ಈಗ ಇದ್ದ ಕೊರಗ ಕಲ್ಲ್ ಜಾಗವನ್ನು ಬಿಟ್ಟು ಸ್ವಲ್ಪ ದೂರದ ವರ್ಗ ಜಾಗದಲ್ಲಿ ಕಟ್ಟೆ ಕಟ್ಟಲೆಂದು ಜಾಗವನ್ನು ಸಮತಟ್ಟು ಮಾಡುತ್ತಾರೆ. ಕೊರಗಜ್ಜನನ್ನು ಹತ್ತು ಸಮಸ್ತರಿಂದ ಬಿಡಿಸಿ ಇದು ತನ್ನ ಕುಟುಂಬದ ಕೊರಗಜ್ಜ ಎಂದು ಎನ್ನುವ ಪ್ಲ್ಯಾನ್ ಅದಾಗಿತ್ತು!. ಇದಕ್ಕೆ ಊರವರಿಂದ ಆಕ್ಷೇಪಣೆ ಬಂದ ಕಾರಣ ಮಾಗಣೆಯ ದೊಂಪದ ಬಲಿ ನಡೆಯುವ ಜಾಗದಲ್ಲಿ ಮೀಟಿಂಗ್ ನಡೆದ ನಂತರ ಕೋಲ ನಡೆಸಿ ಕೊರಗಜ್ಜ ದೈವದಲ್ಲಿಯೇ ಕೇಳಿ ನಿರ್ಧಾರಕ್ಕೆ ಬರೋಣ ಎಂದು ನಿರ್ಧರಿಸುತ್ತಾರೆ ಊರಿನವರು. ಅದೇ ರೀತಿ ದೊಂಪದ ಬಲಿ ನಡೆದು ಮರುದಿನ 2023ರ ಜ.6ಕ್ಕೆ ಕೊರಗಜ್ಜ ದೈವದ ನುಡಿ ಕೇಳಿದರು. ಈ ವೇಳೆ ಹರೀಶ್ ಮತ್ತು ಅವರ ಕುಟುಂಬಸ್ಥರು ಸ್ಥಳದಲ್ಲಿದ್ದರು.

ನಾನು ಮನೆಯ ದೈವವಲ್ಲ, `ಕೊರಗ ಕಲ್ಲ್’

ಊರಿನವರು `ಕೊರಗಜ್ಜನ ಸಾನಿಧ್ಯವನ್ನು ವರ್ಗ ಜಾಗಕ್ಕೆ ಸ್ಥಳಾಂತರ ಮಾಡುವ ಬಗ್ಗೆ ನಿನ್ನ ನುಡಿಯೇನು?’ ಎಂದು ಕೊರಗಜ್ಜನಲ್ಲಿ ಕೇಳಿದಾಗ, ಕೊರಗಜ್ಜ, `ಜಾಗದ ಹೆಸರೇನು?’ ಎಂದು ಪ್ರಶ್ನಿಸಿದ. ಆಗ ಜನರು `ಕೊರಗ ಕಲ್ಲ್’ ಎಂದು ನುಡಿದರು. ಆಗ ಕೊರಗಜ್ಜ, ನಾನು ಮನೆಯ ದೈವವಲ್ಲ, `ಕೊರಗ ಕಲ್ಲ್’ ಎಂದು ಹೆಸರೇ ಸೂಚಿಸುವಾಗ ಜಾಗವನ್ನು ಬಿಟ್ಟುಹೋಗುವುದಿಲ್ಲ. ನಾನು ತಲೆತಲಾಂತರದಿoದ ಇಲ್ಲೇ ನೆಲೆಯೂರಿದ್ದೇನೆ’ ಎಂದು ನುಡಿದು ಮುಂದೆ ಯಾವ ರೀತಿ ಸಾಗಬೇಕು ಎಂದು ಕೊರಗಜ್ಜನ ಅಭಯವಾಗುತ್ತದೆ. ಈ ವೇಳೆ ಎಂಟ್ರಿಯಾಗುವ ವ್ಯಕ್ತಿ ಡಾ. ರಾಜೇಶ್ ಎಂಬವರು. ಇವರು ವೃತ್ತಿಯಲ್ಲಿ ವೈದ್ಯನಾಗಿದ್ದು, ಕೊರಗಜ್ಜನ ಕಟ್ಟೆ ತಮ್ಮ ಜಾಗಕ್ಕೆ ಬರಬೇಕೆಂದು ವಾದಿಸಿದ ವ್ಯಕ್ತಿ. ಕಟ್ಟೆಯ ಜಾಗದ ಹತ್ತಿರದಲ್ಲಿಯೇ ಇವರ ಮನೆ ಇದೆ. ಕೊರಗಜ್ಜ ನೇರವಾಗಿ ಡಾ. ರಾಜೇಶ್ ನನ್ನು ಕರೆದು, ನಿನ್ನ ಕಡೆಯಿಂದ 7 ಜನರನ್ನು ಆಯ್ಕೆ ಮಾಡು, ಊರಿನವರು 7 ಮಂದಿ ಮತ್ತು ನೀನು ಸೇರಿ 15 ಜನರ ಒಂದು ಸಮಿತಿ ರಚಿಸಿ ಸಾನಿಧ್ಯ, ಕೋಲದ ಬಗ್ಗೆ ಒಂದು ವ್ಯವಸ್ಥಿತ ಚೌಕಟ್ಟು ರೂಪಿಸಲು ಸೂಚಿಸುತ್ತದೆ. ಇದಕ್ಕೆ ಡಾ. ರಾಜೇಶ್ ದೈವದ ಮುಂದೆಯೇ ಒಪ್ಪಿಕೊಂಡರು. ಇದಕ್ಕೆಲ್ಲಾ ಒಪ್ಪಿದ್ದ ಡಾ. ರಾಜೇಶ್ ಅವರದ್ದು ಸುಮಾರು ಸಮಯ ಸುದ್ದಿಯೇ ಇರಲಿಲ್ಲ.

`ಕೊರಗ ಕಲ್ಲು ಶ್ರೀ ಕೊರಗಜ್ಜ ಸೇವಾ ಸಮಿತಿ ಟ್ರಸ್ಟ್’
ಡಾ. ರಾಜೇಶ್ ಮುಂದೆ ಮೀಟಿಂಗ್ ಕರೆದಿದ್ದೂ ಇಲ್ಲ, ಸಮಿತಿ ರಚಿಸಿದ್ದೂ ಇಲ್ಲ. ಬದಲಿಗೆ ಮಾರ್ಚ್ ನಲ್ಲಿ ಊರವರಲ್ಲಿ ಪ್ರಸ್ತಾಪಿಸದೆ ಕೊರಗಜ್ಜನ ಕಲ್ಲನ್ನು ಏಕಾಏಕಿ ತೆಗೆದು ಜಾಗ ಲೆವೆಲ್ ಮಾಡಲಾರಂಭಿಸಿದರು. ಊರವರು ಒಂದೂ ಅರ್ಥವಾಗದಂತೆ ಪೆಂಗನoತಾಗಿದ್ದರು. ಆದರೆ ಒಂದು ದಿನ ರಾಜೇಶ್ ಭಾನುವಾರದಂದು ಮೀಟಿಂಗ್ ಕರೆದು ಅಜ್ಜನ ಕಲ್ಲು ತೆಗೆದುಕೊಂಡು ಹೋದ ವ್ಯಕ್ತಿಯ ತಂದೆಯ ಅಮ್ಮನ ಸಹೋದರನ ಮಗ ರಾಜೇಶ್ ಹೆಸರಲ್ಲಿ ಒಂದು ಜೀಣೋದ್ಧಾರ ವಿಚಾರದಲ್ಲಿ ಫ್ಯಾಮಿಲಿ ಟ್ರಸ್ಟ್ ರಚನೆ ಮಾಡಿದರು. ಇದರಲ್ಲಿ ಡಾ. ರಾಜೇಶ್, ಇವರ ಅಕ್ಕ ಸತ್ಯಶ್ರೀ, ಈಕೆಯ ಗಂಡ ಮೋಹನ್, ರಾಜೇಶ್  ನ ಅಣ್ಣ ಹರೀಶ್ ಪ್ರಸಾದ್, ಎಂ. ಮೋಹನ್(ರಾಜೇಶ್ ಬಾವ), ಸೃಜನ್(ರಾಜೇಶ್ ಅಕ್ಕನ ಮಗ), ಡಾ. ವಿಜಯಲಕ್ಷ್ಮಿ(ರಾಜೇಶ್ ಪತ್ನಿ) ಹೆಸರಲ್ಲಿ ಉತ್ಸವ ಸಮಿತಿ, ಜೀರ್ಣೋದ್ಧಾರ ಸಮಿತಿ ರಚಿಸಿ ಅದಕ್ಕೆ `ಶ್ರೀ ಸ್ವಾಮಿ ಕೊರಗಜ್ಜ ಸೇವಾ ಟ್ರಸ್ ಕೊರಕಲ್ಲು ಬಾಡಾರು’ ರಚಿಸಿದ್ದೇವೆ ಎಂದು ತಿಳಿಸಿದರು. ಊರವನ್ನು ಸೇರಿಸದೆ ಕೇವಲ ಒಂದು ಕುಟುಂಬದವರನ್ನೇ ಸೇರಿಸಿ ಸಮಿತಿ ರಚನೆ ಮಾಡಿದ ವಿಚಾರ ರಟ್ಟಾಗುತ್ತಿದ್ದಂತೆ ಊರವರು ಬೆಚ್ಚಿಬಿದ್ದರು. ಊರವರಿಗೆ ನೀವು ಮೋಸ ಮಾಡಿದ್ದೀರಿ ಎಂದು ಛೀಮಾರಿ ಹಾಕಿದರು. ಎಲ್ಲರೂ ಮೀಟಿಂಗಿoದ ಎದ್ದು ಬಂದು ಒಂದು `ಸಾರ್ವಜನಿಕ ಟ್ರಸ್ಟ್’ ರಚನೆ ಮಾಡಿದರು. ಅದಕ್ಕೆ `ಕೊರಗ ಕಲ್ಲು ಶ್ರೀ ಕೊರಗಜ್ಜ ಸೇವಾ ಸಮಿತಿ ಟ್ರಸ್ಟ್’ ಎಂದು ನಾಮಕರಣ ಮಾಡಿದರು.

ಕೊರಗಕಲ್ಲ್ ಕಟ್ಟೆಗೆ ಸ್ವಲ್ಪ ಜಾಗ ಬೇಕಾಗಿರುವುದರಿಂದ ಆ ಜಾಗವನ್ನು ಅಕ್ರಮ ಸಕ್ರಮದ ಮೂಲಕ ಕೊರಗಜ್ಜನಿಗೆ ಬಿಟ್ಟುಕೊಡಲು ನಿರ್ಧರಿಸಿ, ಸಾರ್ವಜನಿಕರ ಕೂಡುವಿಕೆಯಲ್ಲಿ ಕೋಲ ನಡೆಸುವ ನಿರ್ಧಾರಕ್ಕೆ ಬಂದರು. ಊರವರು ಕೊರಗಜ್ಜನ ಮೂಲ ಜಾಗದಲ್ಲಿಯೇ ಕೊರಗಜ್ಜನ ಕಟ್ಟೆಗೆ ಕೆಸರು ಕಲ್ಲು ಹಾಕಿದರು. ಈ ನಡುವೆ ಕೆಸರು ಕಲ್ಲು ಹಾಕಿದವರ ಮೇಲೆ ವೇಣೂರು ಸ್ಟೇಷನ್ ಅರ್ಜಿ ಸಲ್ಲಿಕೆಯಾಗುತ್ತದೆ. ನಮ್ಮ ಮನೆಯ ಮಾಡು, ಓಡು ತೆಗೆದಿದ್ದಾರೆಂದು ಆರೋಪಿಸಿ ಸಲ್ಲಿಕೆಯಾದ ದೂರು ಅದು. ಆಗ ವೇಣೂರು ಸರ್ಕಲ್ ಶಿವಕುಮಾರ್ ಎರಡೂ ಕಡೆಯವರನ್ನು ಬರಲು ಹೇಳಿ ಮಾತುಕತೆ ನಡೆಸಿದರು. ಆಗ 24 ಸೆಂಟ್ಸ್ ಜಾಗದಲ್ಲಿ ಆಫೀಸ್ ಕಟ್ಟಡವಿರುದು ಗೊತ್ತಾಯಿತು. ಕೊರಗಜ್ಜನ ಜಾಗ ಇದ್ದುದು ಸರ್ಕಾರಿ ಜಾಗದಲ್ಲಿ. ಇದನ್ನು ಪರಿಶೀಲಿಸಲು ತಹಶೀಲ್ದಾರ್ ಬರಬೇಕು ಎಂಬ ವಿಚಾರ ಪ್ರಸ್ತಾಪವಾಯಿತು.

ಡಾ.ರಾಜೇಶ್ ಡ್ರಾಮಾ..
`ಆಫೀಸ್’ಗೆ ಸ್ಥಳ ಎಂದು ಪಟ್ಟ ಜಾಗದಲ್ಲಿ ಕೆಸರ್ ಕಲ್ಲು ಹಾಕಿ ಕೊನೆಗೆ ಅದು ನಿಜವಾಗಿಯೂ ಕೊರಗಜ್ಜನ ಸಾನಿಧ್ಯಕ್ಕೆ ಕೆರ‍್ಕಲ್ಲ್ ಹಾಕಿರುವುದು ಬೆಳಕಿಗೆ ಬಂದಿತು. ಪ್ರಸಾದ್ ಎಂಬ ಹುಡುಗ ಕೊರಗಜ್ಜನ ಮೂಲ ಜಾಗದಲ್ಲಿ ದೀಪ ಸುರು ಮಾಡಿದ್ದರೆ ಇದಕ್ಕೆ ರಾಜೇಶ್ ಕುಟುಂಬಿಕರು ವಿರೋಧ ವ್ಯಕ್ತಪಡಿಸಿದರು. ಕೊನೆಗೆ ಕೊರಗಜ್ಜನ ಜಾಗ ಸರ್ಕಾರಿ ಜಾಗದಲ್ಲಿದೆಯಾ ಪಟ್ಟ ಜಾಗದಲ್ಲಿದೆಯಾ ಸರ್ವೆ ನಡೆಸಲು ತೀರ್ಮಾನಕ್ಕೆ ಬರಲಾಯಿತು. ಕೊರಗ ಕಲ್ಲು ಇರುವ ಜಾಗ ಬಂಟ್ವಾಳ ಹಾಗೂ ಬೆಳ್ತಂಗಡಿ ಗಡಿ ಭಾಗದಲ್ಲಿರುವುದರಿಂದ ಎರಡೂ ಕಡೆಯ ಕಡೆ ತಹಶೀಲ್ದಾರ್‌ಗಳು ಸರ್ವೆ ನಡೆಸುವ ನಿರ್ಧಾರ ತೆಗೆದುಕೊಂಡರು. ಎರಡೂ ಕಡೆಯ ತಹಶೀಲ್ದಾರ್‌ಗಳು ನೋಟೀಸ್ ಕೊಟ್ಟು ಸರ್ವೆಗೆ ದಿನ ನಿಗದಿ ಮಾಡಿದರು. ಆದರೆ ಬಂಟ್ವಾಳ ತಹಶೀಲ್ದಾರ್ ಸರ್ವೆ ನಡೆಸಿದರೆ, ಬೆಳ್ತಂಗಡಿ ಭಾಗದಲ್ಲಿ ಸರ್ವೆ ನಡೆಸದಂತೆ ನೋಟೀಸ್ ಕೊಟ್ಟು ಜಂಟಿ ಸರ್ವೆಗೆ ಅರ್ಜಿ ಸಲ್ಲಿಕೆಯಾಯಿತು. ಜೂ.29ರಂದು ಜಂಟಿ ಸರ್ವೆ ನಡೆಸಲು ನಿರ್ಧರಿಸಲಾಯಿತು.

ಅದಕ್ಕಿಂತ ಮುಂಚೆ ಕಟ್ಟೆ ವಿವಾದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜನಡೆಗೆ ಹೋಗುತ್ತದೆ. ಎರಡೂ ಕಡೆಯವನ್ನು ತನ್ನ ಮನೆಗೆ ಆಹ್ವಾನಿಸಿ ವಿವಾದಕ್ಕೆ ಒಂದು ತಾರ್ಕಿಕ ಅಂತ್ಯ ಹಾಕಲು ನಿರ್ಧರಿಸಿದರು. ಡಾ. ರಾಜೇಶ್ ಹಾಗೂ ಊರವರು ಪೂಂಜಾರಿ ಮನೆಗೆ ತೆರಳಿ ಮಾತುಕತೆ ನಡೆಸಿದ ಬಳಿಕ ವಿವಾದ ಮುಕ್ತಾಯಗೊಂಡಿತು ಎಂದು ಎಲ್ಲರೂ ಭಾವಿಸಿದರು. ಮೂಲ ಕಟ್ಟೆಗೆ ಮಳೆ ನೀರು ಬೀಳದಂತೆ ಚಪ್ಪರದ ವ್ಯವಸ್ಥೆ ಮಾಡುವಂತೆಯೂ ಪೂಂಜರು ಸೂಚಿಸಿದ್ದರು. ಅವರ ಸೂಚನೆಯ ಪ್ರಕಾರ ಊರವರು ಒಂದು ದಿನ ಶ್ರಮದಾನ ನಡೆಸಿ ಚಪ್ಪರದ ವ್ಯವಸ್ಥೆಯನ್ನೂ ಮಾಡಿದರು. ಪ್ರಕರಣ ಸುಖಾಂತ್ಯ ಕಂಡಿತೆAದು ಭಾವಿಸಿ ಇನ್ನು ಸರ್ವೆಯ ಅಗತ್ಯವಿಲ್ಲ ಎಂದು ಅದನ್ನೂ ಪೋಸ್ಟ್ ಪೋನ್ ಮಾಡಲಾಯಿತು.

ಆದರೆ ಅದಕ್ಕಿಂತ ಮುಂಚೆ ಮತ್ತೊಂದು ಡ್ರಾಮಾ ನಡೆದಿದ್ದು ಊರವರಿಗೆ ಗೊತ್ತೇ ಇರಲಿಲ್ಲ. ರಾಜೇಶ್ ಕಡೆಯವರು ವೇಣೂರು ಠಾಣೆಗೆ ದೂರು ನೀಡಿ ನಮಗೆ ಬೆದರಿಕೆ ಇದೆ ಎಂದು ಆರೋಪಿಸಿದರು. ಅಲ್ಲದೆ ನಾವು ಶಾಸಕ ಪೂಂಜಾ ಮೀಟಿಂಗ್ ಅನ್ನು ನಾವು ಒಪ್ಪುವುದಿಲ್ಲ ನಮಗೆ ಅನುವಂಶಿಕ ಮೊಕ್ತೇಸರ ಬೇಕು ಎಂದು ತಗಾದೆ ಎತ್ತಿದರು. ಪ್ರಕರಣ ಮುಗಿಯುವ ಲಕ್ಷಣ ಕಾಣಿಸದಿದ್ದಾಗ ಮತ್ತೆ ಸರ್ವೆಗೆ ದಿನ ನಿಗದಿ ಮಾಡಲಾಯಿತು. ಈ ನಡುವೆ ಪ್ರಸಾದ್ ಎನ್ನುವ ಹುಡುಗ ಮೂಲ ಸ್ಥಳದಲ್ಲಿಯೇ ದೀಪ ಇಡುತ್ತಾ ಬಂದಿದ್ದ. ರಾಜೇಶ್ ತಾನು ಗೊತ್ತುಪಡಿಸಿದ್ದ ಸ್ಥಳದಲ್ಲಿ ಕೊರಗಜ್ಜನ ಮೂರ್ತಿ ಪ್ರತಿಷ್ಠಾಪಿಸಲು 8 ಲಕ್ಷದ ಶಿಲೆ ಕಲ್ಲನ್ನು ಸಿದ್ದಪಡಿಸಿದ್ದರು. ಅದಕ್ಕಿಂತ ಮುಂಚೆ ಊರಿನ ಕಡೆಯಿಂದ ಬರುತ್ತಿರುವವರ ಮೇಲೆ ಕೇಸ್ ಹಾಕಿಸಿ ಜೈಲಿಗೆ ಹಾಕಿ ನಿರಾತಂಕವಾಗಿ ಕೊರಗಜ್ಜನ ಮೂರ್ತಿ ಪ್ರತಿಷ್ಠಾಪಿಸಲು ಯೋಜನೆಯೊಂದನ್ನು ರಾಜೇಶ್ ಕಡೆಯವರು ಮಾಡಿರುವುದು ಬೆಳಕಿಗೆ ಬಂದಿತು. ಅಷ್ಟು ಮಾತ್ರವಲ್ಲದೆ ಪ್ರಸಾದ್ ದೀಪ ಇಡುವಾಗ ಮೂಲ ಸಾನಿಧ್ಯ ಸುಟ್ಟು ಹೋಗಿದೆ ಎಂದು ಬಿಂಬಿಸಲು ರಹಸ್ಯ ಕಾರ್ಯ ಸೂಚಿಯೊಂದನ್ನು ಸಿದ್ಧಪಡಿಸಿದ್ದು ಗೊತ್ತಾಗುವಂತೆ ಕೊರಗಜ್ಜ ಪವಾಡ ತೋರಿಸಿದ್ದು ನಿಜಕ್ಕೂ ಆಶ್ಚರ್ಯ ಎನಿಸುತ್ತಿದೆ.

ಕೊರಗಜ್ಜನ ಮೂಲ ಕಟ್ಟೆಗೆ ಬೆಂಕಿ..!
ಜು.10ರoದು ಪ್ರಶ್ನೆ ಇಟ್ಟು 11ಕ್ಕೆ ಅವರು ನಿರ್ಮಿಸಿದ ಕಟ್ಟೆಯಲ್ಲಿ ಕೊರಗಜ್ಜನ ಶಿಲಾಕಲ್ಲು ಪ್ರತಿಷ್ಠಾಪಿಸಲು ಸಿದ್ಧತೆಯೊಂದೂ ಈ ನಡುವೆ ನಡೆಯಿತು. ಈ ನಡುವೆ ವಿಎ ಹಾಗೂ ಆರ್‌ಐ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಸರ್ವೆಗೆ ಸಿದ್ಧತೆ ನಡೆಸುತ್ತಿದ್ದರು. ಈ ವೇಳೆ ಪೊಲೀಸರು ಬಂದು ನಾಲ್ಕು ದಿನ ದೀಪ ಇಡಬೇಡಿ, ಸರ್ವೇ ಮುಗಿದ ಬಳಿಕ ದೀಪ ಇಡುವಂತೆ ಸೂಚನೆ ನೀಡಿದರು. ಇದು ಕೊರಗಜ್ಜನೇ ಪೊಲೀಸರ ಮುಖಾಂತರ ಹೇಳಿಸಿದ್ದು ಎನ್ನುವುದು ಭಕ್ತರ ನಂಬಿಕೆ. ಇದಕ್ಕೆ ಪೂರಕವಾದ ಘಟನೆಯೊಂದು ಅಲ್ಲಿ ನಡೆಯಿತು. ಜೂ.15ಕ್ಕೆ ಪ್ರತಿಷ್ಠೆಗೆ ದಿನ ನಿಗದಿಪಡಿಸಿ ಅದಕ್ಕಿಂತ ಮುಂಚೆ ಒಂದು ವಿಚಿತ್ರ ಘಟನೆ ನಡೆಯಿತು. ಕೊರಗಜ್ಜನ ಮೂಲ ಕಟ್ಟೆಗೆ ಬೆಂಕಿ ಬಿದ್ದಿದ್ದು. ಅಸಲಿಗೆ ಪ್ರಸಾದ್ ಎನ್ನುವ ಹುಡುಗ ದೀಪ ಇಡುವಾಗ ಅದು ಕೊರಗಜ್ಜನ ಕಟ್ಟೆಗೆ ಹಾಕಿದ ಚಪ್ಪರಕ್ಕೆ ಬೆಂಕಿ ಹತ್ತಿತು ಎಂದು ಪ್ಲ್ಯಾನ್ ಮಾಡಿ ಕೊರಗಜ್ಜನ ಕಟ್ಟೆ ನಿರ್ಮಿಸದಂತೆ ಮಾಡಿದ್ದ ಒಂದು ಹುನ್ನಾರವಾಗಿತ್ತು. ಆದರೆ ಪೊಲೀಸರು ನಾಲ್ಕು ದಿನ ದೀಪ ಇಡಬೇಡಿ ಎಂದು ಸೂಚಿಸಿದ್ದರಿಂದ ಪ್ರಸಾದ್ ದೀಪ ಇಟ್ಟಿರಲಿಲ್ಲ. ಸ್ವತಃ ಪೊಲೀಸರೇ ಸಾಕ್ಷಿ ಇರುವಾಗ ಪ್ರಸಾದ್ ದೀಪ ಇಟ್ಟಿಲ್ಲ ಎನ್ನುವುದಕ್ಕೆ ಸ್ವತಃ ಪೊಲೀಸರೇ ಪ್ರಮುಖ ಸಾಕ್ಷಿಯಾದರು. ಈ ಮೂಲಕ ಕೊರಗಜ್ಜ ತನ್ನ ಪವಾಡ ತೋರಿಸಿದ ಎನ್ನುವುದು ಊರವರು ಹೇಳುತ್ತಾರೆ. ಈ ಕೊರಗಜ್ಜನ ಕಟ್ಟೆಗೆ ಬೆಂಕಿ ಇಟ್ಟ ಪ್ರಕರಣವೂ ರೋಚಕವಾಗಿದೆ. ಇಲ್ಲಿ ಕೊರಗಜ್ಜನ ಇನ್ನೊಂದು ಪವಾಡವೂ ನಡೆಯಿತು. ಇಲ್ಲದೇ ಹೋಗಿದ್ದರೆ ಕೊರಗಜ್ಜನ ಚಪ್ಪರಕ್ಕೆ ಬೆಂಕಿ ಹಚ್ಚಿದ್ದು ರಾಜೇಶ್ ಅಣ್ಣ ಹರೀಶ್ ಎಂದು ಗೊತ್ತಾಗಬೇಕಾ? ಅಸಲಿಗೆ ಈ ಮುಂಚೆ ಹರೀಶ್ ಕೂಡಾ ಕೊರಗಜ್ಜನ ಕಟ್ಟೆಗೆ ದೀಪ ಇಡುತ್ತಿದ್ದ. ಆದರೆ ರಾಜೇಶ್ ಮನೆಯವರು ಇವನಿಗೆ ಕುಡಿಯಲು ಕೊಟ್ಟು ಬ್ರೈನ್‌ವಾಶ್ ಮಾಡಿ ಕೊರಗಜ್ಜನ ಸೇವೆಯಿಂದ ವಂಚಿತರನ್ನಾಗಿ ಮಾಡಿದ್ದರು. ಮೊದಲು ಈ ಮನುಷ್ಯ ಊರವರ ಜೊತೆ ಗುರುತಿಸಿಕೊಂಡಿದ್ದ.

ಹರೀಶ್ ಕಂಠಪೂರ್ತಿ ಕುಡಿದು ಕೊರಗಜ್ಜನ ಮೂಲ ಕಟ್ಟೆಯ ಚಪ್ಪರಕ್ಕೆ ಬೆಂಕಿ ಇಡುತ್ತಿದ್ದಾಗ ಅಲ್ಲಿಬ್ಬರು ಬೀಡಿ ಕಟ್ಟುವ ಹೆಂಗಸರ ಕಣ್ಣಿಗೆ ಬಿತ್ತು. ಹರೀಶ್ ಲೈಟರ್ ತೆಗೆದುಕೊಂದು ಚಪ್ಪರಕ್ಕೆ ಬೆಂಕಿ ಕೊಟ್ಟಾಗ ಅದು ಉರಿಯಲಿಲ್ಲ. ಇದರಿಂದ ರೋಸಿ ಹೋದ ಹರೀಶ್ ಕೊರಗಜ್ಜನ ಕಟ್ಟೆಯಲ್ಲಿದ್ದ ಹಣತೆಗೆ ಬೆಂಕಿ ಹಚ್ಚಿ ಹಣತೆಯ ಮುಖಾಂತರ ಚಪ್ಪರಕ್ಕೆ ಬೆಂಕಿ ಕೊಟ್ಟ. ಆಗ ಈ ಬೀಡಿಯ ಹೆಣ್ಮಕ್ಕಳು ಅದರ ವಿಡಿಯೋ ತೆಗೆದು ಕಳಿಸಿದ್ದರು. ಹೀಗೆ ಆರೋಪಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ. ಕೊನೆಗೆ ಚಪ್ಪರಕ್ಕೆ ಹತ್ತಿದ್ದ ಬೆಂಕಿಯನ್ನು ನಂದಿಸಲಾಯಿತು. ಇದೊಂದು ಇಡೀ ಊರಲ್ಲೇ ಬಿಸಿ ಬಿಸಿ ಸುದ್ದಿಯಾಯಿತಲ್ಲದೆ, ರಾಜ್ಯಮಟ್ಟದ ಸುದ್ದಿವಾಹಿನಿಗಳೂ ವರದಿ ಮಾಡಿದವು. ಕೊರಗಜ್ಜನ ಕಟ್ಟೆಗೆ ಬೆಂಕಿ ಬಿದ್ದುದರಿಂದ ಊರವರು ಕೆನಲಿ ಕೆಂಡವಾಗಿ ಪ್ರತಿಭಟನೆ ಹಮ್ಮಿಕೊಂಡರು. ಆಗ ಎಸ್ಐ ಸೌಮ್ಯ, ಪುತ್ತೂರು ಡಿವೈಎಸ್ಪಿ ಗಾನ ಕುಮಾರಿ, ತಹಶೀಲ್ದಾರ್ ಸ್ಪಾಟ್ ವಿಸಿಟ್ ಮಾಡಿ ಜನರ ಮನವೊಲಿಸಿ ಪ್ರತಿಭಟನೆಯನ್ನು ನಿಲ್ಲಿಸಿದರು. ಕೊನೆಗೆ ವಿಚಾರಣೆ ನಡೆಸಿದಾಗ ಕಟ್ಟೆಗೆ ಬೆಂಕಿ ಕೊಡುವಲ್ಲಿ ಶಾಮೀಲಾದ ರಮೇಶ್ ಕುಡುಮೇರು, ಡಾ. ರಾಜೇಶ್ ಬರ್ದಿಲ, ಓಂ ಪ್ರಸಾದ್, ನಮ್ಮ ಬಂಟ್ವಾಳ ವೆನ್‌ಸೈಟ್‌ನ ಪ್ರಶಾಂತ್ ಹಾಗೂ ಹರೀಶ್ ಎಂಬವರ ಬಗ್ಗೆ ದೂರು ದಾಖಲಾಯಿತು. ಗಾನ ಕುಮಾರಿ ಪ್ರದೇಶದಲ್ಲಿ ಸೆಕ್ಷನ್ 144 ಹಾಕಿದರು.

ಈಗ ಪ್ರಕರಣದ ಕೊನೆಯ ಘಟ್ಟ ಇನ್ನೂ ಇಂಟರೆಸ್ಟಿoಗ್ ಆಗಿದೆ. ಇಷ್ಟೆಲ್ಲಾ ಪ್ರಹಸನ ನಡೆಯುವಾಗ ಸರ್ವೆ ನಡೆಸಲು ಮತ್ತೊಂದು ಸಮಯ ಕೂಡಿ ಬಂದಿತು. ಸರ್ವೆಯ ಜವಾಬ್ದಾರಿ ತೆಗೆದುಕೊಂಡವರು ತಹಶೀಲ್ದಾರ್ ಸುರೇಶ್ ಕುಮಾರ್. ಇವರು ಮಾಡಿದ ಕಾರ್ಯವನ್ನು ನೋಡಿ ಊರವರೇ ಬೆಚ್ಚಿ ಬೆರಗಾದರು. ಯಾಕೆಂದರೆ ಕೊರಗಜ್ಜನೇ ನಿಂತು ಈ ಕೆಲಸ ಮಾಡುತ್ತಿದ್ದಾನೆ ಎನ್ನುವಂಥಾ ಸನ್ನಿವೇಷ ನೆನಪಿಸುವಂತಿತ್ತು. ಪಟ್ಟ ಜಾಗ ಬಿಟ್ಟು ಕೊರಗ ಕಲ್ಲ್ಗೆ ವ್ಯಾಪ್ತಿಯ ವಿವಾದಿತ ಜಾಗವನ್ನು ಸೀಲ್ ಮಾಡಿ ಅದರೊಳಗಡೆ ಯಾರೂ ಹೋಗದಂತೆ ಹಗ್ಗ ಕಟ್ಟಿದರು.

ಜುಲೈ 17ರಂದು ಸರ್ವೇ ನಿರಾತಂಕವಾಗಿ ನಡೆಯುತ್ತದೆ. ಆಗ ಪತ್ತೆಯಾಗಿದ್ದೇನೆಂದರೆ ಕೊರಗ ಕಲ್ಲ್ ಇದ್ದ ಜಾಗ ಸರ್ಕಾರಿ ಜಾಗವಾಗಿದ್ದು, ಸ್ಥಳ ಬೆಳ್ತಂಗಡಿಗೆ ಸೇರಿತ್ತದೆ ಎನ್ನುವ ಸತ್ಯ. ಆದ್ದರಿಂದ ಈ ಜಾಗದ ಎಲ್ಲಾ ಜವಾಬ್ದಾರಿಯನ್ನು ತಹಶೀಲ್ದಾರ್ ಸುರೇಶ್ ಕುಮಾರ್ ವಹಿಸಿಕೊಂಡರು. ಈ ಜಾಗ ಕಂದಾಯ ಇಲಾಖೆಗೆ ಸೇರುವುದರಿಂದ ಒಂದು ತಿಂಗಳು ಯಥಾ ಸ್ಥಿತಿ ಕಾಪಾಡಬೇಕು. ಅಲ್ಲಿಯ ತನಕ ಯಾರೂ ದೀಪ ಇಡುವ ಹಾಗಿಲ್ಲ. ಸಾರ್ವಜನಿಕರು ಕೇವಲ ಕೈ ಮುಗಿದು ಹೋಗ್ಬೇಕು. ಇಲ್ಲಿ ಯಾರೂ ಅಧಿಕ ಪ್ರಸಂಗ ಮಾಡದೆ ಸರ್ಕಾರದ ಆದೇಶವನ್ನು ಚಾಚೂ ತಪ್ಪದಂತೆ ಪಾಲಿಸಬೇಕು ಎಂದು ಹಿರಿಯಜ್ಜನಂತೆ ಊರವರಿಗೆ, ರಾಜೇಶ್ ಮನೆಯವರಿಗೆ ಬುದ್ಧಿವಾದ ಹೇಳಿದರು. ಅಗಸ್ಟ್ 17ರಂದು ವೇಣೂರು ಪಂಚಾಯತ್ ಸಭಾ ಭವನ ಮೀಟಿಂಗ್ ನಡೆಸುವ ಕುರಿತು ನೋಟೀಸ್ ಕೊಟ್ಟು ಸಭೆ ಕರೆದರು. ಕಟ್ಟೆಯ ಜವಾಬ್ದಾರಿ ಊರವರಿಗೆ ಸೇರಬೇಕಾ ಅಥವಾ ರಾಜೇಶ್ ಮನೆಯವಿಗೆ ಸೇರಬೇಕಾ ಎಂದು ಕೈ ಎತ್ತುವಂತೆ ಸೂಚಿಸಿದರು. ಆಗ ಅಲ್ಲಿದ 70 ಮಂದಿ ಸಾರ್ವಜನಿಕರು ಊರವರ ಪರವಾಗಿ ಕೈ ಎತ್ತಿದರೆ ಕೇವಲ ಆರು ಮಂದಿ ರಾಜೇಶ್ ಪರವಾಗಿ ಕೈ ಎತ್ತಿದರು. ಈ ಆರು ಮಂದಿ ರಾಜೇಶ್ ಮನೆಯವರೇ ಎನ್ನುವುದು ವಿಶೇಷ. ಕೊನೆಗೆ ಪ್ರಸಾದ್ ದೀಪ ಇಡಬೇಕು ಎಂದು ತೀರ್ಮಾನಿಸಲಾಯಿತು.

ಇದಾದ ನಂತರ ರಾಜೇಶ್ ಮನೆಯವರು ಮತ್ತೊಂದು ಘಟನೆಗೆ ಸಾಕ್ಷಿಯಾದರು. ಆ.31ರಂದು ಇವರು ಕೆಸರು ಕಲ್ಲು ಹಾಕಿದ್ದ ಜಾಗದಲ್ಲಿ ಕೊರಗಜ್ಜನ ಶಿಲಾ ಕಲ್ಲು ಪ್ರತಿಷ್ಠಾಪಿಸಿ ಗುಳಿಗನ ದೀಪವನ್ನು ಅಲ್ಲಿಂದ ತೆಗೆದರು. ಈ ಬಗ್ಗೆಯೂ ಪೊಲೀಸರಿಗೆ ದೂರು ಹೋಗಿ ಕೊನೆಗೆ ಅಲ್ಲಿ ಬೀಟ್ ಪೊಲೀಸರನ್ನು ನಿಯೋಜಿಸಲಾಯಿತು. ಕೊರಗಜ್ಜನ ಕಲ್ಲು ಇಡುವಾಗ ಯಾವುದೇ ವಿಧಾನವನ್ನು ಪಾಲಿಸಿರಲಿಲ್ಲ. ಅಜ್ಜನ ಪ್ರತಿಮೆಯನ್ನು ಇಟ್ಟು ಇದರಿಂದ ಊರವರು ತಲೆ ಬಿಸಿ ಮಾಡಿಕೊಂಡು ಅದನ್ನು ಊರವರೇ ಸೇರಿ ಧ್ವಂಸಗೊಳಿಸುವAತೆ ಮಾಡಿ, ಕೊರಗಜ್ಜನ ಮೂರ್ತಿ ಒಡೆದರು ಎಂದು ಕಥೆ ಕಟ್ಟಿ ದುಷ್ಟರನ್ನಾಗಿ ಮಾಡುವ ಕ್ರಿಮಿನಲ್ ಯೋಜನೆಯಲ್ಲಿ ಅವರು ಈ ಕೃತ್ಯ ಎಸಗಿರುವುದು ಆಮೇಲೆ ಬೆಳಕಿಗೆ ಬಂದಿತು. ಕೊನೆಗೆ ಸೆ.2ರಂದು ತಹಶೀಲ್ದಾರ್ ಮತ್ತೆ ಸೆ.2ರಂದು ಆಗಮಿಸಿ ಆದೇಶ ಉಲ್ಲಂಘನೆ ಮಾಡಿದ್ದಾರೆಂದು ಕಂದಾಯ ಇಲಾಖೆಗೆ ಸೇರಿದ್ದ ಜಾಗವನ್ನು ತೆರವು ಮಾಡಿ, ಮೂರ್ತಿಯನ್ನು ತೆಗೆಸಿ ಇಡೀ ಜಾಗವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದ್ದಾರೆ.

ಆದ್ರೆ ಈಗ ಮೇಗಿನ ಬಾಡರು ಮನೆತನದವರು ಇದು ನಮ್ಮ ಮನೆತನದ ಕೊರಗಜ್ಜನ ಕಟ್ಟೆ ಎಂದು ತಕರಾರು ಎತ್ತಿ ತಮ್ಮದೇ ಜಾಗದಲ್ಲಿ ಹೊಸ ಕೊರಗಜ್ಜನ ಕಟ್ಟೆಯನ್ನ ನಿರ್ಮಿಸಿದ್ದಾರೆ. ಈಗ ಇಲ್ಲಿ ಎರಡು ಕೊರಗಜ್ಜನ ಕಟ್ಟೆಯಾಗಿ, ಇದು ಸಾರ್ವಜನಿಕರ ಭಾವನೆಗೆ ನೋವನ್ನ ಉಂಟು ಮಾಡಿದ್ದು, ಇವರ ನಡುವೆ ವಾದ ವಿವಾದಗಳು ನಡೆದಿತ್ತು. ಈ ಬಗ್ಗೆ ಜಿಲ್ಲಾಧಿಕಾರಿ ದೂರನ್ನ ನೀಡಲಾಗಿದ್ದು, ನವೆಂಬರ್ 15ರಂದು ಜಿಲ್ಲಾಧಿಕಾರಿ ಮುಲ್ಲೈ ಮಗಿಲನ್ ಹಾಗೂ ದಕ್ಷಿಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ತಂಡ ಎರಡು ಕಡೆಯ ಕೊರಗಜ್ಜ ಕಟ್ಟೆಯ ಜಾಗವನ್ನು ಪರಿಶೀಲನೆ ನಡೆಸಿದರು.

ಇನ್ನೂ ಈ ಪ್ರಕರಣದ ಬಗ್ಗೆ ಪೂಜೆ ಮಾಡುವ ಕುರಿತು ಬೆಳ್ತಂಗಡಿ ಆಡಳಿತ ಸೌಧದಲ್ಲಿ, ಎರಡು ತಂಡದ ಸದಸ್ಯರ ಜೊತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ತಹಶೀಲ್ದಾರ್ ನೇತೃತ್ವದ ಸಮಿತಿಯನ್ನ ರಚಿಸಿ, ಊರಿನ ಜನ ಹಾಗೂ ಮಾಗಣೆಗುತ್ತು ಮನೆತನದವರು ಒಟ್ಟಾಗಿ ಸೇರಿ ವರ್ಷಾವಧಿ ಸೇವೆಯನ್ನ ನೀಡಬೇಕು.. ಈ ಬಗ್ಗೆ ಬಾಂಡ್ ಬರೆದುಕೊಡಬೇಕು. ಆ ಬಳಿಕ ಕಾನೂನಿನ ಚೌಕಟ್ಟಿನಲ್ಲಿ ಏನು ಕಾನೂನು ಇದೆಯೋ ಅದರಂತೆ ಕ್ರಮ ಕೈಕೊಳ್ಳುತ್ತೇವೆ ಎಂದು ಡಿಸಿ ಸೂಚಿಸಿದ್ದಾರೆ. ಇದಕ್ಕೆ ಎರಡು ಕಡೆಯವರು ಒಪ್ಪಿಕೊಂಡಿದ್ದು ವಿವಾದಕ್ಕೆ ಡಿಸಿ ನೇತೃತ್ವದಲ್ಲಿ ತಾತ್ಕಾಲಿಕ ಅಂತ್ಯ ಸಿಕ್ಕಿದೆ.