ಗೆದ್ದ ವಿಶ್ವಕಪ್ ಮೇಲೆ ಸ್ವಲ್ಪನಾದರೂ ಗೌರವ ಬೇಡ್ವಾ? ಕಾಲ ಕೆಳಗೆ ಟ್ರೋಫಿ ಇಟ್ಕೊಂಡ ಮಿಚೆಲ್ ; ಕ್ರಿಕೆಟ್ ಪ್ರೇಮಿಗಳ ಆಕ್ರೋಶ – ಕಹಳೆ ನ್ಯೂಸ್
ಅಹಮದಾಬಾದ್ : ಆಸ್ಟ್ರೇಲಿಯಾ 6ನೇ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ. ಆದರೆ ಇದೀಗ ತಂಡದ ಆಟಗಾರ ಮಿಚೆಲ್ ಮಾರ್ಷ್ ಅವರು ಟ್ರೋಫಿ ಗೆದ್ದ ಬಳಿಕ ತೋರಿದ ವರ್ತನೆಗೆ ಎಲ್ಲಡೆ ಆಕ್ರೋಶ ವ್ಯಕ್ತವಾಗಿದೆ. ಡ್ರೆಸ್ಸಿಂಗ್ ರೂಮ್‌ನಲ್ಲಿ ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟು ಕ್ರಿಕೆಟ್ ಪ್ರೇಮಿಗಳಿಂದ ಟೀಕೆಗೆ ಗುರಿಯಾಗಿದ್ದಾರೆ.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತವನ್ನು 6 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಆಸ್ಟ್ರೇಲಿಯಾ ಆರನೇ ಬಾರಿಗೆ ವಿಶ್ವಕಪ್ ಗೆದ್ದಿತು. ಆಸ್ಟ್ರೇಲಿಯಾ ತಂಡದ ಸಂಭ್ರಮದ ಹಲವು ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದರ ನಡುವೆ ಮಿಚೆಲ್ ಮಾರ್ಷ್ ಅವರು ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟ ಫೋಟೊ ಎಲ್ಲಡೆ ವೈರಲ್ ಆಗಿದೆ.
ವೈರಲ್ ಆದ ಈ ಫೋಟೋದಲ್ಲಿ ಮಿಚೆಲ್ ಮಾರ್ಷ್ ಅವರು ವಿಶ್ವಕಪ್ ಟ್ರೋಫಿಯ ಮೇಲೆ ತಮ್ಮ ಪಾದವಿಟ್ಟು ಕುಳಿತಿದ್ದಾರೆ. ಇದನ್ನು ಖಂಡಿಸಿರುವ ಕ್ರಿಕೆಟ್ ಅಭಿಮಾನಿಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಇದು ವಿಶ್ವಕಪ್‌ಗೆ ಮಾಡಿದ ಅವಮಾನ ಎಂದು ಆಕ್ರೋಶ ಹೊರಹಾಕಿದ್ದಾರೆ. ಫೈನಲ್ ಪಂದ್ಯಕ್ಕೂ ಮುನ್ನ ಮಾರ್ಷ್ ಅವರು ಆಸ್ಟ್ರೇಲಿಯಾ ತಂಡ 2 ವಿಕೆಟ್‌ಗೆ 450 ರನ್ ಬಾರಿಸುತ್ತದೆ, ಭಾರತ 65 ರನ್‌ಗೆ ಆಲೌಟ್ ಆಗುತ್ತದೆ ಎಂದು ದರ್ಪದ ಮಾತುಗಳನ್ನಾಡಿದ್ದರು. ಫೈನಲ್ ಪಂದ್ಯದಲ್ಲಿ ಮಾರ್ಷ್ ಅವರು 15 ಎಸೆತ ಎದುರಿಸಿ ತಲಾ 1 ಬೌಂಡರಿ ಮತ್ತು ಸಿಕ್ಸರ್ ಬಾರಿಸಿ 15ರನ್‌ಗೆ ಔಟಾಗಿದ್ದರು.
ನರೇಂದ್ರ ಮೋದಿ ಸ್ಟೇಡಿಯಮ್‌ನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆಯಿತು. ಬ್ಯಾಟಿಂಗ್ ವೈಫಲ್ಯ ಎದುರಿಸಿದ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 240 ರನ್‌ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 43 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿ ಗೆಲುವು ಸಾಧಿಸಿತು. ಟ್ರಾವಿಸ್ ಹೆಡ್ 137 ರನ್ ಬಾರಿಸಿ ಭಾರತದ ಗೆಲುವನ್ನು ಕಸಿದರು. ಆಸೀಸ್ ಪಾಲಿಗೆ ಗೆಲುವಿನ ರೂವಾರಿ ಎನಿಸಿಕೊಂಡರು.
ತವರು ನೆಲದಲ್ಲಿ ನಡೆದ ವಿಶ್ವ ಕಪ್ ಆವೃತ್ತಿಯಲ್ಲಿ ಟ್ರೋಫಿ ಗೆದ್ದೇ ಗೆಲ್ಲುತ್ತೇವೆ ಎಂಬ ಟೀಮ್ ಇಂಡಿಯಾದ ಹುಮ್ಮಸ್ಸು ಬತ್ತಿ ಹೋಯಿತು. ನರೇಂದ್ರ ಮೋದಿ ಸ್ಟೇಡಿಯಮ್‌ನಲ್ಲಿ ನಡೆದ ಏಕ ದಿನ ವಿಶ್ವ ಕಪ್‌ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ತಲೆ ಬಾಗಿದ ಟೀಮ್ ಇಂಡಿಯಾದ ಪ್ರಯತ್ನಗಳು ಭಗ್ನವಾಗಿದೆ. 2003ರ ವಿಶ್ವ ಕಪ್‌ನ ಫೈನಲ್ ಫಲಿತಾಂಶವು ಮತ್ತೊಂದು ಬಾರಿ ಪುನರಾವರ್ತನೆಯಾಗಿದೆ. ಅಂದು ಭಾರತ ತಂಡ ಆಸ್ಟ್ರೇಲಿಯಾ ತಂಡದ ವಿರುದ್ಧವೇ 125 ರನ್‌ಗಳಿಂದ ಸೋಲು ಕಂಡಿತ್ತು