Sunday, January 19, 2025
ಸುದ್ದಿ

ಪದವಿ ಪೂರ್ವ ಶಿಕ್ಷಣ ಇಲಾಖೆ ಯಥಾಸ್ಥಿತಿಗೆ : ಸರಕಾರಕ್ಕೆ ಮಂಗಳೂರು ವಿ.ವಿ.ಯ ಮಾಜೀ ಸಿಂಡಿಕೇಟ್ ಸದಸ್ಯ ಹರೀಶ್ ಆಚಾರ್ಯ ಅಗ್ರಹ – ಕಹಳೆ ನ್ಯೂಸ್

ಮಂಗಳೂರು : ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ಜಿಲ್ಲಾ ಪಂಚಾಯತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಅಧೀನಕ್ಕೆ ಒಳಪಡಿಸುವಂತೆ ರಾಜ್ಯ ಸರಕಾರವು ಹೊರಡಿಸಿರುವ ಆದೇಶವನ್ನು ತಕ್ಷಣವೇ ಹಿಂಪಡೆಯುವಂತೆ ಮಂಗಳೂರು ವಿಶ್ವವಿದ್ಯಾನಿಲಯದ ಮಾಜೀ ಸಿಂಡಿಕೇಟ್ ಸದಸ್ಯರಾದ ಶ್ರೀ ಎಸ್ ಆರ್ ಹರೀಶ್ ಆಚಾರ್ಯ ಅಗ್ರಹಿಸಿದ್ದಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ಈ ಹಿಂದಿನಂತೆಯೇ ಜಿಲಾಧಿಕಾರಿಯವರ ಅಧೀನದಲ್ಲಿಯೇ ಯಥಾಸ್ಥಿತಿಯಲ್ಲಿ ಮುಂದುವರಿಸಬೇಕೆಂದು ಅವರು ಸರಕಾರವನ್ನು ಆಗ್ರಹಿಸಿದ್ದಾರೆ.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಹೆಸರನ್ನು ಶಾಲಾ ಶಿಕ್ಷಣ ( ಪದವಿ ಪೂರ್ವ) ಇಲಾಖೆ ಎಂದು ಬದಲಾಯಿಸಿ ಪ್ರೌಢ ಶಾಲಾ ವಿಭಾಗದಲ್ಲಿ ವಿಲೀನಗೊಳಿಸುವ ಪ್ರಕ್ರಿಯೆಗೆ ಸರಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಪದವಿ ಪೂರ್ವ ಶಿಕ್ಷಣ ಇಲಾಖೆಯ ಪರೀಕ್ಷಾ ವಿಭಾಗವನ್ನು ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಯಲ್ಲಿ ವಿಲೀನಗೊಳಿಸಲಾಗಿದೆ. ಈ ಮೂಲಕ ಪದವಿ ಪೂರ್ವ ಶಿಕ್ಷಣ ವ್ಯವಸ್ಥೆಯನ್ನೇ ರಾಜ್ಯ ಸರಕಾರ ಕಡೆಗಣಿಸುತ್ತಿದೆ. ಇದು ರಾಜ್ಯ ಸರಕಾರದ ಖಂಡನೀಯ ನಡೆಯಾಗಿದೆ. ಇದರಿಂದ ಪದವಿ ಪೂರ್ವ ಕಾಲೇಜಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಧ್ಯಾಪಕರು ತೀವ್ರ ಆತಂಕಕ್ಕೊಳಗಾಗಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶೈಕ್ಷಣಿಕ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಗಳು ಏಕಪಕ್ಷೀಯವಾಗಿ ನಡೆಯಬಾರದು. ಅದು ಎಲ್ಲರನ್ನೂ ಒಳ್ಳಗೊಂಡು ಸರ್ವ ಸಮ್ಮತದಿಂದ ಕೂಡಿರಬೇಕು. ಈ ಹಿನ್ನಲೆಯಲ್ಲಿ ಅದನ್ನು ಒಳಗೊಳ್ಳುವ ಕಾಲೇಜು ಪ್ರಾಚಾರ್ಯರು, ಉಪನ್ಯಾಸಕರು ಮತ್ತು ಶಿಕ್ಷಣ ತಜ್ಞರೊಂದಿಗೆ ಚರ್ಚಿಸಿ ಸಮನ್ವಯವನ್ನು ಸಾಧಿಸಿಕೊಂಡು ಮಾಡಬೇಕಾಗಿದೆ. ಆದುದರಿಂದ ರಾಜ್ಯ ಸರಕಾರವು ತಕ್ಷಣವೇ ಈ ಬಗ್ಗೆ ತೆಗೆದುಕೊಂಡ ಎಲ್ಲಾ ಪ್ರಕ್ರಿಯಗಳನ್ನು ನಿಲ್ಲಿಸಿ ತಕ್ಷಣವೇ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರ ಸಂಘದ ಪ್ರತಿನಿಧಿಗಳು, ಉಪನ್ಯಾಸಕರ ಸಂಘದ ಪ್ರತಿನಿಧಿಗಳು ಮತ್ತು ಶಿಕ್ಷಣ ತಜ್ಞರ ಸಭೆಯನ್ನು ಕರೆದು ಚರ್ಚಿಸಿ ಒಮ್ಮತದಿಂದ ತೀರ್ಮಾನಿಸಲು ಕ್ರಮವಿಡಬೇಕೆಂದು ಹರೀಶ್ ಆಚಾರ್ಯ ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು