Monday, January 20, 2025
ಸುದ್ದಿ

ಮಂಗಳೂರಿನಲ್ಲಿ ತ್ಯಾಜ್ಯ ವಿಲೇವಾರಿ ಕುರಿತು ಸೃಜನಾತ್ಮಕ ಅರಿವು ಮೂಡಿಸಲು ಮುಂದಾದ ದಿಶಾ ಶೆಟ್ಟಿ ಕಟ್ಲ ನೇತೃತ್ವದ ಕೆನರಾ ಕಾಲೇಜು ವಿದ್ಯಾರ್ಥಿಗಳ ತಂಡ – ಕಹಳೆ ನ್ಯೂಸ್

ಮಂಗಳೂರು : ಪ್ರಸಕ್ತ ಕಾಲಘಟ್ಟದಲ್ಲಿ, ಎದುರಾಗಿರುವ ಗಂಭೀರ ಸಮಸ್ಯೆಗಳಲ್ಲಿ ಒಂದು ತ್ಯಾಜ್ಯ ವಿಲೇವಾರಿ.

ನಗರೀಕರಣದಿಂದ ಎನ್ನಲೋ ಇಲ್ಲಾ ಮನುಷ್ಯನ ಮಾನಸಿಕ ಚಂಚಲತೆಯಿಂದಲೋ, ಕುಟುಂಬಕ್ಕೊಂದು ಮನೆಗಳನ್ನು ನಿರ್ಮಿಸಿಕೊಂಡೋ ಅಥವಾ ಅಂತಸ್ತುಗಳನ್ನು ಖರೀದಿಸಿ , ನಗರಗಳಲ್ಲಿ ವಾಸಿಸುವ ಜನರಿಗೆ, ತ್ಯಾಜ್ಯ ವಿಲೇವಾರಿಗೆ ಏನು ಹೊಸ ಜಾಗ ಬೇಕಾಗಿಲ್ಲ.. ತಮ್ಮಿಂದ ಅನತಿ ದೂರದಲ್ಲಿ ಪ್ರಕೃತಿ ನಿರ್ಮಿತ ಖಾಲಿ ಜಾಗ ಇರುತ್ತದಲ್ಲಾ , ಕಸ ಹಾಕಲಿಕ್ಕೋಸ್ಕರವೇ ಮೀಸಲಿಟ್ಟ ಜಾಗ ಎನ್ನುವಂತೆ , ಒಣ ಹಸಿ ಅದು ಇದು ಅಂತ ಇದ್ದಬದ್ದದ್ದನ್ನೆಲ್ಲ ತಂದು ಸುರಿಯುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನೊಂದು ಗಂಭೀರ, ತಿಳಿದುಕೊಳ್ಳಲೇಬೇಕಾದ ವಿಷಯ ಎಂದರೆ, ಇಂದು ಮಾರಕವಾಗಿ ಕಾಡುತ್ತಿರುವ ಕ್ಯಾನ್ಸರ್ ನಂತಹ ಮಹಾಮಾರಿ ರೋಗಗಳಿಗೆ , ತ್ಯಾಜ್ಯಗಳ ಅಸಮರ್ಪಕ ವಿಲೇವಾರಿಯಿಂದಲೇ ಬರುತ್ತಿದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ.
ಯಾವುದೋ ಹಸಿಪದಾರ್ಥಗಳ ತ್ಯಾಜ್ಯದಿಂದ ಅಲ್ಲ , ಇಂತಹ ಒಂದು ಬಗೆಯ ತ್ಯಾಜ್ಯ ಇದೆ ಎಂದು ಯಾರೂ ಆಲೋಚಿಸದ , ಇಲೆಕ್ಟ್ರಾನಿಕ್ ತ್ಯಾಜ್ಯಗಳಿಂದ ಈ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿರುವುದು.

ಮನೆಯಲ್ಲಿ , ಹಾಗೂ ಬಹುಮುಖ್ಯವಾಗಿ ಇಲೆಕ್ಟ್ರಾನಿಕ್ ಅಂಗಡಿಗಳಲ್ಲಿ , ಮಾಲ್ ಗಳಲ್ಲಿ , ಹಾಳಾದ ಬಲ್ಬುಗಳು, ಮೊಬೈಲ್ ಗಳು, ಬ್ಯಾಟರಿಗಳು, ಹಾಗೂ ಇನ್ನಿತರ ಇಲೆಕ್ಟ್ರಾನಿಕ್ ವಸ್ತುಗಳನ್ನು ಯಾವುದೋ ವಿಶೇಷ ವಿಲೇವಾರಿ ಘಟಕಕ್ಕೆ ತಲುಪಿಸುತ್ತಿಲ್ಲ..‌ಬದಲಾಗಿ ವ್ಯವಹಾರದ ಒಂದೇ ಆಸೆಯಿಂದ ಗುಜರಿ ಅಂಗಡಿಗಳಿಗೆ , ಹಾಗೂ ಇನ್ನಿತರ ಕಸದ ರಾಶಿಗೆ ಎಸೆಯಲಾಗುತ್ತಿದೆ..
ಆದರೆ ಇದರ ಪರಿಣಾಮ , ಜಲಮಾಲಿನ್ಯ ಹಾಗೂ ಭೂಮಾಲಿನ್ಯ ಅಲ್ಲದೇ ವಾಯುಮಾಲಿನ್ಯ ಕೂಡ..
ಇಂತಹ ಗಂಭೀರ ಸಮಸ್ಯೆಯನ್ನು ಯಾರೂ ಕೂಡ ಪರಿಗಣನೆಗೆ ತೆಗೆದುಕೊಳ್ಳದಿರುವುದು, ಅಭಿವೃದ್ಧಿಯ ಪಥದಲ್ಲಿರುವ ನಮಗೇ ಮಾರಕ..

ಆದರೆ, ಈ ಸಮಸ್ಯೆಗೆ ಕೆಲವೊಂದು ಕಡೆಗಳಲ್ಲಿ ಈಗಾಗಲೇ ಪುಟ್ಟ ರೀತಿಯಲ್ಲಿ ಪರಿಹಾರಗಳನ್ನು ಕಂಡುಕೊಳ್ಳಲಾಗಿದೆ..

ಮಂಗಳೂರಿನ ಖ್ಯಾತ ಕೆನರಾ ಕಾಲೇಜಿನ 13 ವಿದ್ಯಾರ್ಥಿ/ನಿಯರ ತಂಡ..(BBA wing)

ತಮ್ಮ ಪಾಠದ ಅಂಗವಾದ ಯೋಜನಾ ವಿಷಯದ ಅಂಗವಾಗಿಯೂ ಹಾಗೂ ಸೃಜನಾತ್ಮಕವಾದ ಅರಿವು ಮೂಡಿಸುವಂತಹ ಆಲೋಚನೆಗೂ ಪೂರಕವಾಗಿ ಖ್ಯಾತ ಯಕ್ಷಗಾನ ಕಲಾವಿದೆ ಹಾಗೂ ಕೆನರಾ ಕಾಲೇಜು ವಿದ್ಯಾರ್ಥಿನಿ ಕು. ದಿಶಾ ಶೆಟ್ಟಿ ಕಟ್ಲ ನೇತೃತ್ವದಲ್ಲಿ ರಮ್ಯಾ, ಪೂರ್ಣಿಮಾ , ಜಾಸೀಂ, ಪ್ರಥ್ವೀಶ್, ಸೌರವ್, ವಿಶ್ರುತ್, ಕಿರಣ್ , ಸಂಶುದ್ದೀನ್, ತೇಜಸ್ವಿನಿ, ಸುನೇಹಾ, ವೈಶಾಖ್, ಅಕ್ಷಯ್ ಯವರನ್ನೊಳಗೊಂಡ ಈ ಹದಿಮೂರು ಜನರ ತಂಡ , ಮಂಗಳೂರಿನ ಮಹಾನಗರ ಪಾಲಿಕೆಯ ಪರಿಸರ ತಜ್ಞ ಅಭಿಯಂತರರಾದ ಮಧುರವರ ಅನುಮತಿ-ಸಹಕಾರದ ಮೇರೆಗೆ ,ತಮ್ಮ ಕೆನರಾ ಕಾಲೇಜಿನ ಉಪನ್ಯಾಸಕರೂ, ತಂಡದ ಮಾರ್ಗದರ್ಶಕರೂ ಆದ ಪುಷ್ಪಲತಾ ಪ್ರಭುರವರ ಸಹಕಾರದೊಂದಿಗೆ ಸಾಂಕೇತಿಕವಾಗಿ ಮಂಗಳೂರಿನ ಬೃಹತ್ ಸಿಟಿ ಸೆಂಟರ್ ಮಾಲ್ , ಹಾಗೂ ಮಂಗಳೂರಿನ ಆಸುಪಾಸಿನ ಪ್ರಖ್ಯಾತ ಇಲೆಕ್ಟ್ರಾನಿಕ್ ಅಂಗಡಿ ಗಳಿಗೆ ಭೇಟಿ ನೀಡಿ, ಅವರಿಗೆ ಇಲೆಕ್ಟ್ರಾನಿಕ್ ತ್ಯಾಜ್ಯಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ, ಅದರ ಸಮರ್ಪಕ ವಿಲೇವಾರಿಯ ವಿಧಾನಗಳನ್ನು ಹಂತಹಂತವಾಗಿ ತಿಳಿಯಪಡಿಸಿ, ಈ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರ ಪಾಲ್ಗೊಳ್ಳುವಿಕೆಗೆ ಪೂರಕವಾಗಿಯೂ, ಶ್ಲಾಘನಾರ್ಥಕವಾಗಿಯೂ ಕೆನರಾ ಕಾಲೇಜು ಹಾಗೂ ಮಂಗಳೂರು ಮಹಾನಗರಪಾಲಿಕೆಯ ಸಹಯೋಗದ ಪ್ರಮಾಣಪತ್ರ ವನ್ನು ತ್ಯಾಜ್ಯ ವಿಲೇವಾರಿಯ ಬಗ್ಗೆ ಅರಿತುಕೊಂಡ ಅಂಗಡಿ ಮಾಲಕರಿಗೆ ಹಸ್ತಾಂತರಿಸಿ, ಅವರ ಭಾಗಿತ್ವವನ್ನು ಖಚಿತಪಡಿಸಿಕೊಂಡಿತು.

ಕಾಲೇಜಿನ ಯೋಜನಾ ಪಠ್ಯವಾಗಿಯೇ ಅಲ್ಲದೆ, ಸಾಮಾಜಿಕ ಸ್ವಾಸ್ಥ್ಯಗಳ ಬಗ್ಗೆ ಪಠ್ಯೇತರವಾಗಿ ಚಿಂತನೆ ನಡೆಸುವ ಈ ಹದಿಮೂರು ಯುವಕ/ತಿಯರ ಬಳಗ, ಇಂತಹ ಜನೋಪಯೋಗಿ ಯೋಜನೆ ಕೈಗೊಂಡಿರುವುದು ಇದು ಮೊದಲೇನಲ್ಲ.

ಕಳೆದ ವರುಷ , ಮಂಗಳೂರಿನ ಬೀದಿಯಲ್ಲಿ ಓರ್ವ ಬಡ ವೃದ್ಧೆಯೋರ್ವರು, ತಾನು ನಡೆಯಲಾಗದಿದ್ದರೂ ಕಡಲೆಪುರಿ ಮಾರಿಕೊಂಡು ತನ್ನ ಜೀವನ ಸಾಗಿಸುವುದರ ಜೊತೆ , ವೃದ್ಧ ಅಶಕ್ತನಾದಂತಹ ಅವರ ಅಣ್ಣನನ್ನೂ ಸಾಕುತ್ತಾ ಬದುಕು ಸಾಗಿಸುತ್ತಿದ್ದದ್ದನ್ನು ಕಂಡು ಮನಕರಗಿ, ತಾವೆಲ್ಲಾ ಒಂದು ಕಡೆ ಸೇರಿ ಚಿಂತನೆ ನಡೆಸಿ , ಒಂದು ದಿನದ ಮಟ್ಟಿಗೆ ಆಕೆಯ ಪರವಾಗಿ, ಆಕೆಗೋಸ್ಕರ ತಾವು ಕಡಲೆಪುರಿಯನ್ನು ಮಾರಿ, ಆ ಬಂದ ಹಣದ ಜೊತೆಗೆ ಕೆಲ ಕೊಡುಗೈ ದಾನಿಗಳಿಂದ ಯಥಾನುಶಕ್ತಿ ಮೊತ್ತವನ್ನು ಸಂಗ್ರಹಿಸಿ , ವೃದ್ಧೆಯ ಕುಟುಂಬಕ್ಕೆ ಸ್ವಲ್ಪಮಟ್ಟಿಗಾದರೂ ಚೇತರಿಸಿಕೊಳ್ಳಲು ನೆರವಾಗುವ ಎನ್ನುವ ಮಾನವೀಯ ಕೈಂಕರ್ಯವನ್ನು ಕೈಗೊಂಡದ್ದು , ತುಳುನಾಡಿನ ಅದೆಷ್ಟೋ ಜನರ ಮನಸ್ಸಿಗೆ ಮುಟ್ಟಿತ್ತು..

ಅದೇ ರೀತಿ ಈ ಬಾರಿ ಸಾಮಾಜಿಕವಾಗಿ ಮುಂದುವರೆದಿರುವ ಈ ಉತ್ಸಾಹಿಗಳ ತಂಡದ ಅದ್ಭುತ ಚೈತನ್ಯಕ್ಕೆ ಮೆಚ್ಚಲೇಬೇಕು..

ಸಾಂಘಿಕವಾದ ಇಂತಹ ಪ್ರಯತ್ನಗಳು ಎಲ್ಲ ಯುವಮನಸ್ಕರಲ್ಲಿ ನಡೆಯಲಿ ಹಾಗೂ ಬಹುಮುಖ್ಯವಾಗಿ ತ್ಯಾಜ್ಯ( ಒಣತ್ಯಾಜ್ಯ , ಹಸಿತ್ಯಾಜ್ಯ ಹಾಗೂ ಇಲೆಕ್ಟ್ರಾನಿಕ್ ತ್ಯಾಜ್ಯ ಎಲ್ಲವೂ.) ವಿಲೇವಾರಿಯಂತಹ ಗಂಭೀರ ಸಮಸ್ಯೆಗಳ ಬಗ್ಗೆ ಇನ್ನಾದರೂ ಪ್ರತಿಯೊಬ್ಬರೂ ಎಚ್ಚೆತ್ತುಕೊಳ್ಳುವಂತಾಗಲಿ ಎನ್ನುವುದಷ್ಟೇ ಈ ಪ್ರಯತ್ನ ಹಿಂದಿರುವ ಉದ್ದೇಶ.

– ನ್ಯೂಸ್ ಡೆಸ್ಕ್ ಕಹಳೆ ನ್ಯೂಸ್ ಮಂಗಳೂರು