Thursday, January 23, 2025
ಸುದ್ದಿ

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಕನಸುಗಳು ಕಾರ್ಯಕ್ರಮದ ಸಮಾರೋಪ : ಕನಸುಗಳನ್ನು ಸಾಕಾರಗೊಳಿಸುವ ಕಡೆಗೆ ವಿದ್ಯಾರ್ಥಿಗಳು ಹೆಜ್ಜೆ ಹಾಕಬೇಕು : ರವೀಂದ್ರ ಪಿ – ಕಹಳೆ ನ್ಯೂಸ್

ಪುತ್ತೂರು : ಕನಸನ್ನು ಬಿತ್ತುವ ಮೂಲಕ ಶ್ರೇಷ್ಠ ಆಲೋಚನೆಗಳು ಹೊರಹೊಮ್ಮುತ್ತವೆ. ಕನಸುಗಳನ್ನು ಸಾಕಾರಗೊಳಿಸುವ ಕಡೆಗೆ ವಿದ್ಯಾರ್ಥಿಗಳು ಹೆಜ್ಜೆಯನ್ನು ಹಾಕಬೇಕು. ವಿವೇಕಾನಂದ ಸಂಸ್ಥೆಯು ಕನಸುಗಳು ಎಂಬ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಹೊಸ ಕನಸನ್ನು ಹುಟ್ಟು ಹಾಕುವ ಪ್ರಯತ್ನವನ್ನು ಮಾಡಿದೆ ಎಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ ಹೇಳಿದರು.

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಕನಸುಗಳಿಗೆ ವೇದಿಕೆ ನೀಡುವ ಕನಸುಗಳು-2022 ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಮ್ಮ ಜೀವನದಲ್ಲಿ ಬರುವ ಬೇರೆ ಬೇರೆ ಹಂತಗಳು ನಾವು ಮುಂದಿನ ದಿನಗಳಲ್ಲಿ ಏನಾಗುತ್ತೇವೆ ಎಂದು ನಿರ್ಣಯಿಸುತ್ತವೆ.ನಿದ್ದೆ ನಮ್ಮ ಜೀವಕ್ಕೆ ವಿಶ್ರಾಂತಿ ನೀಡುತ್ತದೆ ಆದರೆ ಗುರಿಯೆಡೆಗೆ ಸಾಗುವ ಸಾಧಕನಿಗೆ ನಿದ್ದೆಗೆಡುವುದೇ ವಿಶ್ರಾಂತಿ. ಈ ವಯಸ್ಸು ತನ್ನ ಜೀವನದ ಬಗೆಗೆ ಕನಸು ಕಟ್ಟಿಕೊಳ್ಳಲು ಸಶಕ್ತವಾದ ಸಮಯ. ನಮ್ಮ ಪ್ರತಿಭೆ, ಸಾಮರ್ಥ್ಯ, ಚೈತನ್ಯಕ್ಕೆ ಪ್ರೋತ್ಸಾಹ ನೀಡಿದವರನ್ನು ಮರೆಯಬಾರದು. ನಮ್ಮ ಕನಸುಗಳನ್ನು ಪೋಷಿಸಿ ಅವುಗಳನ್ನು ಹೆಮ್ಮರವಾಗಿ ಬೆಳೆಸುವವರು ನಮ್ಮ ಶಿಕ್ಷಕರು ಹಾಗೂ ಪೋಷಕರು. ಸ್ಪರ್ಧೆಗಳಲ್ಲಿ ಸೋತಾಗ ಕುಗ್ಗುವುದಲ್ಲ ಮುಂದಿನ ಬಾರಿಯ ಗೆಲುವಿಗಾಗಿ ತಯಾರಿಯಾಗಬೇಕು.ಶಿಕ್ಷಣದ ಮೂಲ ಉದ್ದೇಶ ಗುಣ ಸಂಪಾದನೆ. ಶಿಕ್ಷಣ ಕೇವಲ ಉದ್ಯೋಗಕ್ಕಾಗಿ ಮಾತ್ರವಲ್ಲ ವಿದ್ಯಾರ್ಥಿಗಳಲ್ಲಿ ವಿವೇಕ,ವಿಧೇಯತೆಯನ್ನು ಬೆಳೆಸುವುದು. ನಾವು ಕಾಣುವ ಕನಸುಗಳು ದೊಡ್ಡದಾಗಿರಬೇಕು, ಹಾಗಾದಾಗ ಮಾತ್ರ ನಾವು ಉನ್ನತ ಮಟ್ಟಕ್ಕೇರಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉದಯೋನ್ಮುಖ ವಯಲಿನ್ ವಾದಕ ಶ್ರೀಜಿತ್ ಸರಳಾಯ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ,ನಮಗೆ ದೊರೆತ ಶಿಕ್ಷಣದ ಮೇಲೆ ನಮ್ಮ ನಡವಳಿಕೆಯು ನಿಂತಿದೆ. ಎಲ್ಲರಿಗೂ ಕನಸುಗಳು ಇರುವುದು ಸಹಜ. ಕೆಲವರು ತಮ್ಮ ಕನಸನ್ನು ಸಾಕಾರಗೊಳಿಸಿದರೆ ಇನ್ನು ಕೆಲವರು ಸಿಕ್ಕ ಅವಕಾಶಗಳನ್ನು ಕಡೆಗಣಿಸುತ್ತಾರೆ.ನಮಗಿರುವ ಕನಸನ್ನು ನಾವು ಸಾಧಿಸಲು ಹೊರಟಾಗ ನಮಗೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಆಗ ನಾವು ಧೃತಿಗೆಡದೆ ಅದನ್ನು ಎದುರಿಸುವಲ್ಲಿ ಗಮನ ಹರಿಸಬೇಕು. ಅವಕಾಶಗಳು ಸಿಕ್ಕಾಗ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಇತ್ತೀಚಿನ ದಿನದಲ್ಲಿ ವಿದ್ಯಾರ್ಥಿಗಳಿಗೆ ಹಲವು ಅವಕಾಶಗಳು ದೊರೆಯುತ್ತವೆ.ನಮಗೆ ಎಲ್ಲಿ ಯಾವ ರೀತಿಯ ಅವಕಾಶಗಳು ದೊರೆಯುತ್ತವೆ ಎಂದು ನಿರೀಕ್ಷಿಸುವುದು ಅಸಾಧ್ಯ. ಸಿಕ್ಕ ಅವಕಾಶ ಬಳಸಿಕೊಂಡು ಪ್ರತಿಭೆಯನ್ನು ಹೊರಹೊಮ್ಮಿಸಬೇಕು. ನಮ್ಮನ್ನು ನಾವು ಇನ್ನೊಬ್ಬರಿಗೆ ಹೋಲಿಸಿಕೊಳ್ಳಬಾರದು. ನಮ್ಮ ಸಾಧನೆಯತ್ತ ಮಾತ್ರ ನಾವು ಗಮನಹರಿಸಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಶ್ರೀಜಿತ್ ಸರಳಾಯ ವಿಶೇಷವಾಗಿ ಸನ್ಮಾನಿಸಲಾಯಿತು.

ವಿವಿಧ ಸ್ಪರ್ಧೆಗಳಲ್ಲಿ 33 ಶಾಲೆಗಳಿಂದ ಸುಮಾರು 450 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪ್ರಥಮ ,ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆ ದ್ವಿತೀಯ ಹಾಗೂ ನರಿಮೊಗರು ಸಾಂದೀಪನಿ ಪ್ರೌಢಶಾಲೆ ತೃತೀಯ ಸ್ಥಾನವನ್ನು ಗಳಿಸಿತು.

ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಡಾ. ಮುರಳಿಕೃಷ್ಣ ರೈ, ಡಾ. ಕೃಷ್ಣಪ್ರಸನ್ನ ಕೆ, ಪ್ರಾಂಶುಪಾಲ ಮಹೇಶ್ ನಿಟಿಲಾಪುರ, ಕಾರ್ಯಕ್ರಮದ ಸಂಯೋಜಕಿ ಹರ್ಷಿತಾ ಪಿ ಉಪಸ್ಥಿತರಿದ್ದರು. ಉಪಪ್ರಾಂಶುಪಾಲ ದೇವಿಚರಣ್ ರೈ ಸ್ವಾಗತಿಸಿ, ಕವಿತಾ ವಂದಿಸಿದರು, ಉಪನ್ಯಾಸಕಿ ಯಶವಂತಿ ಕಾರ್ಯಕ್ರಮ ನಿರ್ವಹಿಸಿದರು.