Recent Posts

Monday, January 20, 2025
ಸುದ್ದಿ

ಸನಾತನ ಯಕ್ಷಾಲಯ ಮಂಗಳೂರು ಇದರ ಅಂಗವಾಗಿ ನಡೆಯುವ ಕ್ರೀಡೋತ್ಸವದ ಕುರಿತು ಪತ್ರಿಕಾಗೋಷ್ಠಿ – ಕಹಳೆ ನ್ಯೂಸ್

ರಾಕೇಶ್ ರೈ ಅಡ್ಕವರು ಸರಿಸುಮಾರು 15 ವರ್ಷಗಳ ಹಿಂದೆ ಮಂಗಳೂರಿನ ಅತ್ತಾವರದ ಪಾರ್ವತಿ ಕುಟೀರದಲ್ಲಿ “ಸನಾತನ ಯಕ್ಷಾಲಯ” ಎಂಬ ಹೆಸರಿನ ಸಂಸ್ಥೆಯನ್ನು ಸ್ಥಾಪಿಸಿ, ಆಸಕ್ತ ವಿದ್ಯಾರ್ಥಿಗಳಿಗೆ ಯಕ್ಷಗಾನ ನಾಟ್ಯಾಭ್ಯಾಸವನ್ನು ಪ್ರಾರಂಭಿಸಿದರು. ನಾಟ್ಯವನ್ನು ಮಾತ್ರವಲ್ಲದೆ, ವೇಷಭೂಷಣವನ್ನು ಕಟ್ಟುವ ಬಗೆ, ಅರ್ಥಗಾರಿಕೆ, ಮುಖವರ್ಣಿಕೆಯ ತರಗತಿಗಳನ್ನು ಕೂಡಾ ನಡೆಸುತ್ತಾ ಬಂದು, ಶಿಷ್ಯರಿಗೆ ಉತ್ತಮ ಗುಣಮಟ್ಟದ ಯಕ್ಷ ಶಿಕ್ಷಣವನ್ನು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಬೋಧಿಸುವ ಅಪರೂಪದ ಗುರುಗಳಾಗಿರುವರು. “ಸನಾತನ ಯಕ್ಷಾಲಯ” ಸಂಸ್ಥೆಯಲ್ಲಿ 6 ವರ್ಷದ ಮಗುವಿನಿಂದ ಹಿಡಿದು 65 ವರ್ಷದ ಹಿರಿಯರವರೆಗೂ ಯಕ್ಷ ಶಿಕ್ಷಣವನ್ನು ರಾಕೇಶ್ ರೈ ಅಡ್ಕರಿಂದ ಕಲಿಯುತ್ತಿದ್ದಾರೆ.

ಪ್ರಸ್ತುತ ರಾಕೇಶ್ ರೈಯವರು ದಕ್ಷಿಣಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ 16 ಕಡೆ ತರಬೇತಿ ಕೇಂದ್ರಗಳನ್ನು ನಡೆಸುತ್ತಿರುವುದಲ್ಲದೆ, 600ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ನಾಟ್ಯ, ಬಣ್ಣಗಾರಿಕೆ ಮತ್ತು ಪ್ರಸಾದನಗಳಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಈಗಾಗಲೇ ನೂರಾರು ವಿದ್ಯಾರ್ಥಿಗಳು ತರಬೇತಿಯನ್ನು ಪೂರ್ಣಗೊಳಿಸಿ ಪರಿಪೂರ್ಣ ಕಲಾವಿದರಾಗಿ ಹೊರಹೊಮ್ಮಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಯಕ್ಷಗಾನ ನಾಟ್ಯಾಭ್ಯಾಸವನ್ನು ಮಾಡುತ್ತಿರುವುದು ಸಂತೋಷದ ವಿಷಯ. ಕೊರೊನಾ ಲಾಕ್‍ ಡೌನ್ ಸಮಯದಲ್ಲಿ ಆನ್‍ಲೈನ್ ಯಕ್ಷಗಾನ ತರಬೇತಿಯನ್ನು ಪ್ರಾರಂಭಿಸಿದ್ದಾರೆ. ಇದರ ಪ್ರಯೋಜನವನ್ನು 70ಕ್ಕೂ ಹೆಚ್ಚು ಮಂದಿ ಪಡೆದುಕೊಂಡಿದ್ದಾರೆ. ಈಗಲೂ ಪರವೂರಿನಲ್ಲಿರುವ ಯಕ್ಷಗಾನ ಕಲಿಯುವ ಆಸಕ್ತರಿಗೆ ಆನ್‍ಲೈನ್ ಯಕ್ಷಗಾನ ತರಬೇತಿಯನ್ನು ನೀಡುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ 14 ವರ್ಷಗಳಿಂದ ಹಲವಾರು ಕಡೆಗಳಲ್ಲಿ ಗುಣಮಟ್ಟದ ಹಿಮ್ಮೇಳದೊಂದಿಗೆ ಯಶಸ್ವಿ ಪ್ರದರ್ಶನವನ್ನು ನೀಡುತ್ತಾ ಬಂದಿರುವ ಇವರ ಯಕ್ಷ ವಿದ್ಯಾರ್ಥಿಗಳ ಪ್ರತಿಭೆಗಳು ಅಪಾರ. ಪ್ರತೀವರ್ಷವೂ ಕಲಿಕಾ ಕೇಂದ್ರದ ವಿದ್ಯಾರ್ಥಿಗಳಿಂದ ಬೇರೆ ಬೇರೆ ಕಡೆಗಳಲ್ಲಿ ಪೌರಾಣಿಕ ಯಕ್ಷಗಾನ ಪ್ರಸಂಗಗಳ ಮೂಲಕ ವಾರ್ಷಿಕೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ಸಂದರ್ಭಗಳಲ್ಲಿ ಹಿರಿಯ ಯಕ್ಷಗಾನ ಕಲಾವಿದರಿಗೆ ಸನ್ಮಾನ, ಸಂಸ್ಥೆಯಲ್ಲಿ ಅಭ್ಯಾಸ ಮಾಡುತ್ತಿರುವ ಕಲೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರತಿಭಾವಂತರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಪ್ರಥಮ ವರ್ಷದಿಂದ ಇಂದಿನವರೆಗೂ ಸಂಪ್ರದಾಯದಂತೆ ನಡೆಸಿಕೊಂಡು ಬರಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಂದಿನ ವರುಷ ಸನಾತನ ಯಕ್ಷಾಲಯ ತನ್ನ ಹದಿನೈದನೇ ವಾರ್ಷಿಕೋತ್ಸವವನ್ನು ಆಚರಿಸಲಿದ್ದು, ಈ ಶುಭಾವಸರವನ್ನು ಮತ್ತಷ್ಟು ಸ್ಮರಣೀಯವಾಗಿಸುವ ಉದ್ದೇಶದಿಂದ ವಾರ್ಷಿಕೋತ್ಸವಕ್ಕೆ ಪೂರ್ವಭಾವಿಯಾಗಿ ತಾರೀಕು 3-12-2023ನೇ ರವಿವಾರ ಬೆಳಿಗ್ಗೆ ಗಂಟೆ 8ರಿಂದ ಸಂಜೆ ಗಂಟೆ 7ರವರೆಗೆ ಸಂಸ್ಥೆಯ ವಿದ್ಯಾರ್ಥಿಗಳಿಗೆ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಸಂಸ್ಥೆಯ ವಿದ್ಯಾರ್ಥಿಗಳ ಜೊತೆಗೆ ಅವರ ಹೆತ್ತವರೂ ಕೂಡಾ ಸಕ್ರಿಯವಾಗಿ ಕ್ರೀಡೆಗಳಲ್ಲಿ ಸ್ಪರ್ಧಿಸಬಹುದಾಗಿದೆ. ಮಂಗಳೂರಿನ ಕೇಂದ್ರಭಾಗದಲ್ಲಿರುವ ನಂತೂರು ಸಮೀಪದ ಪದುವಾ ಕ್ರೀಡಾಂಗಣದಲ್ಲಿ ಕ್ರೀಡಾಕೂಟವನ್ನು ಆಯೋಜಿಸುವುದೆಂದು ನಿರ್ಧರಿಸಲಾಗಿದೆ.

ಸ್ಪರ್ಧೆಯು ವೈಯಕ್ತಿಕ ಮತ್ತು ತಂಡ ವಿಭಾಗದಲ್ಲಿ ನಡೆಯಲಿದೆ. ಪುರುಷರಿಗೆ ಕ್ರಿಕೆಟ್, ವಾಲಿಬಾಲ್, ಹಗ್ಗಜಗ್ಗಾಟ ಮತ್ತು ಮಹಿಳೆಯರಿಗೆ ತ್ರೋಬಾಲ್, ಹಗ್ಗ ಜಗ್ಗಾಟ, ಹಾಗೂ ಎಲ್ಲಾ ವಿಭಾಗದವರಿಗೆ ಟ್ರಾಕ್ ಈವೆಂಟ್ 100, 200, 4*100 ರಿಲೇ, 800. ಅಲ್ಲದೆ ಸಣ್ಣ ಮಕ್ಕಳಿಗೆ ಬಾಂಬ್ ಇನ್ ದ ಸಿಟಿ, ಪಾಸಿಂಗ್ ದ ಬಾಲ್, ನಿಂಬೆ ಚಮಚ, ಸಂಗೀತ ಕುರ್ಚಿ ಸ್ಪರ್ಧೆಗಳೂ ಇರುತ್ತವೆ.

ಸನಾತನದ ಎಲ್ಲಾ ವಿದ್ಯಾರ್ಥಿಗಳನ್ನು ಒಂದೇ ಕಡೆಯಲ್ಲಿ ಒಟ್ಟು ಸೇರಿಸಿ, ಅವರಲ್ಲಿರುವ ಕ್ರೀಡಾ ಪ್ರತಿಭೆಯು ಅನಾವರಣಕ್ಕೂ ಒಂದು ವೇದಿಕೆಯನ್ನು ಕಲ್ಪಿಸುವುದರ ಜೊತೆಗೆ ಬೇರೆ ಬೇರೆ ತರಗತಿಯ ವಿದ್ಯಾರ್ಥಿಗಳ ನಡುವಿನ ಬಾಂಧವ್ಯ ಮತ್ತು ಸಾಮರಸ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವುದೇ ಈ ಕ್ರೀಡಾಕೂಟ ಯೋಜನೆಯ ಹಿಂದಿರುವ ಸದುದ್ದೇಶ.