Recent Posts

Monday, January 20, 2025
ಸುದ್ದಿ

ಹಿರಿಯ ಶಾಲೆಗಳನ್ನು ಉಳಿಸುವ ಕಾರ್ಯ ಆಗಬೇಕು: ಅಬ್ದುಲ್ ನಝೀರ್ – ಕಹಳೆ ನ್ಯೂಸ್

ಮೂಡಬಿದಿರೆ: ಒಂದೆಡೆ ಕನ್ನಡ ಉಳಿಸಲು ಕರೆನೀಡುವ ಸರ್ಕಾರ, ಅನುದಾನಿಕ ಕನ್ನಡ ಮಾಧ್ಯಮ ಶಾಲೆಗಳ ಅನುದಾನವನ್ನೇ ಕಿತ್ತುಕೊಳ್ಳುವ ಕಾರ್ಯ ಮಾಡುತ್ತಿದೆ. ಇದರಿಂದ ಕನ್ನಡ ಉಳಿಸಿದ ಹಾಗೆ ಆಗುತ್ತದೆಯೇ? ಕನ್ನಡವನ್ನು ಪುರಸ್ಕರಿಸಬೇಕು; ಇದು ಸರ್ಕಾರದ ಕರ್ತವ್ಯ ಎಂದು ಜಸ್ಟಿಸ್ ಎಸ್.ಅಬ್ದುಲ್ ನಝೀರ್ ಹೇಳಿದರು.

ಮೂಡಬಿದಿರೆ ಕಡಲಕೆರೆ ಸಂತ ಇಗ್ನೇಶಿಯಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೇರಣಾ ಶಿಶುಮಂದಿರದಲ್ಲಿ ಆಯೋಜಿಸಿದ ಶ್ರೀ ಸರಸ್ವತಿ ಪೂಜೆ ಹಾಗೂ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಯಸ್ಸಾದ ಮಾತ್ರಕ್ಕೆ ತಂದೆ ತಾಯಿಯವರನ್ನು ನಾವು ಬಿಟ್ಟು ಹಾಕುತ್ತೇವಾ? ಎಂದು ಪ್ರಶ್ನಿಸಿದ ಜಸ್ಟಿಸ್ , ಅದೇ ರೀತಿ ವಯಸ್ಸಾದ, ಹಿರಿಯ ಶಾಲೆಗಳನ್ನು ಉಳಿಸುವ ಕಾರ್ಯ ಆಗಬೇಕು. ಅದಕ್ಕೆ ಸರ್ಕಾರ ಚಿಂತನೆ ಮಾಡಬೇಕು ಎಂದು ಸೂಚಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಜಸ್ಟಿಸ್ ಎಸ್.ಅಬ್ದುಲ್ ನಝೀರ್ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಅವರ ಧರ್ಮಪತ್ನಿ ಶಮೀರಾ ಜೊತೆಗಿದ್ದರು.

ಶಾಲೆಯ ಅಭಿವೃದ್ಧಿಯ ಹಿತದೃಷ್ಠಿಯಿಂದ, ಶ್ರೇಷ್ಠಗುಣಮಟ್ಟದ ಶಿಕ್ಷಣ ಹಾಗೂ ಶಿಕ್ಷಣ ಪೂರಕ ಪರಿಕರಗಳನ್ನು ಪೂರೈಸಲು ಬದ್ಧರಾಗಿದ್ದೇವೆ ಎಂದು ಎಂ.ಆರ್.ಪಿ.ಎಲ್ ನ ಸಿ.ಎಸ್.ಆರ್ ವಿಭಾಗದ ಚೀಫ್ ಮ್ಯಾನೇಜರ್ ಬಿ.ಹರೀಶ್ ಬಾಳಿಗ ಭರವಸೆ ನೀಡಿದರು.

ಶಾಲೆಯ ಶ್ರೇಯೋಭಿವೃದ್ಧಿಗಾಗಿ ರು.25ಲಕ್ಷ ನೀಡುವ ಘೋಷಣೆಯನ್ನು ಉಡುಪಿ ಅದಾನಿ ಯು.ಪಿ.ಸಿ.ಎಲ್ ಗ್ರೂಪ್‌ನ ಸಹ ಅಧ್ಯಕ್ಷ ಕಿಶೋರ್ ಆಳ್ವ ಹೇಳಿದರು.

ಸೇವಾಂಜಲಿ ಎಜುಕೇಷನ್ ಟ್ರಸ್ಟ್ ಸಂಚಾಲಕ ಪ್ರೊ.ಯಂ.ವಾಸುದೇವ ಭಟ್ ಅಧ್ಯಕ್ಷತೆ ವಹಿಸಿದ್ದರು. ಮೂಡಬಿದಿರೆ ವಕೀಲರ ಸಂಘದ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಸಂಪರ್ಕ ಪ್ರಮುಖ್ ರವೀಂದ್ರ ಪುತ್ತೂರು ಅತಿಥಿಗಳಾಗಿದ್ದರು.
ಪ್ರೇರಣಾ ಶಿಶುಮಂದಿರದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸೇವಾಂಜಲಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಚೇತನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಕೇಶವ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ಮುಖ್ಯೋಪಾಧ್ಯಾಯ ಬಿ.ಜಯರಾಮ್ ರಾವ್ ವಂದಿಸಿದರು.