ಪುತ್ತೂರು: ಕಲ್ಲೇಗ ಟೈಗರ್ಸ್ ಮುಖ್ಯಸ್ಥರಾಗಿದ್ದ ಅಕ್ಷಯ್ ಕಲ್ಲೇಗ ಅವರ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಸಭೆ ಡಿಸೆಂಬರ್ 4ರಂದು ಅವರ ಕಲ್ಲೇಗ ಮನೆಯಲ್ಲಿ ನಡೆಯಲಿದೆ. ಕಲ್ಲೇಗದ ಚಂದ್ರಶೇಖರ ಗೌಡ ಮತ್ತು ಕುಸುಮಾವತಿ ದಂಪತಿಯ ಪುತ್ರನಾಗಿ 1997ರ ಜುಲೈ 1ರಂದು ಜನಿಸಿದ ಅಕ್ಷಯ್ ಕಲ್ಲೇಗ ಅವರು 2018ರಲ್ಲಿ ಕಲ್ಲೇಗ ಟೈಗರ್ಸ್ ತಂಡ ಸ್ಥಾಪಿಸಿದ್ದರು. ಮೊದಲಿಗೆ 15 ಹುಲಿಗಳನ್ನು ಕುಣಿಸುವ ಮೂಲಕ ಆರಂಭಗೊಂಡ ಕಲ್ಲೇಗ ಟೈಗರ್ಸ್ ತಂಡ 2023ರಲ್ಲಿ 6ನೇ ವರ್ಷದ ಪ್ರದರ್ಶನದ ವೇಳೆ 89 ಹುಲಿಗಳ ಪ್ರದರ್ಶನ ನೀಡಿ ಪುತ್ತೂರಿನಲ್ಲಿ ಹುಲಿವೇಷದ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿತ್ತು.
ಪುತ್ತೂರಿನ 2ನೇ ಅತೀ ದೊಡ್ಡ ಜಾತ್ರೆ ಎಂದು ಪ್ರಸಿದ್ದಿ ಪಡೆದ ಕಲ್ಲೇಗ ಕಲ್ಕುಡ ದೈವಸ್ಥಾನದ 2022ರ ವಾರ್ಷಿಕ ನೇಮೋತ್ಸವದ ಅಂಗವಾಗಿ ಟೀಮ್ ಕಲ್ಲೇಗ ಟೈಗರ್ಸ್ ಇದರ 4ನೇ ವರ್ಷದ ಪ್ರಯುಕ್ತ ಅಕ್ಷಯ್ ಕಲ್ಲೇಗ ನೇತೃತ್ವದಲ್ಲಿ ಕಲ್ಕುಡ ದೈವಕ್ಕೆ ಸುಮಾರು 2.5 ಲಕ್ಷ ರೂ ಮೌಲ್ಯದ ಬೆಳ್ಳಿಯ ‘ಜಕ್ಕೆಲಣಿ’ ಸಮರ್ಪಣೆ ಮಾಡಲಾಗಿತ್ತು. 2023ರಲ್ಲಿ ಕಲ್ಲೇಗ ಟೈಗರ್ಸ್ ಇದರ 5ನೇ ವರ್ಷದ ಅಂಗವಾಗಿ ಕಲ್ಲುರ್ಟಿ ದೈವಕ್ಕೆ 1.5 ಲಕ್ಷ ರೂ ಮೌಲ್ಯದ ಬೆಳ್ಳಿಯ ‘ಕದ್ರಿಮುಡಿ’ ಸಮರ್ಪಿಸಲಾಗಿತ್ತು.
2023ರಲ್ಲಿ ಟೀಮ್ ಕಲ್ಲೇಗ ಟೈಗರ್ಸ್ ಇದರ 5ನೇ ವರ್ಷದ ಅಂಗವಾಗಿ ಪುತ್ತೂರಿನ ನೆಹರೂನಗರ ಮುಖ್ಯರಸ್ತೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಉಪಯೋಗವಾಗಬೇಕು ಎಂಬ ಉದ್ದೇಶದಿಂದ “PURIFIED WATER TANK” ನ್ನು ಕೊಡುಗೆಯಾಗಿ ನೀಡಲಾಗಿತ್ತು.
ಇದಲ್ಲದೆ ಹಲವರಿಗೆ ಅಕ್ಷಯ್ ಕಲ್ಲೇಗ ನೇತೃತ್ವದಲ್ಲಿ ರಕ್ತದಾನ, ಅಪಘಾತಗಳಾದಾಗ ಆಸ್ಪತ್ರೆಗೆ ದಾಖಲಿಸುವ ಮಾನವೀಯತೆಯ ಕಾರ್ಯ ಮಾಡಲಾಗಿತ್ತು. 2022 ಹಾಗೂ 2023ರ ದಸರಾ ಸಮಯದಲ್ಲಿ ಮಂಗಳೂರು ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ನಡೆದ “ಪಿಲಿಪರ್ಬ” ಸ್ಪರ್ಧೆಯಲ್ಲಿ ಭಾಗವಹಿಸಿದ್ದಲ್ಲದೆ ಪುತ್ತೂರಿನಲ್ಲಿ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ನೇತೃತ್ವದಲ್ಲಿ ನಡೆದ “ಪಿಲಿ ರಂಗ್” ಸ್ಪರ್ಧೆಯಲ್ಲಿ 2022ರಲ್ಲಿ ದ್ವಿತೀಯ ಮತ್ತು 2023ರಲ್ಲಿ ಕಲ್ಲೇಗ ಟೈಗರ್ಸ್ ತೃತೀಯ ಸ್ಥಾನ ಪಡೆದಿತ್ತು. ಈ ವರ್ಷ ಮೊದಲ ಬಾರಿಗೆ ಸಹಜ್ ರೈ ನೇತೃತ್ವದಲ್ಲಿ ಪುತ್ತೂರಿನಲ್ಲಿ ನಡೆದ “ಪುತ್ತೂರ್ದ ಪಿಲಿಗೊಬ್ಬು” ಸ್ಪರ್ಧೆಯಲ್ಲಿ 3ನೇ ಸ್ಥಾನವನ್ನು ಕಲ್ಲೇಗ ಟೈಗರ್ಸ್ ಪಡೆದಿತ್ತು. ಹಲವು ಯುವಕರನ್ನು ಸಂಘಟಿಸಿ ಹತ್ತು ಹಲವು ಸಮಾಜಮುಖಿ ಕಾರ್ಯಗಳನ್ನು ನಡೆಸಿ ಮನೆ ಮಾತಾಗಿದ್ದ ಅಕ್ಷಯ್ ಕಲ್ಲೇಗ ಅವರ ಚಿಂತನೆಯಂತೆ ಇನ್ನೂ ಹಲವಾರು ಜನಪರ ಕಾರ್ಯಗಳನ್ನು ನಡೆಸಲಾಗುವುದು ಎಂದು ಟೀಮ್ ಕಲ್ಲೇಗ ಟೈಗರ್ಸ್ ಪ್ರಕಟಣೆಯಲ್ಲಿ ತಿಳಿಸಿದ್ದು ಡಿ.4ರಂದು ಅಕ್ಷಯ್ ಅವರ ಕಲ್ಲೇಗ ಮನೆಯಲ್ಲಿ ನಡೆಯುವ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಿದೆ.