ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆನೀಡಿ – ನೇಮಕಾತಿ ಸಕ್ರಮಗೊಳಿಸಿ : ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಹರೀಶ್ ಆಚಾರ್ಯ ಒತ್ತಾಯ – ಕಹಳೆ ನ್ಯೂಸ್
ಮಂಗಳೂರು: ಅತಿಥಿ ಉಪನ್ಯಾಸಕರ ನೇಮಕಾತಿಯನ್ನು ಸರ್ಕಾರದ ಸಿಬ್ಬಂದಿ ಸೇವಾ ನಿಯಮಗಳಡಿ ಸಕ್ರಮಗೊಳಿಸಬೇಕು. ಅವರಿಗೆ ನೇಮಕಾತಿ ಆದೇಶ ಪತ್ರ ನೀಡಿ ಸೇವಾ ಭದ್ರತೆ ಒದಗಿಸಬೇಕು. ರಜಾ ಸೌಲಭ್ಯ, ಭವಿಷ್ಯ ನಿಧಿ, ಇಎಸ್‌ಐ ಸೌಲಭ್ಯ ಒದಗಿಸಬೇಕು. ಕಳೆದ 18 ವರ್ಷಗಳಿಂದ ಅತಿಥಿ ಉಪನ್ಯಾಸಕರು ಎದುರಿಸುತ್ತಿರುವ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಎಸ್.ಆರ್. ಹರೀಶ್ ಆಚಾರ್ಯ ಭಾನುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಸುಮಾರು 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ. ಇವುಗಳಲ್ಲಿ 14,000 ಅಧ್ಯಾಪಕರಿದ್ದು ಅವುಗಳಲ್ಲಿ ಶೇ. 70ರಷ್ಟು ಅತಿಥಿ ಉಪನ್ಯಾಸಕರು ಬೋಧನಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯ ಮತ್ತು ಅದರ ಘಟಕ ಕಾಲೇಜುಗಳಲ್ಲಿ ಸುಮಾರು 600 ಅಧ್ಯಾಪಕರಿದ್ದು , ಈ ಪೈಕಿ 480 ಅತಿಥಿ ಉಪನ್ಯಾಸಕರಿದ್ದಾರೆ. ರಾಜ್ಯದಲ್ಲಿ ಒಟ್ಟು 1,890 ಪದವಿ ಪೂರ್ವ ಕಾಲೇಜುಗಳಿದ್ದು, ಇವುಗಳಲ್ಲಿ 3,200ರಷ್ಟು ಅತಿಥಿ ಉಪನ್ಯಾಸಕರು ಬೋಧನಾ ಕಾರ್ಯದಲ್ಲಿ ನಿರತರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ವಿವರಿಸಿದರು.
ಈ ಅತಿಥಿ ಉಪನ್ಯಾಸಕರು ಕಾಲೇಜುಗಳಲ್ಲಿ ಬೋಧನೆ ಮಾತ್ರವಲ್ಲದೇ ಬೋಧನೇತರ ಕಾರ್ಯದಲ್ಲಿಯೂ ತೊಡಗಿಸಿಕೊಂಡು ಕಾಲೇಜು ಅಭಿವೃದ್ಧಿಯಲ್ಲಿ ಬಹುಪಾಲು ಕೊಡುಗೆ ಸಲ್ಲಿಸುತ್ತಿದ್ದಾರೆ. ಆದರೆ ಸರ್ಕಾರ ಮತ್ತು ವಿಶ್ವವಿದ್ಯಾಲಯಗಳು ಅತಿಥಿ ಉಪನ್ಯಾಸಕರಲ್ಲಿ ಅಭದ್ರತೆ ಮತ್ತು ಕ್ಲೇಷ ಮನೋಭಾವನೆ ಉಂಟು ಮಾಡಿ ಒಂದು ರೀತಿಯಲ್ಲಿ ಶೋಷಣೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಗೋಷ್ಠಿಯಲ್ಲಿ ಮಧುಸೂದನ್ ಗಟ್ಟಿ ಮತ್ತು ಭರತ್ ನಿಡ್ಪಾಲೆ ಉಪಸ್ಥಿತರಿದ್ದರು.