ಹಾಸನ: ತನ್ನ ಗಾಂಭೀರ್ಯ ನಡೆ, ದೈತ್ಯ ಆಕಾರದಿಂದಲೇ ಎಲ್ಲರ ಗಮನ ಸೆಳೆದಿದ್ದ ಮತ್ತು ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ 8 ಬಾರಿ ಚಿನ್ನದ ಅಂಬಾರಿ ಹೊತ್ತು ದಾಖಲೆ ಬರೆದಿದ್ದ ದಸರಾ ಆನೆ ಅರ್ಜುನ, ಕಾಡಾನೆ ದಾಳಿಯಲ್ಲಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಇಂದು (ಡಿ.04) ನಡೆದಿದೆ.
ಇತ್ತೀಚೆಗೆ ಹಾಸನದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಜಮೀನುಗಳಿಗೆ ದಾಂಗುಡಿ ಇಡುತ್ತಿದ್ದು, ಸಾಕಷ್ಟು ಬೆಳೆಗಳನ್ನು ನಾಶಮಾಡುತ್ತಿವೆ. ಇದರ ನಡುವೆ ಕಾಡಾನೆಗಳ ಉಪಟಳಕ್ಕೆ ಬ್ರೇಕ್ ಹಾಕಲು ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ ನಡೆಯುತ್ತಿದೆ. ಇಂದು ಕೂಡ ಕಾರ್ಯಾಚರಣೆ ಮುಂದುವರಿದಿತ್ತು. ಈ ವೇಳೆ ಒಂಟಿಸಲಗವೊಂದರ ದಾಳಿಗೆ ಅರ್ಜುನ ಬಲಿಯಾಗಿದ್ದಾನೆ.
ನಾಲ್ಕು ಸಾಕಾನೆಗಳ ಮೂಲಕ ಸೋಮವಾರ ಬೆಳಗ್ಗೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಮಧ್ಯಾಹ್ನ ಎಸಳೂರು ಬಳಿ ಕಾಡಾನೆಗೆ ಅರಿವಳಿಕೆ ನೀಡುವ ಸಂದರ್ಭದಲ್ಲಿ ಏಕಾಏಕಿ ಒಂಟಿ ಸಲಗ ಅರ್ಜುನನ ಮೇಲೆ ದಾಳಿ ಮಾಡಿದೆ. ಇದರಿಂದ ಬೆದರಿದ ಇತರೆ ಮೂರು ಸಾಕಾನೆಗಳು ಓಡಿ ಹೋಗಿವೆ. ಆಗ ಅರ್ಜುನ ಮತ್ತು ಒಂಟಿ ಸಲಗದ ನಡುವೆ ಕಾದಾಟ ನಡೆದಿದೆ. ಮಾವುತನಿಗೂ ಕೂಡ ನಿಯಂತ್ರಿಸಲಾಗದೆ ಆನೆಯಿಂದ ನೆಗೆದು ಸ್ಥಳದಿಂದ ಓಡಿಹೋಗಿದ್ದಾರೆ. ಒಂಟಿಸಲಗನ ದಾಳಿಗೆ ನಲುಗಿದ ಅರ್ಜುನ, ಸ್ಥಳದಲ್ಲಿಯೇ ಉಸಿರು ಚೆಲ್ಲಿದನು.
ದಸರಾದಲ್ಲಿ ಭಾಗಿಯಾಗಿದ್ದ
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಮೈಸೂರು ದಸರಾದಲ್ಲಿಯೂ ಅರ್ಜುನ ಭಾಗಿಯಾಗಿದ್ದ. ಮಾಜಿ ಕ್ಯಾಪ್ಟನ್ ಅರ್ಜುನನೇ ಈ ಬಾರಿಯೂ ಹೆಚ್ಚು ತೂಕದೊಂದಿಗೆ ಬಲಶಾಲಿ ಎನಿಸಿಕೊಂಡಿದ್ದ. ಮೊದಲ ಹಂತದ ತೂಕದಲ್ಲಿ ಅರ್ಜುನ 5680 ಕೆಜಿ ಇದ್ದ ಅರ್ಜುನ, ಎರಡನೇ ಹಂತದ ತೂಕ ಪರೀಕ್ಷೆಯಲ್ಲಿ 5850 ಕೆಜಿ ತೂಕವನ್ನು ಹೊಂದುವ ಮೂಲಕ ಇಡೀ ಗಜಪಡೆಯ ಪೈಕಿ ಅರ್ಜುನನೇ ತುಂಬಾ ಬಲಶಾಲಿಯಾಗಿದ್ದ. ಇಂತಹ ದೈತ್ಯ ಆನೆಯನ್ನು ಕಳೆದುಕೊಂಡಿದ್ದು, ಮೈಸೂರು ದಸರಾ ಪರಂಪರೆಗೆ ಭರಿಸಲಾಗದ ನಷ್ಟವಾಗಿದೆ.
ಅರ್ಜುನನ ಹಿನ್ನೆಲೆ
1968ರಲ್ಲಿ ಕರ್ನಾಟಕದ ಪಶ್ಚಿಮ ಘಟ್ಟಗಳ ಕಾಕನಕೋಟೆಯ ಕಾಡುಗಳಿಂದ ಖೆಡ್ಡಾ ಕಾರ್ಯಾಚರಣೆಯಲ್ಲಿ ಅರ್ಜುನನನ್ನು ಸೆರೆಹಿಡಿಯಲಾಯಿತು. ಆತನನ್ನು ಚೆನ್ನಾಗಿ ಪಳಸಿಗಿದ ನಂತರ 1990ರ ದಶಕದಲ್ಲಿ ಮೈಸೂರಿನಲ್ಲಿ ದಸರಾ ಉತ್ಸವದ ಶಿಬಿರಗಳಿಗೆ ಕರೆತರಲಾಯಿತು. ಆನೆ ದ್ರೋಣನ ನಂತರ ಒಂದು ಬಾರಿ ಚಿನ್ನದ ಅಂಬಾರಿ ಹೊತ್ತಿತ್ತಾದರೂ ಬಲರಾಮನ ಬಳಿಕ ಅರ್ಜುನನೇ ಅಂಬಾರಿ ಹೊರುತ್ತಿದ್ದ.
ಅರ್ಜುನ ಮೃತಪಟ್ಟ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಸನ ಜಿಲ್ಲೆಯಲ್ಲಿ ಇತ್ತೀಚೆಗೆ ಕಾಡಾನೆಗಳ ಹಿಂಡು ದಾಂಗುಡಿ ಇಡುತ್ತಿದ್ದು, ಜನರನ್ನು ಆತಂಕಕ್ಕೆ ದೂಡಿದೆ. ಅದರಲ್ಲೂ ರೈತರ ಪಾಲಿಗೆ ದುಸ್ವಪ್ನವಾಗಿವೆ. ಕಾಡಾನೆ ಹಾವಳಿ ತಡೆಗೆ ಅರಣ್ಯ ಇಲಾಖೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಅವುಗಳ ಚಲನ ವಲನಗಳ ಮೇಲೆ ಗಮನ ಇಡುವ ಕೆಲಸವನ್ನೂ ಮಾಡುತ್ತಿದೆ. ಕೆಲ ದಿನಗಳ ಹಿಂದಷ್ಟೇ ಬೇಲೂರು ತಾಲ್ಲೂಕಿನ ಅರೇಹಳ್ಳಿ ಬಳಿಯ ಅಣ್ಣಾಮಲೈ ಎಸ್ಟೇಟ್‌ನಲ್ಲಿ ಮತ್ತು ಬೇಲೂರು ತಾಲೂಕಿನ ವಳಲು ಗ್ರಾಮದಲ್ಲಿ ಎರಡು ಕಾಡಾನೆಯೊಂದನ್ನು ಸೆರೆಹಿಡಿಯಲಾಗಿತ್ತು.