Friday, September 20, 2024
ಸುದ್ದಿ

ಪ್ರಾಮಾಣಿಕ ಉದ್ದೇಶಕ್ಕೆ ಪ್ರತಿಫಲ ದೊರಕುತ್ತದೆ: ಪ್ರೊ.ಸುಬ್ಬಪ್ಪ ಕೈಕಂಬ

ಪುತ್ತೂರು: ಯಾವುದೇ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕಾದದ್ದು ವಿದ್ಯಾರ್ಥಿಗಳ ಧರ್ಮ. ಮಾಡುವ ಕಾಯಕದಲ್ಲಿ ಪ್ರೀತಿಯನ್ನಿಟ್ಟರೆ ಮಾತ್ರ ಯಶಸ್ಸು ನಮ್ಮದಾಗುವುದಕ್ಕೆ ಸಾಧ್ಯ. ಪ್ರಾಮಾಣಿಕ ಉದ್ದೇಶಕ್ಕೆ ಪ್ರತಿಫಲ ಖಂಡಿತವಾಗಿಯೂ ದೊರಕುತ್ತದೆ ಎಂದು ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ.ಸುಬ್ಬಪ್ಪ ಕೈಕಂಬ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣಾ ವಿಭಾಗದ ವತಿಯಿಂದ ಆಯೋಜಿಸಿದ ಕಳೆದ ಶೈಕ್ಷಣಿಕ ಸಾಲಿನ ಸಾಧಕ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಕ್ರವಾರ ಮಾತನಾಡಿದರು.
ಸಾಧನೆಯ ಹಾದಿಯಲ್ಲಿ ಮುಂದುವರಿಯುವ ಸಂದರ್ಭದಲ್ಲಿ ಟೀಕಿಸುವವರು ಅನೇಕರಿದ್ದಾರೆ. ಕಾಲೆಳೆಯುವವರೂ ಇರುತ್ತಾರೆ. ಹಾಗೆಂದು ಮಾಡುವ ಕಾರ್ಯವನ್ನು ನಿಲ್ಲಿಸದೆ ಮುಂದುವರೆಸಿದಾಗ ಮಾತ್ರ ಗುರಿ ತಲಪುವುದಕ್ಕೆ ಸಾಧ್ಯ.  ಟೀಕೆಗೆ ಸಾಧನೆಯೇ ಉತ್ತರವಾಗಬೇಕು. ಆದರೆ ಮಾತೇ ಸಾಧನೆಯಾಗಬಾರದು, ಕೃತಿಯಲ್ಲಿ ಅದು ಗೋಚರವಾಗಬೇಕು ಎಂದು ನುಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಚಾರಿತ್ರ್ಯ ನಿರ್ಮಾಣ ಇಂದಿನ ಅಗತ್ಯ. ಅಂತಹ ಶಿಕ್ಷಣ ವಿದ್ಯಾರ್ಥಿಗಳಿಗೆ ಲಭಿಸಬೇಕು. ಅಂಕವೊಂದೇ ವ್ಯಕ್ತಿತ್ವದ ಮಾನದಂಡ ಅಲ್ಲ ಎನ್ನುವುದನ್ನೂ ನಾವು ಮನಗಾಣಬೇಕಿದೆ. ಅಂಕದೊಂದಿಗೆ ಸದ್ಗುಣಗಳೂ ಸೇರಿಕೊಂಡಾಗ ವ್ಯಕ್ತಿತ್ವ ಬೆಳಗುತ್ತದೆ. ಸರ್ವತೋಮುಖ ಬೆಳವಣಿಗೆಗೆ ಸಾಕ್ಷಿಯಾಗಬೇಕಾದ ಅನಿವಾರ್ಯತೆ ಎಲ್ಲರಿಗೂ ಇದೆ ಎಮದು ಹೇಳಿದರು.

ಜಾಹೀರಾತು

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಧನಾತ್ಮಕ ಚಿಂತನೆ ವಿದ್ಯಾರ್ಥಿಗಳಲ್ಲಿ ಒಡಮೂಡಬೇಕು. ಮಾತ್ರವಲ್ಲದೆ ಪ್ರತಿಯೊಬ್ಬರಿಗೂ ತಮ್ಮ ಸಾಮರ್ಥ್ಯದ ಬಗೆಗೆ ನಂಬಿಕೆ ಇರಬೇಕು. ಅದರ ಆಧಾರದ ಮೇಲೆ ಸಾಧನೆಯೆಡೆಗೆ ಹೆಜ್ಜೆ ಇಡಬೇಕು. ರಚನಾತ್ಮಕ ಕನಸುಗಳನ್ನು ಸಾಕಾರಗೊಳಿಸುವ ಬಗೆಗೆ ಅದಮ್ಯ ವಿರ್ಶವಾಸ ಇದ್ದಾಗ ಮಾತ್ರ ಗುರಿ ತಲಪಲು ಸಾಧ್ಯ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಕಳೆದ ಶೈಕ್ಷಣಿಕ ವರ್ಷದ ಅಂತಿಮ ಬಿ.ಕಾಂ ಹಾಗೂ ಬಿಬಿಎ ಪರೀಕ್ಷೆಗಳಲ್ಲಿ ವಿಶೇಷ ಶ್ರೇಣಿ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿನಿಯರಾದ ಅನೂಷಾ, ಅಪೇಕ್ಷಾ ಮತ್ತು ಕೃತಿ ಪ್ರಾರ್ಥಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ವೆಂಕಟ್ರಮಣ ಭಟ್ ಪ್ರಸ್ತಾವನೆಗೈದು, ಉಪನ್ಯಾಸಕ ಶ್ರೀನಾಥ್ ಸ್ವಾಗತಿಸಿದರು. ಉಪನ್ಯಾಸಕಿಯರಾದ ವಿನುತಾ ವಂದಿಸಿ, ಭಾಗ್ಯಶ್ರೀ ಕಾರ್ಯಕ್ರಮ ನಿರ್ವಹಿಸಿದರು.