Sunday, January 19, 2025
ದಕ್ಷಿಣ ಕನ್ನಡಬೆಳ್ತಂಗಡಿರಾಜ್ಯಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ : ತುಮಕೂರು ಸಿದ್ಧಗಂಗಾ ಮಠದ ಪೀಠಾಧೀಶರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಸರ್ವಧರ್ಮ ಸಮ್ಮೇಳನದ 91ನೇ ಅಧಿವೇಶನ ಉದ್ಘಾಟಿಸಿದ ಶಿಕ್ಷಣ ತಜ್ಞ ಡಾ.ಗುರುರಾಜ ; ಇಂದು ಸಾಹಿತ್ಯ ಸಮ್ಮೇಳನ, ಇಸ್ರೋದ ಅಧ್ಯಕ್ಷ ಡಾ| ಎಸ್‌. ಸೋಮನಾಥ್‌ ರಿಂದ ಚಲನೆ – ಕಹಳೆ ನ್ಯೂಸ್

ಬೆಳ್ತಂಗಡಿ: ಕ್ಷೇತ್ರವೊಂದು ಪವಿತ್ರ ಎನಿಸುವುದು ಮೂರು ಕಾರಣಕ್ಕೆ. ಒಂದು ಪರಂಪರೆ, ಎರಡನೆಯದು ವ್ಯಕ್ತಿ ದೈವತ್ವಕ್ಕೇರಿದಾಗ ಅಥವಾ ಕೋಟ್ಯಂತರ ಜನರಿಗೆ ನೆರವಾಗುವ ವ್ಯವಸ್ಥೆಯಿಂದ. ಕೋಟ್ಯಂತರ ಜನರ ಆಶಯಗಳನ್ನು ಹಲವು ಆಯಾಮಗಳಿಂದ ಮುಟ್ಟಿದ ಕ್ಷೇತ್ರ ಧರ್ಮ ಸ್ಥಳವೊಂದೇ.ಹಾಗಾಗಿ ಇದು ಸರ್ವಧರ್ಮ ಸಮನ್ವಯ ಕ್ಷೇತ್ರ ಎಂದು ಶಿಕ್ಷಣ ತಜ್ಞ ಡಾ| ಗುರುರಾಜ ಕರ್ಜಗಿ ವಿಶ್ಲೇಷಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಪ್ರಯುಕ್ತ ಸೋಮವಾರ ಅಮೃತವರ್ಷಿಣಿ ಸಭಾ ವೇದಿಕೆಯಲ್ಲಿ ಸರ್ವಧರ್ಮ ಸಮ್ಮೇಳನದ 91ನೇ ಅಧಿವೇಶನ ಉದ್ಘಾಟಿಸಿ ಅವರು ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ತಣ್ತೀ ಮತ್ತು ಆಚಾರದ ನೆಲೆಗಟ್ಟಿನಲ್ಲಿ ಧರ್ಮದ ವ್ಯಾಖ್ಯಾನವಿದೆ. ಆದರೆ ಆಚಾರ ವನ್ನೇ ಧರ್ಮ ಎಂದು ಪ್ರಚೋದಿಸುವ ಕಾರಣ ಜಗತ್ತಿನಲ್ಲಿ ಇಂದು ಹಿಂಸೆ ಹೆಚ್ಚಿದೆ. ಹಿಂಸೆ ಧರ್ಮಕ್ಕೆ ವಿರೋಧವಾದುದು. ಧರ್ಮವು ಎಂದಿಗೂ ಹಿಂಸೆಯನ್ನು ಪ್ರಚೋದಿಸದು. ಒಂದು ವೇಳೆ ಹಿಂಸೆಯನ್ನು ವೈಭವೀಕರಿಸಿದರೆ ಅದು ಧರ್ಮವಲ್ಲ. ಚಕ್ರವರ್ತಿ ಅಶೋಕ ಧರ್ಮ ಸಾರದಲ್ಲಿ ಹೇಳಿದಂತೆ ಕ್ರಿ.ಪೂ.ದಲ್ಲಿ ಯಾವ ಧರ್ಮ ವೂ ಹುಟ್ಟಿರಲಿಲ್ಲ. ಅಂದು ಎಲ್ಲವೂ ಒಂದೇ ಆಗಿತ್ತು. ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ವಧರ್ಮ ನಿಷ್ಠೆ,ಪರ ಧರ್ಮ ಸಹಿಷ್ಣುತೆ
ಅಧ್ಯಕ್ಷತೆ ವಹಿಸಿದ್ದ ತುಮಕೂರು ಶ್ರೀ ಕ್ಷೇತ್ರ ಸಿದ್ಧಗಂಗಾ ಮಠದ ಪೀಠಾಧೀಶರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಭಾರತ ಎಲ್ಲ ಧರ್ಮೀಯರಿಗೂ ಆಶ್ರಯ ನೀಡಿ ಧರ್ಮ ಮಾರ್ಗದಲ್ಲಿ ನಡೆಸಿ ದಂಥ ದೇಶ. ಭಾರತವೆಂದರೆ ಬೆಳಕು, ಬೆಳಕಿನ ಆರಾಧನೆಯೇ ದೀಪೋತ್ಸವ. ಧರ್ಮಸ್ಥಳದಲ್ಲಿ ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ಸರ್ವಧರ್ಮ ಸಮನ್ವಯ ಇಂದು ಮೂಡಿಬಂದಿದೆ ಎಂದು ತಿಳಿಸಿದರು.

ಭುವಿಯಲ್ಲಿ ಧರ್ಮ ಮಾರ್ಗದಲ್ಲಿ ನಡೆಯುವವ ಪ್ರಾಣಿ ಮನುಷ್ಯನೊಬ್ಬನೆ. ಧರ್ಮವನ್ನು ಮರೆತರೆ ಮಾನವ ಪ್ರಾಣಿ ಗಿಂತ ಕೀಳಾಗುತ್ತಾನೆ. ಎಲ್ಲ ಧರ್ಮದ ಮೂಲ ಆಶಯ ಪ್ರೀತಿ, ದಯೆ, ಕರುಣೆ, ಅನುಕಂಪ. ಧರ್ಮದ ಬುನಾದಿಯೊಂದಿಗೆ ಚತುರ್ವಿಧ ಪುರುಷಾರ್ಥಗಳಲ್ಲಿ ಬದುಕನ್ನು ರೂಪಿಸಿ ಸಧರ್ಮ ನಿಷ್ಠೆ, ಪರಧರ್ಮ ಸಹಿ ಷ್ಣುತೆಯಿಂದ ಬಾಳಿ ಎಂದು ಹರಸಿದರು.

ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಪ್ರಸ್ತಾವನೆಗೈದು, ಮಾನವ ಜನಾಂಗದ ಕಲ್ಯಾಣವೇ ಎಲ್ಲ ಧರ್ಮದ ಅಂತಿಮ ಧ್ಯೇಯ. ಸಕಲ ಧರ್ಮವೂ ಉತ್ತಮ ಜೀವನಕ್ಕೆ ದಾರಿ ತೋರುತ್ತವೆ. ಆದರೆ ಅಸೂಯೆ, ದ್ವೇಷ, ಅಹಂಕಾರದಿಂದ ಧರ್ಮವನ್ನು ಪ್ರಶ್ನಿಸುವುದರಿಂದ ಯಾವ ಸುಧಾರಣೆಯೂ ಆಗದು. ಸತ್ಯ, ಧರ್ಮಕ್ಕೆ ಜಯ ಇದ್ದೇ ಇದೆ. ಕ್ಷೇತ್ರದಲ್ಲಿ 1933ರಿಂದ ಸರ್ವಧರ್ಮ ಸಮ್ಮೇಳನ ಅವಿಚ್ಛಿನ್ನವಾಗಿ ನಡೆಯುತ್ತಿದ್ದು, ಅಂತರಂಗದ ಶುದ್ಧತೆ ಹಾಗೂ ಪರಿಪಕ್ವತೆಯಿಂದ ಧರ್ಮಾಚರಣೆ ಯೊಂದಿಗೆ ಬದುಕಿನಲ್ಲಿ ಎಲ್ಲರೂ ಒಳಿತನ್ನು ಕಾಣಬೇಕೆಂಬುದೇ ಈ 91ನೇ ಅಧಿವೇಶನದ ಸಂದೇಶ ಎಂದು ಹೇಳಿದರು.

ದೇಶದಲ್ಲಿ ಕಾಲಕಾಲಕ್ಕೆ ಧಾರ್ಮಿಕ, ಆರ್ಥಿಕ ಹಾಗೂ ಸಾಮಾಜಿಕ ಏರುಪೇರು ಗಳಾಗುತ್ತವೆ. ಇಂತಹ ಪರಿಸ್ಥಿತಿಗಳಲ್ಲಿಯೂ ಧರ್ಮವು ನಿರಂತರತೆಯನ್ನು ಕಾಯ್ದುಕೊಳ್ಳುವುದೇ ಸವಾಲು. ಯಾರು ಧರ್ಮವನ್ನು ರಕ್ಷಿಸುತ್ತಾರೊ, ಅವರನ್ನು ಧರ್ಮವೇ ರಕ್ಷಿಸುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನಗಳ ಇಂದಿನ ಯುಗದಲ್ಲಿ ಜ್ಞಾನಕ್ಕೆ ಮಹತ್ವ ಹೆಚ್ಚಾಗಿದೆ. ವಿಜ್ಞಾನ ಜ್ಞಾನವೇ ಮತ್ತು ಜ್ಞಾನ ವಿಜ್ಞಾನವೇ ಆಗಿದೆ. ಅವು ಪರಸ್ಪರ ಪೂರಕ ಮತ್ತು ಪ್ರೇರಕ. ಆದರೆ, ವಿಜ್ಞಾನವಾಗಲಿ, ಜ್ಞಾನವಾಗಲಿ ನಿಂತ ನೀರಾ ಗಬಾರದು ಎಂದು ಅಭಿಪ್ರಾಯ ಪಟ್ಟರು.

“ಆಧುನಿಕ ಭಾರತ- ಧರ್ಮ ಸಮನ್ವಯತೆ’ ವಿಷಯದ ಕುರಿತು ಲೇಖಕ, ವಾಗ್ಮಿ ಡಾ| ಎಂ.ಆರ್‌. ವೆಂಕಟೇಶ್‌, “ಪ್ರಾಚೀನ ಭಾರತ-ಧರ್ಮ ಸಮನ್ವಯತೆ’ ಬಗ್ಗೆ ಡಾ| ವಿ.ಬಿ. ಆರತಿ ಮತ್ತು “ಮಧ್ಯಕಾಲೀನ ಭಾರತ- ಧರ್ಮ ಸಮನ್ವಯತೆ’ ವಿಷಯದಲ್ಲಿ ವಾಗ್ಮಿ ಮಹಮ್ಮದ್‌ ಗೌಸ್‌ ರಶೀದ್‌ ಅಹ್ಮದ ಹವಾಲ್ದಾರ ಉಪನ್ಯಾಸ ನೀಡಿದರು.

ಗ್ರಂಥ ಬಿಡುಗಡೆ
ಶ್ರೀ ಮಂಜುನಾಥೇಶ್ವರ ಸಂಶೋಧನ ಪ್ರತಿಷ್ಠಾನದ ಸಂಶೋಧಕ ಡಾ| ಎಸ್‌.ಆರ್‌. ವಿಘ್ನರಾಜ್‌ ಸಂಪಾದಿಸಿದ “ಭೈರವೇಶ್ವರ ಪುರಾಣ’ ಗ್ರಂಥವನ್ನು ಸಿದ್ಧಲಿಂಗ ಸ್ವಾಮಿಗಳು ಬಿಡುಗಡೆಗೊಳಿಸಿದರು.

ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್‌, ಡಿ. ಹರ್ಷೇಂದ್ರ ಕುಮಾರ್‌ ಮತ್ತು ಶ್ರದ್ಧಾ ಅಮಿತ್‌ ಉಪಸ್ಥಿತರಿದ್ದರು. ಶ್ರೀನಿವಾಸ ರಾವ್‌ ಧರ್ಮಸ್ಥಳ ವಂದಿಸಿದರು. ಉಪನ್ಯಾಸಕ ಶ್ರೀಧರ ಭಟ್‌ ಕಾರ್ಯಕ್ರಮ ನಿರ್ವಹಿಸಿದರು.

ಎಲ್ಲ ಧರ್ಮದ ಉದ್ದೇಶ ಶಾಂತಿ
ಎಲ್ಲ ಧರ್ಮವೂ ಅತ್ಯಂತ ಶ್ರೇಷ್ಠ ಪುರುಷ, ಮಹಿಳೆಯನ್ನು ನೀಡಿವೆ. ಆದರೆ ಧರ್ಮ ಆರ್ಥವಾಗದೇ ಇದ್ದವ ಆಡುವ ಮಾತು ಉಗ್ರ ಎಂದು ಡಾ| ಗುರುರಾಜ ಕರ್ಜಗಿ ಹೇಳಿದರು. ಇತ್ತೀಚೆಗೆ ಮಡಿದ ಕ್ಯಾ| ಪ್ರಾಂಜಲ್‌ ಅವರ ವೀರಮರಣವನ್ನು ಸ್ಮರಿಸಿಕೊಂಡ ಅವರು, ಧರ್ಮದಲ್ಲಿ ಪ್ರೀತಿ, ಅನನ್ಯತೆ, ಗೌರವ ಇರಬೇಕೇ ಹೊರತು ಖಡ್ಗ, ಶೌರ್ಯವಲ್ಲ. ಎಲ್ಲ ಧರ್ಮದ ಮೂಲ ಉದ್ದೇಶ ಶಾಂತಿ. ಅದಕ್ಕಾಗಿ ಎಲ್ಲ ಮಂತ್ರಗಳ ಕೊನೆಯ ಸಾಲು ಶಾಂತಿ, ಶಾಂತಿ, ಶಾಂತಿ ಎಂದು ಇರುತ್ತದೆ. ಇಂದಿನ ಸರ್ವ ಧರ್ಮ ಆಶಯವೂ ಅದೇ ಎಂದು ಸರ್ವಧರ್ಮದ ಆಶಯವನ್ನು ವ್ಯಕ್ತಪಡಿಸಿದರು.

-ಸಮ್ಮೇಳದ ಗಣ್ಯರನ್ನು ಹೆಗ್ಗಡೆಯವರ ಬೀಡಿನಿಂದ ವೇದಿಕೆಯವರೆಗೆ ಭವ್ಯ ಸ್ವಾಗತದೊಂದಿಗೆ ಕರೆತರಲಾಯಿತು.
-ಕ್ಷೇತ್ರದ ವತಿಯಿಂದ ಡಾ| ಹೆಗ್ಗಡೆಯವರು ಸಿದ್ಧಲಿಂಗ ಸ್ವಾಮಿಗಳನ್ನು ಗೌರವಿಸಿದರು. ಸ್ವಾಮಿಗಳು ಡಾ| ಹೆಗ್ಗಡೆ ದಂಪತಿಯನ್ನು ಗೌರವಿಸಿದರು.

ಲಲಿತೋದ್ಯಾನ ಉತ್ಸವ ಸಂಪನ್ನ
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಗೆ ಲಕ್ಷದೀಪೋತ್ಸವದ ಮೂರನೇ ದಿನವಾದ ರವಿವಾರ ಲಲಿತೋದ್ಯಾನ ಉತ್ಸವ ವೈಭವದಿಂದ ನಡೆಯಿತು.

ಸಾವಿವಾರು ಭಕ್ತರ ಸಮ್ಮುಖದಲ್ಲಿ ದೇವಸ್ಥಾನದ ಪ್ರಾಂಗಣದಲ್ಲಿ ಸ್ವಾಮಿಗೆ ಪೂಜೆ ನಡೆದು ಉತ್ಸವ ಮೂರ್ತಿಯನ್ನು ಸ್ವರ್ಣ ಪಲ್ಲಕ್ಕಿಯಲ್ಲಿರಿಸಿ ಮೆರವಣಿಗೆ ನಡೆಯಿತು. ಸರ್ವವಾದ್ಯಗಳೊಂದಿಗೆ 16 ಸುತ್ತುಗಳಲ್ಲಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಲಾಯಿತು. ಅನಂತರ ಮೆರವಣಿಗೆಯ ಮೂಲಕ ಲಲಿತೋದ್ಯಾನಕ್ಕೆ ಕರೆತರಲಾಯಿತು.

ಉತ್ಸವ ಮೂರ್ತಿಯನ್ನು ಲಲಿತೋದ್ಯಾನದ ಕಟ್ಟೆಯ ಮೇಲೆ ಕುಳ್ಳಿರಿಸಿ ಅಷ್ಟವಿಧಾನ ಸೇವೆ ನೆರವೇರಿಸಲಾಯಿತು. ಪೂಜಾ ಕೈಂಕರ್ಯಗಳ ಅನಂತರ ಆರಾಧ್ಯ ಮೂರ್ತಿಯನ್ನು ಲಲಿತೋದ್ಯಾ ನದಿಂದ ಕರೆತಂದು ದೇವಾಲಯದ ಮುಂದಿರುವ ಬೆಳ್ಳಿರಥದಲ್ಲಿ ಕುಳ್ಳಿರಿಸಿ ಭಕ್ತಗಣ ರಥವನ್ನು ಎಳೆಯುವುದರ ಮೂಲಕ ಒಂದು ಪ್ರದಕ್ಷಿಣೆ ಹಾಕಲಾಯಿತು. ಬಳಿಕ ಮೂರ್ತಿಯನ್ನು ದೇಗುಲದ ಒಳಗೆ ಒಯ್ಯುವುದುರೊಂದಿಗೆ ಮೂರನೇ ದಿನದ ಲಲಿತೋದ್ಯಾನ ಉತ್ಸವ ಸಂಪನ್ನಗೊಂಡಿತು.

ಸೊಚಮವಾರ ಕಂಚಿಮಾರುಕಟ್ಟೆ ಉತ್ಸವ ನೆರವೇರಿತು. ಡಿ. 12ರಂದು ರಾತ್ರಿ 12 ಗಂಟೆ ಬಳಿಕ ಗೌರಿಮಾರುಕಟ್ಟೆ ಉತ್ಸವಕ್ಕೆ ನಾಡಿನೆಲ್ಲೆಡೆಯಿಂದ ಲಕ್ಷಕ್ಕೂ ಮಿಕ್ಕಿ ಭಕ್ತರು ಧರ್ಮಸ್ಥಳಕ್ಕೆ ಬಂದು ವೈವಿಧ್ಯಮಯ ಸೇವೆ ಅರ್ಪಿಸುವರು. ಡಿ. 13ರಂದು ಸಂಜೆ 7ರಿಂದ ಭಗವಾನ್‌ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಸಮವಸರಣ ಪೂಜೆಯೊಂದಿಗೆ ಲಕ್ಷದೀಪೋತ್ಸವ ಸಂಪನ್ನಗೊಳ್ಳಲಿದೆ.

ಇಂದು ಸಾಹಿತ್ಯ ಸಮ್ಮೇಳನ
ಡಿ. 12ರಂದು ಸಂಜೆ 5ರಿಂದ ಸಾಹಿತ್ಯ ಸಮ್ಮೇಳನದ 91ನೇ ಅಧಿವೇಶನ ನಡೆಯಲಿದೆ. ಇಸ್ರೋದ ಅಧ್ಯಕ್ಷ ಡಾ| ಎಸ್‌. ಸೋಮನಾಥ್‌ ಉದ್ಘಾಟಿಸುವರು. ಗಮಕಿ ಡಾ| ಎ.ವಿ. ಪ್ರಸನ್ನ ಅಧ್ಯಕ್ಷತೆ ವಹಿಸುವರು. ಹೊನ್ನಾವರದ ನಿವೃತ್ತ
ಉಪನ್ಯಾಸಕ ಡಾ| ಶ್ರೀಪಾದ ಶೆಟ್ಟಿ, ರಂಗಕರ್ಮಿ ಪ್ರಕಾಶ್‌ ಬೆಳವಡಿ ಮತ್ತು ಬಂಟ್ವಾಳದ ಡಾ| ಅಜಕ್ಕಳ ಗಿರೀಶ್‌ ಭಟ್‌ ಉಪನ್ಯಾಸ ನೀಡುವರು. ರಾತ್ರಿ 8.30ರಿಂದ ಬೆಂಗಳೂರಿನ ಜತಿನ್‌ ನೃತ್ಯ ಅಕಾಡೆಮಿಯ ವಿದುಷಿ ಅರ್ಚನಾ ಪುಣ್ಯೇಶ್‌ ಮತ್ತು ಬಳಗದವರಿಂದ ಸಾಂಸ್ಕೃತಿಕ ಕಾರ್ಯಕ್ರಮವಿರಲಿದೆ. ಕೆಸ್ಸಾರ್ಟಿಸಿ ರಾಜ್ಯದ ವಿವಿಧ ಭಾಗಗಳಿಂದ ಧರ್ಮಸ್ಥಳಕ್ಕೆ ವಿಶೇಷ ಬಸ್‌ ಸೌಲಭ್ಯ ಕಲ್ಪಿಸಿದೆ.