ಕರಾವಳಿ ಕರ್ನಾಟಕದ ರಾಜೇಶ್ ಶೆಟ್ಟಿಯವರಿಗೆ ಅಯೋಧ್ಯೆ ರಾಮ ಮಂದಿರ ದೇಗುಲ ಲೈಟಿಂಗ್ ಹೊಣೆ – ಕಹಳೆ ನ್ಯೂಸ್
ಮಂಗಳೂರು : ಹಿಂದೆ ಅನೇಕ ಸವಾಲುಗಳನ್ನೆದುರಿಸಿ ಬದುಕು ಕಟ್ಟಿಕೊಳ್ಳಲು ಬೆಂಗಳೂರಿನಲ್ಲಿ ಟೆಕ್ನಿಶಿಯನ್ ಆಗಿ ದುಡಿಯುತ್ತಿದ್ದ ಯುವಕ ಆರ್. ರಾಜೇಶ್ ಶೆಟ್ಟಿ ಇಂದು ದೇಶದ ಉದ್ದಗಲ ವ್ಯಾಪಿಸಿರುವ ಪ್ರತಿಷ್ಠಿತ ಕಂಪನಿಗಳ ಎಲೆಕ್ಟ್ರಿಕಲ್ ನಿರ್ವಹಣೆಯ ಕೋಟ್ಯಂತರ ವಹಿವಾಟಿನ ಯಶಸ್ವಿ ಉದ್ಯಮಿಯಾಗಿದ್ದಾರೆ.
ತನ್ನ ಸಂಸ್ಥೆ ರಜತ ಸಂಭ್ರಮದಲ್ಲಿರುವಾಗಲೇ ಐತಿಹಾಸಿಕ ಅಯೋಧ್ಯೆಯ ಶ್ರೀ ರಾಮ ಮಂದಿರದ ಸಮಗ್ರ ಎಲೆಕ್ಟ್ರಿಕಲ್ ವ್ಯವಸ್ಥೆ, ನಿರ್ವಹಣೆಯ ಹೊಣೆ ಅವರ ಬಳಗಕ್ಕೆ ಲಭಿಸಿದೆಯಾಗಿದೆ. ರಾಜೇಶ್ ಕರಾವಳಿ ಕರ್ನಾಟಕದ ದ.ಕ. ಜಿಲ್ಲೆಯ ಮೂಡುಬಿದಿರೆಯವರಾಗಿದ್ದಾರೆ.
ಅಯೋಧ್ಯೆಯ ಶ್ರೀ ರಾಮ ಮಂದಿರ ನಿರ್ಮಾಣದ ಪೂರ್ಣ ಹೊಣೆಗಾರಿಕೆ ಇರುವುದು ಅಲ್ಲಿನ ಶ್ರೀ ರಾಮ ಜನ್ಮ ಭೂಮಿ ಟ್ರಸ್ಟ್ ಹಾಗೂ ಟಾಟಾ ಅವರ ಟಿಸಿಎಸ್ ಸಂಸ್ಥೆಗೆಯಾಗಿದೆ. ಟಾಟಾ ಅವರ ಉಪ ಸಂಸ್ಥೆ ಟಿಸಿಎಸ್ ಎಂಜಿನಿಯರಿಂಗ್ ಸಂಸ್ಥೆಗೆ ರಾಜೇಶ್ ಶೆಟ್ಟಿ ಅವರ ಸಾಮರ್ಥ್ಯ, ಸಾಧನೆ ಚಿರಪರಿಚಿತವಾದದ್ದು. ಹಾಗಾಗಿಯೇ ಅಯೋಧ್ಯೆಯ ಮಂದಿರದ ಎಲೆಕ್ಟ್ರಿಕಲ್ ವ್ಯವಸ್ಥೆ, ನಿರ್ವಹಣೆಯ ಜವಾಬ್ದಾರಿ ರಾಜೇಶ್ ಅವರಿಗೆ ಕೊಡಬಾರದೇಕೆ ಎನ್ನುವ ಯೋಚನೆ ಹೊಳೆದದ್ದೇ ಇವರ ಹೆಸರನ್ನು ಟಿಸಿಎಸ್‌ಗೆ ರವಾನಿಸಲಾಗಿತ್ತು. ಇವರಿಗೆ ಅಯೋಧ್ಯೆ ಶ್ರೀ ರಾಮ ಮಂದಿರದ ಎಲೆಕ್ಟ್ರಿಕಲ್ ವ್ಯವಸ್ಥೆಯ ಜವಾಬ್ದಾರಿ ಕಳೆದ ಜನವರಿಯಲ್ಲಿ ದೊರೆಯಿತು. ಮೊದಲ ಹಂತದಲ್ಲಿ ಗರ್ಭಗುಡಿಯ ಲೈಟಿಂಗ್ ವ್ಯವಸ್ಥೆಗೆ ಆದ್ಯತೆ ನೀಡಲಾಗಿದ್ದು, ಡಿಸೆಂಬರ್ 2025ರೊಳಗೆ ಸಂಪೂರ್ಣ ವಿದ್ಯುದ್ದೀಕರಣ ಕಾರ್ಯ ಮುಗಿಸಿಕೊಡಬೇಕು. ಆ ನಂತರದ ನಿರ್ವಹಣೆಯ ಜವಾಬ್ದಾರಿಯೂ ರಾಜೇಶ್ ಬಳಗದ ಪಾಲಿಗೆ ದೊರೆತಿದೆ. ಇದೀಗ 150 ರಿಂದ 200 ಮಂದಿಯ ತಂಡ ಅಯೋಧ್ಯೆಯ ಮಂದಿರದ ಆವರಣದಲ್ಲಿ ಕಾರ್ಯನಿರತವಾಗಿದ್ದು, ಶೇ.70ರಷ್ಟು ಮಂದಿ ಕರಾವಳಿಯವರೇ ಇದ್ದಾರೆ. ತುಳುನಾಡಿನ ದಂಡೇ ಅಯೋಧ್ಯೆಯ ಮಂದಿರದಲ್ಲಿ ಉತ್ಸಾಹದಿಂದ ಕಾರ್ಯನಿರತವಾಗಿದೆ.
ರಾಜೇಶ್ ರವರು ಬೆಂಗಳೂರಿನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಡಿಪ್ಲೊಮಾ ಶಿಕ್ಷಣ ಪೂರೈಸಿ ಅಲ್ಲೇ ಟೆಕ್ನೀಶಿಯನ್ ಆಗಿ ಬದುಕು ಕಟ್ಟಿಕೊಳ್ಳಲು ಒದ್ದಾಡಿದ್ದರು. ತಾನಿದ್ದ ಕಂಪನಿಯಲ್ಲಿ ಕೆಲಸ ಇನ್ನೇನು ಕಾಯಂ ಆಗುತ್ತದೆ ಎನ್ನುವಷ್ಟರಲ್ಲೇ ಮೇಲಧಿಕಾರಿಯ ಒತ್ತಡಕ್ಕೆ ಕಟ್ಟು ಬಿದ್ದು ತನ್ನದೇ ಸಂಸ್ಥೆ ತೆರೆಯಬೇಕಾದ ಅನಿವಾರ್ಯತೆಗೆ ಸಿಲುಕಿದ್ದು ಬದುಕಿಗೇ ಹೊಸ ತಿರುವು ನೀಡಿದೆಯಾಗಿದೆ. ಅಂದು ಒತ್ತಡಕ್ಕೆ ಸಿಲುಕಿ ಸ್ಥಾಪಿಸಿದ್ದ ಶಂಕರ್ ಹೆಸರಿನ ಸಂಸ್ಥೆ ಇಂದು ಶಂಕರ್ ಎಲೆಕ್ಟ್ರಿಕಲ್ಸ್ ಸರ್ವೀಸಸ್ ಇಂಡಿಯಾ ಪ್ರೈ.ಲಿ ಎಂಬ ಬೃಹತ್ ಸಂಸ್ಥೆಯಾಗಿ ಬೆಳೆದಿದ್ದು, ಅಮೆಜಾನ್, ಗೂಗಲ್, ಯಾಹೂ, ಮೈಕ್ರೋಸಾಫ್ಟ್ ಹೀಗೆ ಬೆಂಗಳೂರು ಮಾತ್ರವಲ್ಲ, ಚೆನ್ನೈ, ಹೈದರಾಬಾದ್, ಮುಂಬೈ ಹೀಗೆ 400ಕ್ಕೂ ಅಧಿಕ ದೊಡ್ಡ ಕಂಪನಿಗಳ ಎಲೆಕ್ಟ್ರಿಕಲ್ ನಿರ್ವಹಣೆಯಲ್ಲಿ ಟಾಪರ್ ಆಗಿದೆ. ವಾರ್ಷಿಕ 500 ಕೋಟಿ ರು.ನಷ್ಟು ವ್ಯವಹಾರವನ್ನೂ ನಡೆಸುತ್ತಿದೆ. ವರ್ಷಕ್ಕೊಮ್ಮೆ ಊರ ದೈವಗಳ ಸೇವೆಗೆ, ಕಟೀಲು ಹೀಗೆ ತವರಿನತ್ತ ಮುಖ ಮಾಡುವ ರಾಜೇಶ್, ತಾಯಿ ಲೀಲಾ, ಪತ್ನಿ ಅಪರ್ಣಾ, ಪುತ್ರರಾದ ದಕ್ಷ್ರಾಜ್, ಶೌರ್ಯ ಹೀಗೆ ಎಲ್ಲರ ಸಹಕಾರದಿಂದ ತನ್ನ ಸ್ವ ಉದ್ಯಮದಲ್ಲಿ ಸಾಮಾಜಿಕ ಕಾಳಜಿ, ಸೇವಾ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.