ಕಿಸಾನ್ ಸಂಘದಿಂದ ಹಕ್ಕೋತ್ತಾಯ ಪ್ರತಿಭಟನಾ ಜಾಥಾ : ತಡವಾಗಿ ಬಂದು ಉದ್ಧಟತನ ತೋರಿದ ತಹಶೀಲ್ದಾರ್ ನ್ನು ಸುತ್ತುವರೆದು ಘೇರಾವ್ ಹಾಕಿದ ರೈತರು – ಕಹಳೆ ನ್ಯೂಸ್
ಮೂಡುಬಿದಿರೆ: ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಭಾರತೀಯ ಕಿಸಾನ್ ಸಂಘ ತಾಲೂಕು ವತಿಯಿಂದ ಮೂಡುಬಿದಿರೆಯಲ್ಲಿ ನಡೆದ `ರೈತರ ಹಕ್ಕೊತ್ತಾಯ ಪ್ರತಿಭಟನಾ ಜಾಥಾದಲ್ಲಿ ಮನವಿಯನ್ನು ಸ್ವೀಕರಿಸಲು ತಡವಾಗಿ ಬಂದು “ನನಗೆ ನಿಮ್ಮದು ಇದೊಂದೇ ಕೆಲಸವಲ್ಲ ಬೇರೆ ಕೆಲಸವಿದೆ” ಎಂದು ಉದ್ಧಟತನದಿಂದ ಮಾತನಾಡಿದ ತಹಶೀಲ್ದಾರ್ ಪ್ರದೀಪ್ ಹುರ್ಡೇಕರ್ ಅವರನ್ನು ಪ್ರತಿಭಟನಾ ನಿರತರು ಸುತ್ತುವರೆದು ಧಿಕ್ಕಾರ ಕೂಗಿದ ಘಟನೆ ನಡೆಯಿತು.
ಸಂಘದ ಜಿಲ್ಲಾಧ್ಯಕ್ಷ ಶಾಂತಿಪ್ರಸಾದ್ ಹೆಗ್ಡೆ ಅವರು ಮಾತನಾಡಿ ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಮನವಿಯನ್ನು ನೀಡಲು 10.30 ಕ್ಕೆ ಬರುವುದಾಗಿ ತಿಳಿಸಿದ್ದರೂ ಯಾವುದೇ ಮಾಹಿತಿಯನ್ನು ನೀಡದೆ ತಡವಾಗಿ ಬಂದು ರೈತರಿಗೆ ಅವಮಾನ ಮಾಡಿದ್ದೀರಿ. ಸಂಘಟನೆಯನ್ನು ಅವಮಾನಿಸುವಂತಹ ಮಾತುಗಳು ಬಂದರೆ ಸಹಿಸುವುದಿಲ್ಲ. ನಿಮಗೆ ರೈತರ ಕೆಲಸ ಮಾಡಲು ಆಗದಿದ್ದರೆ ತಿಳಿಸಿ ನಾವು ಬೇರೆ ತಹಶೀಲ್ದಾರ್ ಅವರನ್ನು ಕರೆಸಿಕೊಳ್ಳುತ್ತೇವೆಂದು ಎಚ್ಚರಿಕೆಯನ್ನು ನೀಡಿದರು.
ಭಾರತೀಯ ಕಿಸಾನ್ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ ದಿಕ್ಸೂಚಿ ಭಾಷಣ ಮಾಡಿ ಬ್ರಿಟಿಷರು ರೈತರಿಗೆ ಮಾಡದಿರುವ ಕೆಲಸವನ್ನು ಇಂದಿನ ಸರಕಾರಗಳು ಮಾಡುತ್ತಿದ್ದು ಇದು ದೇಶಕ್ಕೆ ಅವಮಾನ. ಕಳೆದ 3 ವರ್ಷದಿಂದ ವಿಪರೀತ ಅತಿವೃಷ್ಠಿ ಹಾಗೂ ಈ ವರ್ಷ ಮಳೆಯಿಂದಾಗಿ ಬೆಳೆ ಹಾಳಾಗಿದ್ದು ರೈತರು ತುಂಬಾ ನಷ್ಟವನ್ನು ಅನುಭವಿಸಿದ್ದಾರೆ. ರೈತರನ್ನು ಕುರಿಗಳಂತೆ ದುಡಿಸುತ್ತಿದ್ದೀರಿ ರೈತರು ದುಡಿಯದಿದ್ದರೆ ಹೊಟ್ಟಗೇನು ತಿನ್ನುತ್ತೀರಿ..? 25,000 ಪರಿಹಾರ ಕೊಡಿ ಎಂದರೆ 2000 ನೀಡುತ್ತೇವೆ ಎನ್ನುತ್ತಾರೆ ಎಂದ ಅವರು ಪುಕ್ಸಟ್ಟೆ ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೀರಿ ನಾವು ಯಾರೂ ನಿಮ್ಮ ಬಳಿ ಗ್ಯಾರಂಟಿಗಳನ್ನು ಕೇಳಿಲ್ಲ ಎಂದು ಕಿಡಿ ಕಾರಿದರು.
ನಾವು ರೈತರ ಪರವಾಗಿ ಇದ್ದೇವೆ. ಬರಗಾಲ ಪೀಡಿತ ಪ್ರದೇಶಗಳನ್ನು ಡಿಕ್ಲೆರ್ ಮಾಡಲಾಗಿದೆ. ನಿಮ್ಮ ಮನವಿಯ ಬಗ್ಗೆ ಸರಕಾರದ ಗಮನಕ್ಕೆ ತರಲಾಗುವುದು ಎಂದ ತಹಶೀಲ್ದಾರ್ ಪ್ರದೀಪ್ ಹುರ್ಡೇಕರ್ ತಡವಾಗಿ ಬಂದಿರುವುದಕ್ಕೆ ವಿಷಯ ತಿಳಿಸಿ ಕ್ಷಮೆಯಾಚಿಸಿದರು.
ಪುರಸಭಾ ವ್ಯಾಪ್ತಿಯ ೩ ಕಿಮೀ ಟವರ್ ಲೊಕೇಶನ್ ವ್ಯಾಪ್ತಿಯಲ್ಲಿ ಅಕ್ರಮ ಸಕ್ರಮ ಕಾನೂನಿನಲ್ಲಿದ್ದ ಭೂಮಂಜೂರಾತಿ ಕಾಯ್ದೆಯನ್ನು ಸರಕಾರ ರದ್ದುಪಡಿಸಿರುವುದನ್ನು ವಾಪಾಸ್ ಪಡಕೊಂಡು ಈ ಹಿಂದಿನ ನಿಯಮವನ್ನೆ ಮುಂದುವರಿಸಬೇಕು, ಕುಮ್ಕಿ ಭೂಮಿಯ ಹಕ್ಕನ್ನು ರೈತರಿಗೆ ನೀಡಬೇಕು ಹಾಗೂ ಸರಕಾರಿ ಪಹಣಿ ಪತ್ರಿಕೆ ೧೧ನೇ ಕಾಲಂನಲ್ಲಿ ಕುಮ್ಕಿದಾರನ ಹೆಸರನ್ನು ಸರಕಾರ ನಮೂದಿಸಲು ಆದೇಶ ನೀಡಬೇಕು. ನೀರಾವರಿ ಪಂಪ್‌ಸೆಟ್‌ಗೆ ಹೊಸ ವಿದ್ಯುತ್ ಸಂಪರ್ಕ ಪಡೆಯಲು ಅದರ ಖರ್ಚು ವೆಚ್ಚಗಳನ್ನು ರೈತರೆ ಭರಿಸಬೇಕೆಂಬ ಸರಕಾರ ವಿಧಿಸಿರುವ ಹೊಸ ಷರತ್ತುಗಳನ್ನು ರದ್ದುಪಡಿಸಿಬೇಕು, ಕೊಳವೆ ಬಾವಿಗೆ ಮಳೆನೀರು ಮರುಪೂರಣ ಕಡ್ಡಾಯಗೊಳಿಸುವ ಬಗ್ಗೆ ಸರಕಾರ ನಿಯಮ ಜಾರಿಗೆ ತರಬೇಕು. ರೈತರ ಅನುಮತಿ ಪಡೆಯದೆ ಸರಕಾರ ಕೃಷಿಭೂಮಿಯಲ್ಲಿ ವಿದ್ಯುತ್ ತಂತಿ ಎಳೆಯುವುದು ಸೇರಿದಂತೆ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ನಡೆಸಬಾರದು. ರೈತರ ಒಪ್ಪಿಗೆ ಪಡಕೊಂಡರೆ ಸದ್ರಿ ಜಾಗಕ್ಕೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದರು.
ರೈತರ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಸರಕಾರ ವಿಫಲವಾಗಿರುವುದರಿಂದ ರೈತರ ಬದುಕು ದುಸ್ತರವಾಗಿದೆ. ರೈತರ ಹಕ್ಕುಗಳಿಗಾಗಿ ಭಾರತೀಯ ಕಿಸಾನ್ ಸಂಘ ದ.ಕ ಜಿಲ್ಲೆಯ ಪ್ರತಿ ತಾಲ್ಲೂಕುಗಳಲ್ಲಿ ಜಾಗೃತಿ ಕಾರ್ಯಕ್ರಮವನ್ನು ಮೂಡಿಸುತ್ತಾ ಬಂದರೂ ಸರಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ ಇದಕ್ಕಾಗಿ ಎಚ್ಚರಿಕೆ ನೀಡಲು ಈ ಜಾಥಾವನ್ನು ಹಮ್ಮಿಕೊಳ್ಳಲಾಯಿತು. ಬಳಿಯಿಂದ ಜಾಥಾ ಆರಂಭಿಸಿ ಬಸ್‌ನಿಲ್ದಾಣದ ಮೂಲಕ ಪೇಟೆಯ ಮುಖ್ಯ ರಸ್ತೆಯಲ್ಲಿ ಸಾಗಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು.
ಇರುವೈಲು ಗ್ರಾ.ಪಂ.ಮಾಜಿ ಅಧ್ಯಕ್ಷ ವಲೇರಿಯನ್ ಕುಟಿನ್ಹ, ಕಿಸಾನ್ ಸಂಘದ ಪ್ರಮುಖರಾದ ವಸಂತ ಭಟ್, ಜಾಯ್ಲಸ್ ಡಿಸೋಜಾ, ನಾರಾಯಣ ಭಟ್, ರಾಧಾಕೃಷ್ಣ ಶೆಟ್ಟಿ, ವಸಂತ ಶೆಟ್ಟಿ, ಪ್ರವೀಣ್ ಕುಮಾರ್ ಮತ್ತಿತರರು ಈ ಸಂದರ್ಭದಲ್ಲಿದ್ದರು.