ಕಾರ್ಮಿಕನ ಜೀವ ಬಲಿ ಪಡೆದ ಕಲ್ಲಿನ ಕೋರೆ… : ಕಲ್ಲಿನ ಕೋರೆಯ ಗುಂಡಿ ಮುಚ್ಚದೆ ಇರುವುದೇ ಕಾರ್ತಿಕ್ ಸಾವಿಗೆ ಕಾರಣವಾಯಿತೇ….– ಕಹಳೆ ನ್ಯೂಸ್
ವಿಟ್ಲ: ಅಳಿಕೆ ಗ್ರಾಮದ ಅದಾಳ ಎಂಬಲ್ಲಿನ ಕಲ್ಲಿನ ಕೋರೆಯ ಗುಂಡಿಗೆ ಬಿದ್ದು ಕಾರ್ಮಿಕನೋರ್ವ ಮೃತಪಟ್ಟ ಘಟನೆ ನಿನ್ನೆ ನಡೆದಿದೆ.
ಮೃತ ಕಾರ್ಮಿಕನನ್ನು ವಿಟ್ಲಮುಡ್ನೂರು ಗ್ರಾಮದ ಆಲಂಗಾರು ಅಡ್ಡದ ಪಾದೆ ನಿವಾಸಿ ಕೂಲಿ ಕೆಲಸ ಮಾಡುತ್ತಿರುವ ಬಡ ಕುಟುಬದ ಬಾಬು ನಾಯ್ಕ್‌ರವರ ಮಗ ಕಾರ್ತಿಕ್ (23) ಎಂದು ಗುರುತಿಸಲಾಗಿದೆ.
ಕಾರ್ತಿಕ್ ಅವರು ಅಳಿಕೆ ಗ್ರಾಮದ ದೇವದಾಸ ಯಾನೆ ಕಾಡು ಎಂಬವರಿಗೆ ಸೇರಿದ ಕಲ್ಲಿನ ಕೋರೆಯ ಮಣ್ಣು ತೆಗೆಯುವ ಕೆಲಸಕ್ಕೆ ನೆರೆಯ ಸತೀಶ್ ಎಂಬವರೊಂದಿಗೆ ಹೋಗಿದ್ದರು.
ಮಧ್ಯಾಹ್ನ ತನಕ ಕೆಲಸ ಮಾಡಿ ಕೈಕಾಲು ಮುಖ ತೊಳೆಯಲೆಂದು ಕೋರೆಯ ನೀರಿನ ಗುಂಡಿಯ ಬಳಿಗೆ ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಈ ಘಟನೆ ಸಂಭವಿಸಿದೆ.
ತಕ್ಷಣ ಅವರನ್ನು ಮೇಲಕ್ಕೆತ್ತಿದ ಸಹ ಕಾರ್ಮಿಕ ಸತೀಶ, ವಿಟ್ಲ ಆರೋಗ್ಯ ಕೇಂದ್ರಕ್ಕೆ ಸಾಗಿಸಿದರೂ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಮೃತ ಕಾರ್ತಿಕ್ ಅವರ ಸಹೋದರ ಲೋಕೇಶ್ ಅವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಯುಡಿಆರ್ 53/2023 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿದೆ.
ಇನ್ನು ಕೋರೆಯ ಮಾಲಕ ದೇವದಾಸ ಯಾನೆ ಕಾಡು ರವರು ಕೇರಳ ಗಡಿ ಪ್ರದೇಶ ಅಡ್ಯನಡ್ಕದಲ್ಲಿ ಪೆಟ್ರೋಲ್ ಬಂಕ್ ಮತ್ತು ವೈನ್ ಶಾಪ್ ಹೊಂದಿದ್ದು, ಪಂಚಾಯತ್ ಅಧ್ಯಕ್ಷ ಹಾಗೂ ಚಂದಪ್ಪ ಎಂಬವರ ಮೂಲಕ ಮೃತನ ಬಡ ಕುಟುಂಬಕ್ಕೆ ಚಿಲ್ಲರೆ ಹಣ ನೀಡಿ ರಾಜಿ ಪಂಚಾಯತಿ ಮೂಲಕ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸುತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಆರೋಪ ಕೇಳಿ ಬರುತ್ತಿದೆ.