ಕಾಪು : ಬಹುತೇಕರಿಗೆ ಲೀಲಣ್ಣ, ಹಲವರಿಗೆ ಆಪತ್ಬಾಂಧವ, ಕಲಾ ಸಂಘಟಕ, ಕಲಾಪೋಷಕರಾಗಿದ್ದ ಲೀಲಾಧರ್ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದು ಕಾಪು ಜನತೆಗೆ ದಿಗ್ಭ್ರಮೆ ಉಂಟು ಮಾಡಿದೆ. ವಿವಿಧ ಕಾರ್ಯಕ್ರಮಗಳ ಆಯೋಜಕರಾಗಿ ಕಲೆ, ಸಂಸ್ಕೃತಿ, ಧಾರ್ಮಿಕ, ಜನಪದ, ಶೈಕ್ಷಣಿಕ ಕ್ಷೇತ್ರಗಳ ಪೋಷಕರಾಗಿ ಸ್ವಾರ್ಥವಿಲ್ಲದೇ, ಕಳಂಕ ರಹಿತರಾಗಿ ಸಮಾಜದಲ್ಲಿ ಗುರುತಿಸಲ್ಪಟ್ಟಿದ್ದರು. ಅವರ ಸೇವೆಗಾಗಿ ಎಲ್ಲರೂ ಅವರನ್ನು ಆತ್ಮೀಯವಾಗಿ ಲೀಲಣ್ಣ ಎಂದೇ ಕರೆಯುತ್ತಿದ್ದರು.
ಇಂತಹ ಲೀಲಾಧರ್ ಮಂಗಳವಾರ ತಡರಾತ್ರಿ ತಮ್ಮ ಪತ್ನಿ ವಸುಂಧರಾ ಶೆಟ್ಟಿ ಜೊತೆ ನೇಣಿಗೆ ಶರಣಾಗಿ ಇಹಲೋಕ ತ್ಯಜಿಸಿದ್ದಾರೆ. ಬಹುತೇಕರಿಗೆ ಸಹಾಯ ಮಾಡಿದ ವ್ಯಕ್ತಿ ಎಲ್ಲರಿಗೂ ಮಾರ್ಗದರ್ಶಕರಾಗಿದ್ದ ವ್ಯಕ್ತಿ ಇಂತಹದ್ದೊAದು ನಿರ್ಧಾರಕ್ಕೆ ಬಂದ ಬಗ್ಗೆ ಜನಸಾಮಾನ್ಯರನ್ನು ಅಚ್ಚರಿಯಲ್ಲಿ ಕೆಡವಿದೆ.
ಈ ದಂಪತಿಗೆ ಮಕ್ಕಳಿರಲಿಲ್ಲ. ಓರ್ವ ದತ್ತುಪುತ್ರಿ ಇದ್ದರು. ಇವರ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಕೌಟುಂಬಿಕ ಕಾರಣಕ್ಕೆ ಮನನೊಂದು ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಇಂದು ಲೀಲಾಧರ್ ದಂಪತಿಯ ಅಂತ್ಯಕ್ರಿಯೆ ಸಾವಿರಾರು ಜನರ ಸಮ್ಮುಖದಲ್ಲಿ ನಡೆಯಲಿದ್ದು, ಗಣ್ಯರು ಕಂಬನಿ ಮಿಡಿದಿದ್ದಾರೆ.