ಉಡುಪಿ: ಉಗ್ರ ಸಂಘಟನೆಯಿಂದ ನನಗೆ ಬೆದರಿಕೆ ಇದೆ. ನನ್ನ ಕುಟುಂಬಕ್ಕೂ ಅಪಾಯ ಇದೆ. ನನ್ನ ಸಾವಿಗೆ ಉಗ್ರಗಾಮಿ ಸಂಘಟನೆಯೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಟೇಶ್ವರದಲ್ಲಿ ಸೋಮವಾರ ನಡೆದಿದೆ. ವಿವೇಕ್ (23)ನೇಣು ಹಾಕಿಕೊಂಡು ಸಾವನ್ನಪ್ಪಿದ ಯುವಕ.
ಕುಂದಾಪುರದ ಮಾರ್ಕೋಡು ಬಬ್ಬರಿಮಕ್ಕಿಯಲ್ಲಿ ಘಟನೆ ನಡೆದಿದ್ದು, ಮೃತ ಯುವಕ ಉಡುಪಿಯ ರಿಲಯನ್ಸ್ ಫೌಂಡೇಷನ್ ನ ಕೃಷಿ ವಿಭಾಗದಲ್ಲಿ ಉದ್ಯೋಗಿಯಾಗಿದ್ದಾನೆ. ಡೆತ್ ನೋಟ್ ಜನರನ್ನು ಬೆಚ್ಚಿ ಬೀಳಿಸಿದ್ದು, ನನ್ನ ಸಾವಿಗೆ ಉಗ್ರಗಾಮಿ ಸಂಘಟನೆಯೇ ಕಾರಣ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾನೆ.
ಮೂರು ಪುಟಗಳ ಡೆತ್‌ನೋಟ್ ನಲ್ಲಿ ಆತಂಕಕಾರಿ ಮಾಹಿತಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಯುವಕನ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸಾವಿನ ಕಾರಣ ಖಚಿತಪಡಿಸದ ಪೊಲೀಸರು, ಹೆಚ್ಚಿನ ಮಾಹಿತಿಗಾಗಿ ಕಲೆಹಾಕುತ್ತಿದ್ದಾರೆ. ವಿವೇಕ್ ಜೀವನ ಕ್ರಮಕ್ಕೂ ಡೆತ್ ನೋಟ್ ನಲ್ಲಿರುವ ಮಾಹಿತಿಗೂ ತಾಳೆಯಾಗದ ಹಿನ್ನೆಲೆಯಲ್ಲಿ ವಿವರಗಳ ಸತ್ಯಾಸತ್ಯತೆ ಪರಿಶೀಲಿಸಲು ಪೊಲೀಸರು ಮುಂದಾಗಿದ್ದಾರೆ. ಯಾರೊಂದಿಗೂ ಈ ಬಗ್ಗೆ ಹೇಳಿಕೊಂಡಿರದ ವಿವೇಕ್ ಯಾವ ಸಂಘಟನೆಯಲ್ಲೂ ಗುರುತಿಸಿಕೊಂಡಿರದ ವಿವೇಕ್ ಈ ರೀತಿಯ ಆತಂಕಕಾರಿ ವಿಷಯವನ್ನು ಹೊರಹಾಕಿದ್ದು ಎಲ್ಲರಲ್ಲೂ ಗೊಂದಲಕ್ಕೆ ಎಡೆ ಮಾಡಿದೆ.