ವಿಟ್ಲ: ಕಲ್ಲಿನ ಕೋರೆಯಲ್ಲಿ ಜಾರಿ ಬಿದ್ದು ಮೃತಪಟ್ಟ ಕಾರ್ತಿಕ್ ಮನೆಗೆ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಸಮಿತಿ ಭೇಟಿ – ಕಹಳೆ ನ್ಯೂಸ್
ವಿಟ್ಲ: ವಿಟ್ಲ ಮುಡ್ನೂರು ಗ್ರಾಮದ ಆಲಂಗಾರು ಅಡ್ಡದ ಪಾದೆ ನಿವಾಸಿ ಕೂಲಿ ಕೆಲಸ ಮಾಡುತ್ತಿರುವ ಬಡ ಕುಟುಂಬದ ಬಾಬು ನಾಯ್ಕ ರವರ ಮಗ ಕಾರ್ತಿಕ್ ಅವರು ಮಂಗಳವಾರ ಅಳಿಕೆ ಗ್ರಾಮದ ದೇವದಾಸ ಎಂಬವರಿಗೆ ಸೇರಿದ ಕಲ್ಲಿನ ಕೋರೆಯ ಮಣ್ಣು ತೆಗೆಯುವ ಕೆಲಸಕ್ಕೆ ಹೋಗಿದ್ದು, ಕೋರೆಯ ನೀರಿನ ಗುಂಡಿಯ ಬಳಿಗೆ ತೆರಳಿದ್ದಾಗ ಕಾಲು ಜಾರಿ ಬಿದ್ದು ಈಜಲು ಬಾರದೆ ಮೃತಪಟ್ಟಿರುತ್ತಾರೆ. ಮೃತ ಕಾರ್ತಿಕ್ ರವರ ಮನೆಗೆ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಸಮಿತಿಯವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ವೇಣುಗೋಪಾಲ ಶೆಟ್ಟಿ ಮರುವಾಳ, ಉಪಾಧ್ಯಕ್ಷರಾದ ನಾರಾಯಣ ಪೂಜಾರಿ ಕಟ್ನಾಜೆ, ಕಾರ್ಯದರ್ಶಿ ಹರೀಶ್ ಮರುವಾಳ , ನಿಕಟಪೂರ್ವ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರು, ಗೌರವ ಸಲಹೆಗಾರರು, ವಕೀಲರು ಗೋವಿಂದ ರಾಜ್ ಪೆರುವಾಜೆ, ಪದ್ಮನಾಭ ಶೆಟ್ಟಿ ಚಪ್ಪುಡಿಯಡ್ಕ ಮೊದಲಾದವರು ಉಪಸ್ಥಿತರಿದ್ದರು.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ದೇವಸ್ಥಾನದ ಸಮಿತಿ ಯವರು ಕಾರ್ತಿಕ್ ನಮ್ಮ ಗ್ರಾಮದ ಒಬ್ಬ ಸಕ್ರೀಯ ಕಾರ್ಯಕರ್ತರಾಗಿದ್ದು ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಸಂದರ್ಭದಲ್ಲಿ ಶ್ಮಮದಾನದ ಮೂಲಕ ಉತ್ತಮ ಕೆಲಸ ಮಾಡಿದ್ದನ್ನು ನೆನಪಿಸಿ ಕೊಂಡರು.
ಕಾರ್ತಿಕ್ ರವರ ಕುಟುಂಬಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ದೇವಸ್ಥಾನದ ವತಿಯಿಂದ ಶಾಸಕರು ಮತ್ತು ಸಂಭಂದಿಸಿದ ಇಲಾಖೆಗೆ ಮನವಿಯನ್ನು ನೀಡುತ್ತೇವೆ ಎಂದು ಹೇಳಿ ಕುಟುಂಸ್ಥರಿಗೆ ಸಾಂತ್ವಾನ ಹೇಳಿದರು.