Recent Posts

Sunday, January 19, 2025
ಸುದ್ದಿ

ಉಡುಪಿ ಪೇಜಾವರ ಶ್ರೀಗಳ ಷಷ್ಠ್ಯಬ್ದಿ :  ಉಡುಪಿ ರಥಬೀದಿಯಲ್ಲಿ ಅಭಿನಂದನ  ಕಾರ್ಯಕ್ರಮ – ಕಹಳೆ ನ್ಯೂಸ್

ಉಡುಪಿ : ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವಿಶ್ವಸ್ಥರೂ ಆಗಿರುವ ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಅರುವತ್ತರ (ಷಷ್ಠ್ಯಬ್ದಿ) ಅಭಿನಂದನ ಕಾರ್ಯಕ್ರಮ ಇಂದು ಉಡುಪಿ ರಥಬೀದಿಯಲ್ಲಿ ಅದ್ದೂರಿಯಾಗಿ ನಡೆಯಲಿದೆ.

ಉಡುಪಿ ಶಾಸಕ ಯಶಪಾಲ್ ಸುವರ್ಣ ನೇತೃತ್ವದ ಅಭಿನಂದನ ಸಮಿತಿ ಕಾರ್ಯಕ್ರಮದ ಅದ್ದೂರಿ ತಯಾರಿಗೆ ಸಿದ್ಧತೆ ಮಾಡಿಕೊಂಡಿದೆ. ಬೆಳಿಗ್ಗೆ ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಣ ಮಂತ್ರ ಯಾಗ, ಗೋ ಸೂಕ್ತ ಯಾಗ ನಡೆಯಲಿದೆ. ಮಧ್ಯಾಹ್ನ ರಾಜಾಂಗಣದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಪರಾಹ್ನ 3 ಗಂಟೆಗೆ ಜೋಡುಕಟ್ಟೆಯಿಂದ ರಥಬೀದಿ ವರೆಗೆ ಆಕರ್ಷಕ ಶೋಭಾಯಾತ್ರೆ ನಡೆಯಲಿದ್ದು ಭಜನಾ ತಂಡಗಳು, ಜಾನಪದ ತಂಡಗಳು, ವಾದ್ಯ ವೇದ ಘೋಷ ಇತ್ಯಾದಿಗಳು ಮೆರವಣಿಗೆಯಲ್ಲಿ ಸಾಗಿಬರಲಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಜೆ 5ರಿಂದ ರಥಬೀದಿಯ ಪೇಜಾವರ ಮಠದ ಮುಂಭಾಗದಲ್ಲಿ ಹಾಕಲಾಗಿರುವ ಬೃಹತ್‌ ವೇದಿಕೆಯಲ್ಲಿ ಶ್ರೀಗಳಿಗೆ ಸುವರ್ಣಾಭಿಷೇಕ ಸಹಿತ ವಿಶಿಷ್ಟ ರೀತಿಯಲ್ಲಿ ಅಭಿವಂದನೆ ನಡೆಸಲಾಗುವುದು.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸಚಿವರು, ಜನಪ್ರತಿನಿಧಿಗಳು, ಜಿಲ್ಲೆಯ ಶಾಸಕರು, ಗಣ್ಯ ಪ್ರಮುಖರು ಭಾಗವಹಿಸುವರು.

ಪರ್ಯಾಯ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮತ್ತು ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು, ಕಾಣಿಯೂರು ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಅದಮಾರು ಕಿರಿಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹಾಗೂ ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸುವರು.

ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಅಂತಾರಾಷ್ಟ್ರೀಯ ಖ್ಯಾತಿಯ ಹಿಂದೂಸ್ಥಾನಿ ಗಾಯಕ ಪುಣೆ ಮಹೇಶ್ ಕಾಳೆ ಮತ್ತು ಬಳಗದವರಿಂದ ಹಿಂದೂಸ್ಥಾನಿ ಸಂಗೀತ ಮತ್ತು ಭಜನ್ ನಡೆಯಲಿದೆ ಎಂದು ಪೇಜಾವರ ಶ್ರೀ ಅಭಿನಂದನ ಸಮಿತಿ ಅಧ್ಯಕ್ಷ, ಶಾಸಕ ಯಶಪಾಲ್ ಸುವರ್ಣ ಮತ್ತು ಕಾರ್ಯದರ್ಶಿ ಜಿ. ವಾಸುದೇವ ಭಟ್ ತಿಳಿಸಿದ್ದಾರೆ