Recent Posts

Friday, November 22, 2024
ದಕ್ಷಿಣ ಕನ್ನಡಮೂಡಬಿದಿರೆಶಿಕ್ಷಣಸುದ್ದಿ

” ಇಂಥ ಪ್ರೇಕ್ಷಕರನ್ನು, ಇಂಥ ಸೊಬಗಿನ, ಸಂಭ್ರಮೋಲ್ಲಾಸದ ಉತ್ಸವವನ್ನು ನಾನೆಂದೂ ಕಂಡಿಲ್ಲ, ವಿರಾಸತ್‌ ಸಂಘಟಕ ಮೋಹನ ಆಳ್ವರಂಥ ಅದ್ಭುತ, ಜೀನಿಯಸ್‌ ಪ್ರತಿಭೆಗೆ ವಂದಿಸುವೆ ಶ್ರೇಯಾ ಘೋಷಾಲ್‌ – ಕಹಳೆ ನ್ಯೂಸ್

ಮೂಡುಬಿದಿರೆ: “ಇಂಥ ಪ್ರೇಕ್ಷಕರನ್ನು, ಇಂಥ ಸೊಬಗಿನ, ಸಂಭ್ರಮೋಲ್ಲಾಸದ ಉತ್ಸವವನ್ನು ನಾನೆಂದೂ ಕಂಡಿಲ್ಲ, ಎಂಥ ಪ್ರೀತಿ, ಗೌರವದ ಸ್ವಾಗತ, ವೇದಿಕೆ, ಸಂಗೀತವನ್ನು ಆಸ್ವಾದಿಸುವ ದೂರ ದಿಗಂತದವರೆಗೂ ಹಬ್ಬಿದೆಯೇನೋ ಎಂಭ ಭಾವನೆ ಹುಟ್ಟಿಸುವ ಸಭೆ, ತನ್ಮಯರಾಗಿ ಸಂಗೀತದೊಂದಿಗೆ ಮನಸ್ಸನ್ನು ಬೆಸೆದು ಕೊಂಡಂತಿರುವ ನಿಮ್ಮನ್ನೆಲ್ಲ ಕಂಡಾಗ ನಾನೊಬ್ಬ ಭಾರತೀಯಳೆನ್ನಲು ಹೆಮ್ಮೆ ಪಡುತ್ತೇನೆ’ ಎಂದು ಉದ್ಗರಿಸಿದವರು ಪ್ರಸಿದ್ಧ ಚಲನಚಿತ್ರ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್‌.

 

ಜಾಹೀರಾತು
ಜಾಹೀರಾತು
ಜಾಹೀರಾತು

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಪುತ್ತಿಗೆಯ ವನಜಾಕ್ಷಿ ಕೆ. ಶ್ರೀಪತಿ ಭಟ್‌ ಬಯಲು ರಂಗಮಂಟಪದಲ್ಲಿ ನಡೆಯುತ್ತಿರುವ ಆಳ್ವಾಸ್‌ ವಿರಾಸತ್‌ನಲ್ಲಿ ಶನಿವಾರ ಸಂಜೆ “ಭಾವ ಲಹರಿ’ ಕಾರ್ಯಕ್ರಮವನ್ನು ಅವರು ಪ್ರಸ್ತುತಪಡಿಸಿದರು. “ಈ ಊರಲ್ಲಿ ಇಷ್ಟೊಂದು ಅಗಾಧ ಸಂಖ್ಯೆಯಲ್ಲಿ ಸಂಗೀತಾಸಕ್ತರು ಸೇರುತ್ತಾರೆಂದು ನಿರೀಕ್ಷಿಸಿರಲಿಲ್ಲ . ಆಳ್ವಾಸ್‌ ವಿರಾಸತ್‌ ಅನ್ನು ಸುಂದರವಾಗಿ ನಿರ್ವಹಿಸಲಾಗಿದೆ ಎಂದಾಗ ನೆರೆದ ಮಂದಿ ದೀರ್ಘ‌ ಕರತಾಡನಗೈದರು.

ಜಾಹೀರಾತು
ಜಾಹೀರಾತು
ಜಾಹೀರಾತು

“ನಾನು ಹೃದಯಾಂತರಾಳದಿಂದ ಹಾಡುವೆ, ನೀವೂ ನನ್ನ ಹಾಡಿಗೆ ಧ್ವನಿಗೂಡಿಸುವಿರಲ್ಲ, ಹೆಜ್ಜೆ ಹಾಕುವಿರಲ್ಲ’ ಎಂದಾಗ “ಹೋ….’ ಎಂದು ಯುವಜನರು ಸಂಭ್ರಮಿಸಿ ಕೂಗಿದರು.

ಸಭಾಂಗಣವನ್ನು ಕತ್ತಲಾಗಿ ಸಿದಾಗ, ಪ್ರೇಕ್ಷಕರೆಲ್ಲ ತಮ್ಮ ಮೊಬೈಲ್‌ ಬೆಳಕನ್ನು ಬೆಳಗಿಸಿದಾಗ ನಕ್ಷತ್ರ ಲೋಕವೇ ಧರೆಗಿಳಿದು ಬಂದು ಕಿನ್ನರಲೋಕವೇ ಸೃಷ್ಟಿಯಾದಾಗ ಶ್ರೇಯಾ ತೇರಿ ಓರ್‌ ತೇರಿ ಓರ್‌ ಹಾಡಿಗೆ ಜೀವ ತುಂಬಿದರು. ಹಿಂದೀ ಹಾಡುಗಳಲ್ಲದೆ, ” ಸಾಲುತ್ತಿಲ್ಲವೇ, ಸಾಲುತ್ತಿಲ್ಲವೇ ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ …ಗಗನವೇ ಬಾಗಿ ಭುವಿಯನೂ…ಮೊದಲಾದ ಕನ್ನಡದ ಹಾಡುಗಳನ್ನೂ ಹಾಡಿದರು.

“ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೇ….ಅರಳುತಿರು ಜೀವದ ಗೆಳೆಯಾ…. .ನಿನ್ನಾ ನೋಡಿ ಸುಮನೆಂಗಿರ್ಲಿ…ಜನಪ್ರಿಯ ಕನ್ನಡ ಹಾಡುಗಳನ್ನು ಬಹಳ ಸ್ಪಷ್ಟವಾಗಿ ಭಾವಪೂರ್ಣವಾಗಿ ಹಾಡಿದಾಗ ಕೇಳುಗರೆಲ್ಲ ಪುಳಕಿತರಾದರು. ಸಹಗಾಯಕರಾಗಿ ಕಿಂಜಲ್‌ ಚಟರ್ಜಿ ಅವರು ಶ್ರೇಯಾ ಜತೆಗೂಡಿ ಮತ್ತು ವೈಯಕ್ತಿಕವಾಗಿ ಹಾಡಿ ಯುವಜನರನ್ನು ತಮ್ಮೆಡೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾದರು.

ಡಾ| ಮೋಹನ ಆಳ್ವರು ಶ್ರೇಯಾ ಅವರನ್ನು ಗೌರವಿಸಿದರು.

ಮುಜೆ ಭೂಲ್‌ನ ಜಾನಾ
” ನಾನು ಮನೆಯಲ್ಲಿಯೇ ಇದ್ದೆನೇನೋ ಎಂದು ಭಾಸವಾಗುತ್ತಿದೆ. ವಿರಾಸತ್‌ ಸಂಘಟಕ ಮೋಹನ ಆಳ್ವರಂಥ ಅದ್ಭುತ, ಜೀನಿಯಸ್‌ ಪ್ರತಿಭೆಗೆ ವಂದಿಸುವೆ, ಸಾಂಸ್ಕೃತಿಕ ರಂಗದಲ್ಲಿ ಕ್ರಾಂತಿಕಾರಿ ಯೋಚನೆಗಳಿರುವ ಆಳ್ವರು ನನ್ನನ್ನು ಆಮಂತ್ರಿಸಿರುವುದಕ್ಕಾಗಿ ಹೃತೂ³ರ್ವಕ ವಂದನೆಗಳನ್ನು ಸಲ್ಲಿಸುವೆ. ಮತ್ತೂಮ್ಮೆ ಮರೆಯದೇ ನನ್ನನ್ನು ಕರೆಯುವಿರಲ್ಲ? ಮುಜೆ ಭೂಲ್‌ನ ಜಾನಾ’ ಎಂದು ನಸುನಗುತ್ತ ಕೋರಿಕೊಂಡರು ಶ್ರೇಯಾ ಘೋಷಾಲ್‌.
ಬಳಿಕ ಆಳ್ವಾಸ್‌ ಸಾಂಸ್ಕೃತಿಕ ವೈಭವ ಪ್ರಸ್ತುತಪಡಿಸಲಾಯಿತು.

ಡಿ. 17ರಂದು ಆಳ್ವಾಸ್‌ ವಿರಾಸತ್‌ ಪ್ರಶಸ್ತಿ ಪ್ರದಾನ
ಮಂಗಳೂರು: ಆಳ್ವಾಸ್‌ ವಿರಾಸತ್‌ ಅನ್ನು ಕಣ್ತುಂಬಿಕೊಳ್ಳಲು ಕಳೆದ ಮೂರು ದಿನಗಳಲ್ಲಿ ಊರ ಪರವೂರ ಲಕ್ಷಾಂತರ ಮಂದಿ ಶಿಕ್ಷಣ ಕಾಶಿಗೆ ಬಂದಿದ್ದಾರೆ. ರವಿವಾರ ನಡೆಯುವ ಕೊನೆಯ ದಿನದ ಸಮಾರಂಭಕ್ಕೂ ಸುಮಾರು ಒಂದೂವರೆ ಲಕ್ಷ ಮಂದಿ ಭಾಗಿಯಾಗುವ ನಿರೀಕ್ಷೆ ಇದೆ.

ಡಿ. 17ರಂದು ಸಂಜೆ 5.15ರಿಂದ ಆಳ್ವಾಸ್‌ ವಿರಾಸತ್‌ 2023 ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಡಾ| ಮೈಸೂರು ಮಂಜುನಾಥ್‌, ಡಾ| ಪ್ರವೀಣ್‌ ಗೋಡ್ಖಿಂಡಿ ಮತ್ತು ವಿಜಯ ಪ್ರಕಾಶ್‌ ಅವರಿಗೆ ವಿರಾಸತ್‌ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. 6.30ರಿಂದ 7.15ರ ವರೆಗೆ ನಡೆಯುವ ತಾಳ-ವಾದ್ಯ-ಸಂಗೀತದಲ್ಲಿ ಡಾ| ಮೈಸೂರು ಮಂಜುನಾಥ್‌, ಡಾ| ಪ್ರವೀಣ್‌ ಗೋಡ್ಖಿಂಡಿ, ವಿಜಯ ಪ್ರಕಾಶ್‌ ಮತ್ತು ಬಳಗ ಮೋಡಿ ಮಾಡಲಿದೆ. ಆದೇ ರೀತಿ, ಸಂಜೆ 7.30 ರಿಂದ 9.30ರ ವರೆಗೆ ಖ್ಯಾತ ಚಲನಚಿತ್ರ ಗಾಯಕ ವಿಜಯ ಪ್ರಕಾಶ್‌ ಅವರಿಂದ ಸಂಗೀತ ರಸಸಂಜೆ ನಡೆಯಲಿದೆ. ರಾತ್ರಿ 9.30 ರಿಂದ 10.15ರ ವರೆಗೆ ಆಳ್ವಾಸ್‌ ಸಾಂಸ್ಕೃತಿಕ ವೈಭವ ಜರಗಲಿದೆ.

ಗಮನ ಸೆಳೆದ ಸಪ್ತ ಮೇಳ
ವಿರಾಸತ್‌ನ ಮೂರನೇ ದಿನವಾದ ಶನಿವಾರವೂ ಸಪ್ತ ಮೇಳ ಗಮನ ಸೆಳೆಯಿತು. ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಆವರಣದಲ್ಲಿ ಆಯೋಜಿಸಲಾದ ಕೃಷಿ ಮೇಳ, ಆಹಾರ ಮೇಳ, ಫಲಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ, ಚಿತ್ರಕಲಾ ಮೇಳ, ಕಲಾಕೃತಿಗಳ ಪ್ರದರ್ಶನ, ಛಾಯಾಚಿತ್ರಗಳ ಪ್ರದರ್ಶನವನ್ನು ಸಾವಿರಾರು ಮಂದಿ ವೀಕ್ಷಿಸಿದರು.

ನೈರ್ಮಲ್ಯವೇ ಪ್ರಧಾನ
ಆಳ್ವಾಸ್‌ ವಿರಾಸತ್‌ಗೆ ಪ್ರತೀದಿನ ಸಾವಿರಾರು ಮಂದಿ ಆಗಮಿಸಿದ್ದರೂ, ಕ್ಯಾಂಪಸ್‌ನ ಸುಮಾರು 150 ಎಕರೆ ಪ್ರದೇಶವನ್ನುಸ್ವಚ್ಛತೆ, ನೈರ್ಮಲ್ಯದಿಂದ ಇರಿಸಲಾಗಿದೆ. ನಾಲ್ಕು ಟ್ರಾಲಿ, ಟ್ರಾಕ್ಟರ್‌ ಸಹಿತ 200 ಕಸದ ಡಬ್ಬಿ ಇಡಲಾಗಿದೆ. ಸ್ವಚ್ಛತೆಯ ನಿಟ್ಟಿನಲ್ಲಿ ಬೆಳಗ್ಗೆ 8.30ರಿಂದ ರಾತ್ರಿ 11.30ರ ವರೆಗೆ ಸುಮಾರು 70 ಮಂದಿ ಸ್ವಚ್ಛ ಸೇನಾನಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಆಹಾರ ಮೇಳದಲ್ಲಿ ಉಪಯೋಗಿಸುವ ನೀರಿನ ಸ್ವಚ್ಛತೆಯ ಬಗ್ಗೆಯೂ ಪರಿಶೋಧನೆ ನಡೆಸುತ್ತಾರೆ. ಹಸಿ ಕಸ, ಒಣ ಕಸ ಮತ್ತು ಪ್ಲಾಸ್ಟಿಕ್‌ ಅನ್ನು ಪ್ರತ್ಯೇಕವಾಗಿ ಬೇರ್ಪಡಿಸಿ ಸಂಸ್ಕರಣೆ ಮಾಡಲಾಗುತ್ತದೆ. ಪ್ಲಾಸ್ಟಿಕ್‌ ಬಳಕೆಯನ್ನು ಕಡಿಮೆ ಮಾಡಲಾಗಿದೆ.