Saturday, November 23, 2024
ಸುದ್ದಿ

ಕಿಕ್ಕಿರಿದು ತುಂಬಿದ ಸಭಾಂಗಣ: ಜೀವನದಲ್ಲೇ ನೀಡಿದ ಶ್ರೇಷ್ಠ ಕಾರ್ಯಕ್ರಮ-ಬಣ್ಣನೆ : ಆಳ್ವಾಸ್ ಅಭಿಮಾನ ಸಾಗರಕ್ಕೆ ‘ಶ್ರೇಯಾ’ ಫಿದಾ – ಕಹಳೆ ನ್ಯೂಸ್

ಮೂಡುಬಿದಿರೆ: ಮುಸ್ಸಂಜೆ ಇನ್ನೂ ಕವಿದಿಲ್ಲ, ನೇಸರ ಇನ್ನೂ ಜಾರಿಲ್ಲ, ಆಗಲೇ ಆಳ್ವಾಸ್ ಕಾಲೇಜಿನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮoದಿರದಲ್ಲಿ ಪ್ರೇಕ್ಷಕರು ತುಂಬಿ ತುಳುಕಿದ್ದು, ಹಾಡಿನ ಹೊನಲಿಗಾಗಿ ಕಾದು ನಿಂತಿದ್ದರು. ಎಲ್ಲೆಡೆ ಒಂದೇ ಝೇಂಕಾರ ಶ್ರೇಯಾ, ಶ್ರೇಯಾ, ಶ್ರೇಯಾ. ಅದು `ಶ್ರೇಯಾ’ ಸ್ವರದ ಪವಾಡ. ಶನಿವಾರದ ಸಂಜೆಯ ಬಿಸಿಲು ಆರುವ ಮುನ್ನವೇ ಶ್ರೇಯಾ ಘೋಷಾಲ್ ನಾದ ನಿನಾದದ ತಂಪಿಗೆ-ಕAಪಿಗೆ ಹಂಬಲಿಸಿ ಚಾತಕ ಪಕ್ಷಿಯಂತೆ ಬಿದಿರೆ ಜನ ಕುಳಿತ್ತಿದ್ದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡೆಸುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ, ೨೯ನೇ ಆಳ್ವಾಸ್ ವಿರಾಸತ್ ಮೂರನೇ ದಿನವಾದ ಶನಿವಾರ ಚಿತ್ರಣ.
ಪಶ್ಚಿಮ ಬಂಗಾಳದ ಬೆಹರಾಂಪುರದ ಹಾಲುಗೆನ್ನೆಯ ಹುಡುಗಿ ಶ್ರೇಯಾ ಘೋಷಾಲ್ ‘ ನಮಸ್ಕಾರ ಮೂಡುಬಿದಿರಿ…’ ಎನ್ನುತ್ತಲೇ… `ಯಾರಾ ಮುಜುಕೋ ಇರಾದೆ ದೇ… ಸುನ್ ರಹಾ ಹೇ ನಾ ತೂ.’. ಹಾಡುತ್ತಲೇ ವೇದಿಕೆ ಪ್ರವೇಶಸುತ್ತಿದ್ದಂತೆಯೇ ಸಡಗರದ ಅಲೆ ಉಕ್ಕಿ ಬಂದ ಸಾಗರದಂತೆ ಸಭಾಂಗಣವೇ ರಂಗೇರಿತು. ಎಲ್ಲ ದಿಕ್ಕಿನಲ್ಲೂ `ಸುನ್ ರಹಾ ಹೇ ನೇ ತೂ’ ಎಂಬ ಪ್ರತಿಧ್ವನಿ.

ಜಾಹೀರಾತು
ಜಾಹೀರಾತು
ಜಾಹೀರಾತು

`ಓ ಮೈ ಗಾಡ್ ಐ ಕಾನ್ ನಾಟ್ ಬಿಲಿವ್ ಇಟ್’. ಆಳ್ವಾಸ್ ವಿರಾಸತ್ ನನ್ನ ಜೀವನದ ಶ್ರೇಷ್ಠ ಸಂಗೀತ ಕಾರ್ಯಕ್ರಮ ದಲ್ಲಿ ಒಂದು. ವಿರಾಸತ್ ಕೇಳಿದ್ದೆ. ಆದರೆ, ನಾನು ಅದರ ಭಾಗವಾಗಿರುವುದು ಹೇಮ್ಮೆ ಎಂದು ಧನ್ಯತೆ ವ್ಯಕ್ತ ಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಗುಲಾಬಿ ವರ್ಣದ ಸಲ್ವಾರ್ (ಸೂಟ್) ಧರಿಸಿದ್ದ ಶ್ರೇಯಾ.. `ಬಹಾರಾ ಬಹಾರಾ…’ ಹಾಡಿದಾಗ ಎಲ್ಲೆಡೆ ಸ್ಪಂದನದ ನಿನಾದ. ಇದು `ಎಡ’ ಮತ್ತು `ಬಲ’ದ ಸ್ಪರ್ಧೆ. ಸಭಾಂಗಣದ ಯಾವ ಭಾಗದವರು ಹೆಚ್ಚು ಜೋಶ್ ನಲ್ಲಿ ಇರುತ್ತಾರೆ ಎಂದು ನೋಡಬೇಕು ಎಂದರು. ನಾನು ನಿಜವಾಗಿ `ಆಳ್ವಾಸ್’ಗೆ ಫಿದಾ ಆಗಿದ್ದೇನೆ ಎಂದರು.

`ನನಗೆ ಇಂದು ಹೆಚ್ಚು ಶಕ್ತಿ ಬಂದಿದೆ’ ಎಂದ ಅವರು ಕನ್ನಡದ `ಸಾಲುತ್ತಿಲ್ಲವೇ ಸಾಲುತ್ತಿಲ್ಲವೇ ನಿನ್ನ ಹಾಗೆ ಬೇರೆ ಇಲ್ಲವೇ..’ ಹಾಡಿದರು. ಪ್ರೇಕ್ಷಕರ ಕರತಾಡನದ ತಂಗಾಳಿಯೇ ಗಾಯಕಿಯ ಮುಂಗುರುಳ ಸೋಂಕಿತು. `ಗಗನವೇ ಬಾಗಿ ಭುವಿಯನು ಕೇಳಿದಾ ಹಾಗೆ…’ ಉಲಿದಾಗ ಆಗಸದಲ್ಲಿನ ಅರ್ಧ ಚಂದ್ರನೂ ಗುಲಾಬಿ ಧಿರಿಸಿನ ಬೆಡಗಿ ರಾಗಕ್ಕೆ ಬೆಳದಿಂಗಳು ಸೂಸಿದ.

`ಕನ್ನಡದ ಹಾಡುಗಳನ್ನು ಹಾಡಿ ನಾನು ಕೃತಜ್ಞಳಾಗಿದ್ದೇನೆ’ ಎನ್ನುತ್ತಲೇ.. ಬಾಜಿರಾವ್ ಮಸ್ತಾನಿ ಸಿನಿಮಾದ `ಮಸ್ತಾನಿ ಹೋಗಯೀ..’ ಹಾಡಿದರು. ಅವರಿಗೆ ಕಿಂಜಲ್ ಚಟರ್ಜಿ ಯುಗಳ ಗೀತೆಯ ಮೂಲಕ ಸಾಥ್ ನೀಡಿದರು. ಬಳಿಕ `ಮನ್ ಕೀ ಲಾಗೇ…’ ಯುಗಳ ಹಾಡಿದರು. ಪ್ರೇಕ್ಷಕರು ತಮ್ಮ ಮೊಬೈಲ್ ಲೈಟ್ ಆನ್ ಮಾಡಿ ಮೇಲೆ ಬೀಸಿದಾಗ ಸಭಾಂಗಣದಲ್ಲಿ ನಕ್ಷತ್ರ ಲೋಕವೇ ಸೃಷ್ಟಿಯಾಯಿತು. `ತಾರೇ ಜಮೀನ್ ಪೇ ಹೇ’ ಎಂದ ಶ್ರೇಯಾ ಅವರು `ತೇರಿ ಓರ್…’ ಡುಯೆಟ್ ಹಾಡಿದರು. `ಕಿಸೀಕಾ…’ ಎಂದು ವಿದ್ಯಾರ್ಥಿಗಳು ಪ್ರತಿ ಅಲೆ ಹೊಮ್ಮಿಸಿದರು.

`ಇಟ್ಸ್ ಇನ್ ಕ್ರೆಡಿಬಲ್’… ಎಂದ ಅವರು, `ಈಗ ಕ್ರಶ್ ಹಾಡು’ ಎಂದು, `ಧೀರೇ ಧೀರೆ…’ ಗಾನ ಸುಧೆ ಹರಿಸಿದರು. ಸರಿಗಮಪ ರಿಯಾಲಿಟಿ ಶೋ ವಿಜೇತೆ.. `ಅಗರ್ ತೂ ಮಿಲ್ ಜಾವೋ’ ಎಂದಾಗ ಹುಡುಗರೆಲ್ಲ ಫಿದಾ. `ಕೊನೆಯಿಲ್ಲದ ಸಭಾಂಗಣ ಇದೇ ಪರಿಶುದ್ಧ ಪ್ರೀತಿ. ಸಂಸ್ಥೆ ಅಂದರೆ ಹೀಗಿರಬೇಕು. ನನಗೆ ಆಳ್ವಾಸ್ ಬಂದಾಗ ಮನೆಗೆ ಬಂದ ಅನುಭವ ಆಗುತ್ತಿದೆ. ಈ ನೆಲಕ್ಕೂ ನನಗೂ ಏನೋ ಸಂಬAಧ ಇದೆ’ ಎಂದು, `ಕಿಸಿ ಕೇಲಿಯೇ ಕಿಸಿ ಕೋ ಬನಾಯಾ’ ಎಂದು ಬಾಂಧವ್ಯಗಳ ವರ್ಣಿಸುವ ಸಾಹಿತ್ಯ ಹಾಡಿದರು. ಕಣ್ಣು ಮಿಟುಕಿಸಿ ಸಂಭ್ರಮಿಸಿದರು. `ತನ್ನ ಅನನ್ಯ ಅನುಭವದ ಗೀತೆ, ನಾನು ತಪ್ಪಿದರೆ ನೀವೆ ಸರಿ ಪಡಿಸಿ’ ಎಂದು ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ `ನಿನ್ನ ನೋಡಿ ಸುಮ್ಮನೆ ಹೆಂಗೆ ಇರಲಿ’ ಹಾಡಿದರು.

`ಆಳ್ವಾಸ್ ವಿರಾಸತ್ ದೇಶದಲ್ಲೇ ಪಾರಂಪರಿಕವಾಗಿ ಅತ್ಯಂತ ಸುಂದರವಾಗಿ ರೂಪಿಸಿದ ಕಾರ್ಯಕ್ರಮ. ನಾನು ದೇಶದ ಬೇರೆಲ್ಲೂ ಕಂಡಿಲ್ಲ’ ಎಂದ ಅವರು, `ಘರ್ ಮೋರೇ ಪರ್ ದೇಸಿಯಾ’ ಹಾಡಿದರು. `ನಿಮ್ಮ ಪ್ರೀತಿಯ ಬೆಚ್ಚಗೆ ನನಗೆ ತಾಕುತ್ತಿದೆ. ಈಗ ಮಳೆಯ ಗಾನ ಬೇಕು’ ಎಂದು ಐಶ್ವರ್ಯ ರೈ ಅಭಿನಯದ `ಗುರು’ ಸಿನಿಮಾದ ಎ. ಆರ್. ರೆಹಮಾನ್ ರಾಗಸಂಯೋಜನೆಯ ‘ `ನನ್ನಾರೆ ನನ್ನಾರೆ…. ಬರ್ ಸೋರೇ ಮೇಘಾ ಮೇಘಾ’ ಹಾಡಿದಾಗ ಅಕ್ಷರಶಃ ಮಳೆ ಸಿಂಚನದAತೆ ಪ್ರೇಕ್ಷಕರ ಚಪ್ಪಾಳೆ. ನಂತರದ ಹಾಡೇ.. `ಡೋಲು ಬಾಜೇ’ ಇಂತಹ ಆಳ್ವಾಸ್ ಕುಟುಂಬ ಕಟ್ಟಿದ ಡಾ.ಮೋಹನ ಆಳ್ವ ಅವರಿಗೆ ಅಭಿನಂದನೆ ಎಂದು ಶ್ರೇಯಾ ಘೋಷಾಲ್ ಕೈ ಮುಗಿದರು.

ಬಳಿಕ ಬಂದ ಕಿಂಜಲ್ ಚಟರ್ಜಿ `ದಿಲ್ ಚಾಹ್ತಾ ಹೇ’ ಮೂಲಕ ರಂಜಿಸಿದರು. ಗಾಯಕ ಕೆಕೆ ಅವರ ಜನಪ್ರಿಯ ಹಾಡನ್ನು ಹಾಡಿದರು.ಹಾಡಿನಷ್ಟೇ ಕುಣಿದರು,ಕುಣಿಸಿದರು. ಅವರ ಕುಣಿತಕ್ಕೆ ಜೊತೆ ನೀಡಿದ್ದು ಪ್ರಭುದೇವ್ ಹೆಜ್ಜೆ ಹಾಕಿದ’ `ಕಾದಲನ್” ಸಿನಿಮಾದ.. `ಊರ್ವಶಿ, ಊರ್ವಶಿ… ಟೇಕ್ ಇಟ್ ಈಸಿ ಊರ್ವಶಿ…’. ಸಾಲುಗಳು. ನಡು ನಡುವೆ ಸಹ ಕಲಾವಿದರೊಂದಿಗೆ ಜುಗಲ್ ಬಂಧಿ ಮಾಡಿದರು. ಬಳಿಕ ಮೊಳಗಿದ್ದು, `ಏಕ್ ಹೋಗಯೇ ಹಮ್ ಔರ್ ತುಮ್’… ಹಮ್ಮಾ ಹಮ್ಮಾ…’.

`ಎಂಚ್ ಉಲ್ಲರೂ ಪೂರಾ, ಎಲ್ಲರೂ ಹೇಗಿದ್ದೀರಿ’ ಎಂದು ತುಳು- ಕನ್ನಡದಲ್ಲಿ ಪ್ರಶ್ನಿಸುತ್ತಲೇ ಸಣ್ಷ ವಿರಾಮದ ಬಳಿಕ ವೇದಿಕೆಗೆ ಬಂದ ಶ್ರೇಯಾ ಘೋಷಾಲ್, ೩ ಈಡಿಯೆಟ್ಸ್ ಸಿನಿಮಾದ `ಸುಬಿ ಡುಬಿ ಸುಬಿ ಡುಬಿ ಪಂಪಾರಾ…’ ಹಾಡಿದರು. ಚೇತನ್ ನಟನೆಯ `ಬಿರುಗಾಳಿ’ ಸಿನಿಮಾದ `ಆ ಆ ಆ… ಹೂವಿನ ಬಾಣದಂತೆ ಯಾರಿಗೂ ಕಾಣದಂತೆ..’ ಸಾಲಿಗೆ ಮೋಹಕ ನಾದ ಹೊಮ್ಮಿಸಿದರು. ಇಡೀ ಸಭಾಂಗಣವೇ’ ‘ಆ ಆ ಆ…’ ಆಲಾಪನೆಯಲ್ಲಿ ಜೊತೆಗೂಡಿತು.

ಅನುಷ್ಕಾ ಮತ್ತು ಶಾರುಕ್ ನಟನೆಯ `ರಬ್ ನೇ ಬನಾದಿ ಜೋಡಿ’ ಸಿನಿಮಾದ `ತುಜ್ ಮೇ ರಬ್ ದಿಕ್ ತಾ ಹೇ … ಯಾರಾ ಮೈ ಕ್ಯಾಕರೂ…’ ಹಾಡಿದಾಗ ಪ್ರೇಮಲೋಕವೇ ಸೃಷ್ಟಿಯಾದಂತೆ ಪ್ರೇಕ್ಷಕರು ಭಾವ ಲಹರಿಗೆ ಜಾರಿದರು. ಬಳಿಕ ವಿರಹ ವೇದನೆಯ ೨೦೦೬ ರಲ್ಲಿ ತೆರೆಕಂಡ ಮುಂಗಾರು ಮಳೆಯ `ಅರಳುತಿರು ಜೀವದ ಗೆಳೆಯ..’ ಹಾಡಿದರು. `ಕನ್ನಡ ಹಾಡುಗಳೇ ಸುಮಧುರ’ ಎಂದು ಭಾವುಕರಾದರು. ತಕ್ಷಣವೇ `ಜಬ್ ವಿ ಮೆಟ್’ ಸಿನಿಮಾದ `ಯೇ ಇಷ್ಕ್ ಹಾಯೇ..’ ಗುನುಗು. ಕಪ್ಪು ಕನ್ನಡಕ ಧರಿಸಿ ಕಿಂಜಲ್ ಚಟರ್ಜಿ ಜೊತೆ ‘ ಪರಂ ಪರಂ ಪರಮ ಸುಂದರಿ’ ಯುಗಳ ಗೀತೆಯ ನರ್ತನ. ಅನಂತರ ವಿದ್ಯಾಬಾಲನ್ ನಟನೆಯ `ಊಲಾಲಾ ಊಲಾಲಾ… ತೂ ಮೇರಿ ಫ್ಯಾಂಟಸಿ’ ಹಾಗೂ `ಓ ರಾಧಾ ತೇರಿ… ಝುಮ್ ಕಾ’ ಗಾಯನ. ಕತ್ರೀನಾ ಕೈಫ್ ನಟನೆಯ `ಅಗ್ನಿಪಥ್’ ಸಿನಿಮಾದ `ಚಿಕ್ನಿ ಚಮೇಲಿ… ಕವ್ವಾ ಚಡಾಕೆ ಆಯೀ’ ಗಾನ.

ಹಿಂದಿ, ಕನ್ನಡ ಸೇರಿದಂತೆ ಬಹುಪಾಲು ಎಲ್ಲಾ ಭಾರತೀಯ ಭಾಷೆಗಳಲ್ಲಿ ಅವರು ಹಾಡಿದ, ತಮ್ಮ ಮೊದಲ ಚಿತ್ರದ ಹಾಡಿಗೇ `ಅತ್ತ್ಯುತ್ತಮ ಗಾಯಕಿ ರಾಷ್ಟ್ರೀಯ ಪುರಸ್ಕಾರ’ ಪಡೆದ ಶ್ರೇಯಾ, `ನೀರು ದೋಸ ಖುಷಿ ನೀಡಿತು’ ಎಂದು `ಪದ್ಮಾವತ್’ ಸಿನಿಮಾದ ತಮಗೆ ಶ್ರೇಷ್ಠ ಹಿನ್ನೆಲೆ ಗಾಯಕಿ ಪ್ರಶಸ್ತಿ ತಂದ `ಘೂಮರ್ ಘೂಮರ್ ಘೂ ಮೇ…’ ಪ್ರಸ್ತುತ ಪಡಿಸಿದರು. `ಮುಜೆ ಬೂಲ್ ನಹೀ ಜಾನಾ… ನಾನು ಇಲ್ಲಿಗೆ ಮತ್ತೆ ಮತ್ತೆ ಬರಬೇಕು’… ಎನ್ನುತ್ತಲೇ ತಮ್ಮ ವಿನಮ್ರ ಭಾವದಿಂದ ಸೇರಿದ್ದ ಸುಮಾರು ಲಕ್ಷದಷ್ಟು ಶ್ರೋತೃಳ ಹೃದಯ ಗೆದ್ದರು. ಇದಕ್ಕೂ ಮೊದಲು ಸಂಜೆಯ ಕಾರ್ಯಕ್ರಮವನ್ನು ಚಿತ್ರನಟಿ ಅಪರ್ಣಾ, ದಿಲೀಪ್ ಶೆಟ್ಟಿ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಇದ್ದರು.