Friday, November 22, 2024
ಬೆಂಗಳೂರುಸುದ್ದಿ

ದಢೂತಿ ಪೊಲೀಸರಿಗಿಲ್ಲ, ತರಬೇತಿ ಅವಕಾಶ : ಎಡಿಜಿಪಿ ಅಲೋಕ್ ಕುಮಾರ್ – ಕಹಳೆ ನ್ಯೂಸ್

ಕಲಬುರಗಿ : ‘ಹೊಸದಾಗಿ ನೇಮಕವಾದ ಪೊಲೀಸರಿಗೆ ತರಬೇತಿ ನೀಡುವ ಪೊಲೀಸ್ ಅಧಿಕಾರಿಗಳು ದೈಹಿಕವಾಗಿ ಸದೃಢರಾಗಬೇಕು. ಇಲ್ಲದಿದ್ದರೆ ಅವರು ಇತರರಿಗೆ ಹೇಳುವ ನೈತಿಕತೆ ಕಳೆದುಕೊಳ್ಳುತ್ತಾರೆ. ಹೀಗಾಗಿ, ದಢೂತಿ ದೇಹ ಹೊಂದಿದ ಪೊಲೀಸರನ್ನು ತರಬೇತಿ ಕಾಲೇಜುಗಳಿಗೆ ನಿಯೋಜಿಸುವುದಿಲ್ಲ’ ಎಂದು ಪೊಲೀಸ್ ತರಬೇತಿ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಸ್ಪಷ್ಟಪಡಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಚೇರಿ ಕೆಲಸಗಳನ್ನು ನಿರ್ವಹಿಸುವವರು ಹಾಗೂ ಬಡ್ತಿಗಾಗಿ ಬಾಕಿ ಇರುವವರು ವರ್ಗಾವಣೆಯಾಗಿ ಬಂದವರನ್ನು ಹೊರತುಪಡಿಸಿ ಇತರ ಸಿಬ್ಬಂದಿ ಫಿಟ್ನೆಸ್ ಕಾಯ್ದುಕೊಳ್ಳುವುದು ಕಡ್ಡಾಯ. ತರಬೇತಿ ಕಾಲೇಜುಗಳಿಗೆ ವರ್ಗಾವಣೆಯಾಗಿ ಬಂದ ದಢೂತಿ ಕಾಯದ ಕೆಲವರನ್ನು ವಾಪಸ್ ಕಳುಹಿಸಲಾಗಿದೆ’ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹೊಸದಾಗಿ ನೇಮಕವಾಗುವ ಪೊಲೀಸ್ ಸಿಬ್ಬಂದಿಗೆ ಎಕೆ 47, ಎಂಪಿ 5 ಗನ್ ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಬಳಕೆಯ ಜೊತೆಗೆ ಸೈಬರ್ ಕ್ರೈಂ ತಡೆಗಟ್ಟುವ ಬಗ್ಗೆಯೂ ತರಬೇತಿ ನೀಡಲಾಗುವುದು. ಇದೀಗ ಬೋಧಿಸುತ್ತಿರುವ ಪಠ್ಯಕ್ರಮದಲ್ಲಿ ಕೆಲ ಬದಲಾವಣೆಗಳನ್ನು ತರಲಾಗುತ್ತಿದೆ. ಪೊಲೀಸ್ ಇತಿಹಾಸದ ಬಗ್ಗೆ ಹೆಚ್ಚಿನ ಮಾಹಿತಿ ಈಗ ಅಗತ್ಯವಿಲ್ಲ. ಹೀಗಾಗಿ, ಅಂತಹ ಪಾಠಗಳನ್ನು ಸಂಕ್ಷಿಪ್ತಗೊಳಿಸಿ ಜನರೊಂದಿಗೆ ಹೇಗೆ ವರ್ತಿಸಬೇಕು. ಸಾಮಾಜಿಕ ಜಾಲತಾಣದ ಮೇಲೆ ಕಣ್ಣಿಡುವುದು, ಆರ್ಥಿಕ ಅಪರಾಧಗಳು, ಮಹಿಳೆ, ಮಕ್ಕಳು, ಲಿಂಗತ್ವ ಅಲ್ಪಸಂಖ್ಯಾತರ ಸಮಸ್ಯೆಗಳನ್ನು ನಿರ್ವಹಿಸುವ ಬಗೆಯ ಬಗ್ಗೆ ತರಬೇತಿಯಲ್ಲಿ ಮಾಹಿತಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾನಸಿಕ ಸ್ವಾಸ್ಥ್ಯಕ್ಕೆ ಒತ್ತು: ವೃತ್ತಿಯಲ್ಲಿ ಹಾಗೂ ಕುಟುಂಬದಲ್ಲಿ ಎಂಥದೇ ಘಟನೆಗಳು ನಡೆದರೂ ಅದನ್ನು ನಿಭಾಯಿಸುವ ಮಾನಸಿಕ ದೃಢತೆ ಸಿಬ್ಬಂದಿಯಲ್ಲಿ ಇರಬೇಕು. ಇದಕ್ಕಾಗಿ ಮನೋಶಾಸ್ತ್ರಜ್ಞರಿಂದ ತರಗತಿಗಳನ್ನು ನಡೆಸಲಾಗುತ್ತಿದೆ. ತರಬೇತಿ ಅವಧಿಯಲ್ಲಿ ಒಮ್ಮುಖ ಬೋಧನೆ ಬದಲು ಸಂವಾದಕ್ಕೆ ಹೆಚ್ಚು ಒತ್ತು ನೀಡುವಂತೆ ಸೂಚಿಸಲಾಗಿದೆ. ಇ-ಲರ್ನಿಂಗ್, ಇ-ಲೈಬ್ರರಿ ಸೌಲಭ್ಯಗಳನ್ನು ಪ್ರತಿ ತರಬೇತಿ ಕಾಲೇಜುಗಳಲ್ಲಿ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.

ತರಬೇತಿ ಅವಧಿಯಲ್ಲಿ ಮೊಬೈಲ್ ಬಳಸದಂತೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದರು.