ಮಂಗಳೂರು: ಬಂಟ್ವಾಳದ ಸಜಿಪನಾಡು ಯುವತಿಯೊಬ್ಬಳು ಶಂಕಿತ ಎಚ್1 ಎನ್1 ಸೋಂಕು ಬಾಧಿಸಿ ಮೃತಪಟ್ಟಿರುವ ಘಟನೆ ನಡೆದಿದೆ. ತಾಯಿ ಮತ್ತು ಮಗಳು ಇಬ್ಬರೂ ಈ ಶಂಕಿತ ಎಚ್1 ಎನ್ 1 ಸೋಂಕಿಗೆ ಬಲಿಯಾಗಿದ್ದಾರೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಸಜಿಪನಾಡು ಗ್ರಾಮಸ್ಥರು ತೀವ್ರ ಆತಂಕಕ್ಕೀಡಾಗಿದ್ದಾರೆ.
ಮೃತ ಯುವತಿ ಝರೀನಾ (22) ತೀವ್ರ ಜ್ವರದಿಂದ ನರಳುತ್ತಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ (ಅ.16) ಮೃತಪಟ್ಟಿದ್ದಾಳೆ. ಝಬೀನಾ ಅವರ ತಾಯಿ ಅವ್ವಮ್ಮ ಅಕ್ಟೋಬರ್ 10 ರಂದು ಶಂಕಿತ ಎಚ್1ಎನ್1 ಸೊಂಕಿನಿಂದ ಬಳಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು.
ಅವ್ವಮ್ಮ ಶಂಕಿತ ಎಚ್1ಎನ್1 ಸೊಂಕಿನಿಂದ ಮೃತಪಟ್ಟಿರುವುದಾಗಿ ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ತಿಳಿಸಿದ್ದಾರೆ. ಅವ್ವಮ್ಮ ಅವರ ಮಗಳು ಝುಬೀನಾ ಕೂಡಾ ಎಚ್1ಎನ್1 ಬಾಧಿತರಾಗಿದ್ದರೆಂದು ಈಗ ಶಂಕಿಸಲಾಗಿದ್ದು, ಅವರ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.
ಸಜಿಪನಡು ಗ್ರಾಮದ ಮತ್ತೋರ್ವ ವ್ಯಕ್ತಿ ಕೂಡ ತೀವ್ರ ಜ್ವರದಿಂದ ಬಳಲುತ್ತಿದ್ದು, ಅವರನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ವೈದ್ಯಕೀಯ ವರದಿ ಇನ್ನಷ್ಟೇ ಬರಬೇಕಿದೆ. ಕಳೆದ ಏಳೆಂಟು ತಿಂಗಳುಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಝರೀನಾ ಅವರ ಮನೆಯ ಯಜಮಾನ ಮಯ್ಯದ್ದಿ ಅಕ್ಟೋಬರ್ 1ರಂದು ಮನೆಯಲ್ಲಿ ಮೃತಪಟ್ಟಿದ್ದರು.
ಝರೀನಾ ನವಜಾತ ಶಿಶು ಕೂಡ ಅಕ್ಟೋಬರ್ 4ರಂದು ಕೊನೆಯುಸಿರೆಳೆದಿತ್ತು. ಎಚ್1ಎನ್1 ಬಾಧಿತ ಅವ್ವಮ್ಮ ಅವರು ಕೂಡ ಅಕ್ಟೋಬರ್ 10ರಂದು ಮೃತಪಟ್ಟಿದ್ದರು. ಎರಡು ವಾರದಲ್ಲಿ ಮನೆಯ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಇದರಿಂದಾಗಿ ಇಡೀ ಕುಟುಂಬವೇ ತಲ್ಲಣಗೊಂಡಿದೆ.