ರಿಷಿ’ಸ್ ಮಿಸಸ್ ಕರ್ನಾಟಕ – 2023 ವೇದಿಕೆ ಮೇಲೆ ಹೆಜ್ಜೆ ಹಾಕಿದ ಸೌತ್ ನಟಿ ಮಧು – ಕಹಳೆ ನ್ಯೂಸ್
ದಕ್ಷಿಣ ಭಾರತದ ನಟಿ ಮಧು ಉರ್ಫ್ ಮಧುಬಾಲ ಯಾರಿಗೆ ಗೊತ್ತಿಲ್ಲ ಹೇಳಿ. ಕಳೆದ ಕೆಲವು ವರ್ಷಗಳಿಂದ ಸಿನಿಮಾರಂಗದಲ್ಲಿ ಹೆಸರು ಮಾಡಿರುವ ನಟಿ ಮಧು. ತಮಿಳು ಸಿನಿಮಾ ಮೂಲಕ ವೃತ್ತಿ ಆರಂಭಿಸಿದ ನಟಿ ಬಾಲಿವುಡ್‌ನಲ್ಲೂ ಮಿಂಚಿದ್ದು ಕಮ್ಮಿ ಸಾಧನೆಯೇನಲ್ಲ. ಕೆ ಬಾಲಚಂದಿಲ್ ನಿರ್ದೇಶಿಸಿದ ‘ಅಳಗನ್’ ಇವರ ಮೊದಲ ಸಿನಿಮಾ.
ಮಮ್ಮುಟ್ಟಿ ನಟಿಸಿದ್ದ ಈ ಸಿನಿಮಾದಲ್ಲಿ ಮಧು ಕೂಡ ಒಬ್ಬ ನಾಯಕಿಯಾಗಿ ನಟಿಸಿದ್ದರು. ಇಲ್ಲಿಂದ ಅತೀ ಕಡಿಮೆ ಸಮಯದಲ್ಲಿ ದಕ್ಷಿಣ ಭಾರತದ ಎಲ್ಲಾ ಭಾಷೆಯ ಸಿನಿಮಾಗಳಲ್ಲೂ ನಟಿಸಿದ್ದರು. ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿದ್ದ ಸೂಪರ್ ಹಿಟ್ ಸಿನಿಮಾ ‘ಅಣ್ಣಯ್ಯ’ ಸಿನಿಮಾಗೆ ನಾಯಕಿ ಕೂಡ ಇವರೇ..
ಬಹಳ ವರ್ಷಗಳ ನಂತರ ಮತ್ತೆ ಕನ್ನಡಕ್ಕೆ ಬಂದಿದ್ದ ನಟಿ ಮಧು ಕಳೆದ ಏಳೆಂಟು ವರ್ಷಗಳಲ್ಲಿ ಕೆಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ರನ್ನ’, ‘ನಾನು ಮತ್ತು ವರಲಕ್ಷ್ಮಿ’, ‘ಸೀತಾರಾಮ ಕಲ್ಯಾಣ’, ‘ಪ್ರೀಮಿಯರ್ ಪದ್ಮಿನಿ’, ‘ರೇಮೊ’ ಅಂತಹ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಇತ್ತೀಚೆಗೆ ನಡೆದ ಮಿಸಸ್ ಕರ್ನಾಟಕ ಶೋನಲ್ಲಿಯೂ ಕಾಣಿಸಿಕೊಂಡಿದ್ದಾರೆ.
ರಿಷಿ ಸ್ಪೀಕ್ ಚಾರಿಟೇಬಲ್ ಟ್ರಸ್ಟ್ ಕರ್ನಾಟಕದ ಬ್ಯೂಟಿ ಪೇಜೆಂಟ್ ‘ರಿಷಿಸ್ ಮಿಸಸ್ ಕರ್ನಾಟಕ’ ಕಾರ್ಯಕ್ರಮವನ್ನು ಆಯೋಜಿಸಿತ್ತು. ‘ರಿಷಿಸ್ ಮಿಸಸ್ ಕರ್ನಾಟಕ’ 2023 ಕಿರೀಟವನ್ನು ಕವಿತಾ ವೀರೇಂದ್ರ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ಆದ ಜೆ ಡಬ್ಲ್ಯೂ ಮ್ಯಾರಿಯೊಟ್ ನಡೆದ ಈ ಕಾರ್ಯಕ್ರಮಕ್ಕೆ ಖ್ಯಾತ ಬಾಲಿವುಡ್ ನಟಿ ಮಧುಬಾಲ ಉರ್ಫ್ ಮಧು ವಿಶೇಷ ಅತಿಥಿಯಾಗಿ ಆಗಮಿಸಿದ್ದರು.
“ಈ ಕಾರ್ಯಕ್ರಮದಲ್ಲಿ ಭಾಗವಾಗಿರುವುದು ಖುಷಿ ಕೊಟ್ಟಿದೆ. ಇಂದು ಮಹಿಳೆಯರು ರಾಜಕೀಯ, ಸಾಹಿತ್ಯ, ಶಿಕ್ಷಣ ಮತ್ತು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ. ತಾಯಿಯಾಗಿ ಮಕ್ಕಳ ಲಾಲನೆ, ಪಾಲನೆ ಜೊತೆಯಲ್ಲಿ ತನ್ನ ಸೌಂದರ್ಯ ಮತ್ತು ಆರೋಗ್ಯದ ಮೇಲೆ ಗಮನಹರಿಸಬೇಕಿದೆ.” ಎಂದು ಈ ಸಂದರ್ಭದಲ್ಲಿ ಮಧುಬಾಲ ಹೇಳಿದ್ದಾರೆ.
ಈ ಕಾರ್ಯಕ್ರಮಕ್ಕೆ ಸರ್ಕಾರದ ರಾಜಕೀಯ ದಿಗ್ಗಜರು, ಸಾಮಾಜಿಕ ಕಾರ್ಯಕರ್ತರು, ಉದ್ಯಮಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಕವಿತಾ ವೀರೇಂದ್ರ ವಿನ್ನರ್ ಆಗಿ ಹೊರಹೊಮ್ಮಿದ್ರೆ, ಪ್ರಿಯಾಂಕಾ ರಿಯಾ ಫಸ್ಟ್ ವಿನ್ನರ್ ಆಗಿ ಹಾಗೂ ಶಹಿಸ್ತಾ ನಾಜ್ ಸೆಕೆಂಡ್ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡರು. ರಿಷಿ ಸ್ಪೀಕ್ ಚಾರಿಟೇಬಲ್ ಟ್ರಸ್ಟ್ ನಿಂದ ಆಯೋಜಿಸಲಾಗಿದ್ದ ಈ ಬ್ಯೂಟಿ ಪೇಜೆಂಟ್ ನಲ್ಲಿ ಪಲ್ಲವಿ ಗೌಡ, ಚೈತ್ರಾ ಗೌಡ, ಆರ್ ಜೆ ರಾಜೇಶ್, ಮನೋಜ್ ಕುಮಾರ್ ಹಾಗೂ ಪ್ರಿಯಾ ಗೌತಮ್ ಡೈರೆಕ್ಟರ್ಸ್ ಆಗಿದ್ದಾರೆ.
ಈ ಬ್ಯೂಟಿ ಪೇಜೆಂಟ್ ನಲ್ಲಿ ರೂಪದರ್ಶಿಯರು ಹಂಸ ನಡಿಗೆ ಹಾಕಿ ಹೆಜ್ಜೆ ಹಾಕಿ ನೋಡುಗರ ಗಮನಸೆಳೆದರು. ಅಂದಹಾಗೇ ಗ್ರಾಮೀಣ ಭಾಗದ ಬಡ ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಕಾರ್ಯಕ್ರಮವನ್ನು ಆಯೋಜಿಸಿರೋದು ವಿಶೇಷ.