ಪುತ್ತೂರು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜ್ ನಲ್ಲಿ ಭಾರತೀಯ ಭಾಷಾ ಉತ್ಸವ : ಪಂಚ ದ್ರಾವಿಡ ಭಾಷೆಗಳಲ್ಲಿ ತುಳು ಬಾಷೆಯು ಪ್ರಾಚೀನವಾದದ್ದು : ಕುಶಾಲಾಕ್ಷಿ ವಿ ಕುಲಾಲ್ – ಕಹಳೆ ನ್ಯೂಸ್
ಪುತ್ತೂರು : ಪಂಚ ದ್ರಾವಿಡ ಭಾಷೆಗಳಲ್ಲಿ ತುಳು ಬಾಷೆಯು ಪ್ರಾಚೀನವಾದದ್ದು, 12 ನೇ ಶತಮಾನದ ಶಿಲಾ ಶಾಸನಗಳನ್ನು ಅಧ್ಯಯನ ಮಾಡಿದಾಗ ಇದರ ಬಗ್ಗೆ ವಿವರಗಳು ಸಿಗುತ್ತವೆ ಎಂದು ಜೈ ತುಳುನಾಡು ಕಾಸರಗೋಡು ವಿಭಾಗದ ಅಧ್ಯಕ್ಷೆ ಕುಶಾಲಾಕ್ಷಿ ವಿ ಕುಲಾಲ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ & ಟೆಕ್ನಾಲಜಿ ಹಾಗೂ ವಿದ್ಯಾಭಾರತಿ ಉಚ್ಚ ಶಿಕ್ಷಣ ಸಂಸ್ಥಾನ ಇದರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಶ್ರೀರಾಮ ಸಭಾ ಭವನದಲ್ಲಿ ನಡೆದ ಭಾರತೀಯ ಭಾಷಾ ಉತ್ಸವ ಕಾರ್ಯಕ್ರಮದಲ್ಲಿ ತುಳು ಭಾಷೆ ಮತ್ತು ಸಾಹಿತ್ಯ ಈ ವಿಷಯದ ಬಗ್ಗೆ ಮಾತಾಡಿದರು. ತಾಯಿ ಭಾಷೆಯಲ್ಲಿ ಸಂವಹನ ಮಾಡುವುದು ಅತ್ಯಂತ ಆನಂದದಾಯಕವಾದದ್ದು, ಹೀಗಾಗಿ ತಾಯಿ ಭಾಷೆ, ತಾಯ್ಕೆಲದ ಬಗ್ಗೆ ವಿಶೇಷ ಅಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದರು. ಪುರಾತನ ತುಳುವ ಆಚರಣೆಗಳು, ತರವಾಡು ಮನೆತನ, ದೇವಾಲಯ, ದೈವಾಲಯ, ನಾಗಾಲಯಗಳಲ್ಲಿ ನಡೆಯುವ ಆಚರಣೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಇದರ ಬಗ್ಗೆ ಹೆಚ್ಚಿನ ತಿಳುವಳಿಕೆಯನ್ನು ಹೊಂದುವ ಪ್ರಯತ್ನವನ್ನು ಯುವಜನತೆ ಮಾಡಬೇಕು ಎಂದರು. ತುಳು ಬ್ರಹ್ಮ ವೆಂಕಟ್ರಾಜ ಪುಣಿಚಿತ್ತಾಯರು ತುಳು ಲಿಪಿಗೆ ಒಂದು ಚೌಕಟ್ಟನ್ನು ನಿರ್ಮಾಣ ಮಾಡಿಕೊಟ್ಟರು ಈ ಲಿಪಿಯನ್ನು ಕಲಿತು ಉಳಿಸಿ ಬೆಳೆಸುವ ಕಾರ್ಯ ನಡೆಯಬೇಕಿದೆ. ಎಂದು ನುಡಿದರು.
ಗೌರವ ಅತಿಥಿಗಳಾಗಿ ಭಾಗವಹಿಸಿದ ವಿವೇಕಾನಂದ ಬಿ.ಎಡ್ ಕಾಲೇಜಿನ ಪ್ರಾಂಶುಪಾಲೆ ಡಾ.ಶೋಭಿತಾ ಸತೀಶ್ ಮಾತನಾಡಿ ಮನಸ್ಸಿನ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದಕ್ಕೆ, ಬರೆಯುವುದಕ್ಕೆ, ಓದುವುದಕ್ಕೆ, ಸಂವಹನಕ್ಕೆ ಭಾಷೆ ಅಗತ್ಯ. ಭಾಷೆಯಲ್ಲಿ ಪಕ್ವತೆ, ಸ್ಪಷ್ಟತೆ ಮತ್ತು ಶಬ್ದ ಭಂಡಾರವನ್ನು ಹೊಂದಿರುವವರು ಆ ಭಾಷೆಯ ಮೇಲೆ ಹಿಡಿತಸಾಧಿಸುತ್ತಾರೆ ಎಂದರು. ಯಾವುದೇ ವಿಷಯದ ಬಗ್ಗೆ ಆಸಕ್ತಿ, ಏಕಾಗ್ರತೆ ಮತ್ತು ಸೃಜನಶೀಲತೆಯನ್ನು ಬೆಳೆಸಿಕೊಂಡಾಗ ನಮಗೆ ಅದರಲ್ಲಿ ವಿಶ್ವಾಸ ಹೆಚ್ಚಾಗುತ್ತದೆ ಆ ವಿಶ್ವಾಸ ಜೀವನದಲ್ಲಿ ನಮ್ಮನ್ನು ಮುನ್ನಡೆಸುತ್ತದೆ ಎಂದರು.