ಮಂಗಳೂರು: ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನ ಪ್ರಾಂಗಣದಲ್ಲಿ ನಡೆದ ಯಕ್ಷಗಾನ ಬಯಲಾಟ ಸಂದರ್ಭ ವೇಷಧಾರಿ ರವಿರಾಜ ಪನೆಯಾಲ ಅವರಿಗೆ ಶ್ರೀ ಕದ್ರಿ” ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕುಂದೇಶ್ವರ ಪ್ರತಿಷ್ಠಾನ ಅಧ್ಯಕ್ಷ ಜಿತೇಂದ್ರ ಕುಂದೇಶ್ವರ ಅಭಿನಂದನಾ ಭಾಷಣ ಮಾಡಿ, ಪನೆಯಾಲರು ಕೀಚಕ, ಭೀಮ, ಸುಂದೋಪ ಸುಂದ ಮೊದಲಾದ ಪಾತ್ರಗಳಿಗೆ ಜೀವ ತುಂಬಿದವರು. ಸಮರ್ಥ ಅರ್ಥಧಾರಿ, ಕೃಷಿಕನಾಗಿ ಮತ್ತು ಯಕ್ಷಗಾನದಲ್ಲೂ ಕೃಷಿ ಮಾಡುತ್ತಿರುವ ಪನೆಯಾಲರು ಯುವ ಕಲಾವಿದರಿಗೆ ಆದರ್ಶ ಯಕ್ಷಗಾನ ಬಯಲಾಟ ತುಳುನಾಡಿನ ಜೀವನಾಡಿ, ಸಾವಿರಕ್ಕೂ ಮಿಕ್ಕಿ ವೃತ್ತಿಪರ ಕಲಾವಿದರು, ಹತ್ತುಸಾವಿರಕ್ಕೂ ಮಿಕ್ಕಿ ಹವ್ಯಾಸಿಗಳು ಇರುವ ಕ್ಷೇತ್ರಕ್ಕೆ ದೊಡ್ಡ ಸಂಖ್ಯೆಯಲ್ಲಿ ಮಕ್ಕಳು ಕಲಿಯಲು ಬರುತ್ತಿರುವುದು ಕಲೆಯ ವಿಶೇಷ ಶಕ್ತಿ ಎಂದರು.
ಪ್ರಶಸ್ತಿ ಸ್ವೀಕರಿಸಿದ ರವಿರಾಜ ಪನೆಯಾಲ ಮಾತನಾಡಿ, ಯಕ್ಷವೇಷ ಧರಿಸಿದ ನನಗೆ ಸನ್ಮಾನ ಮಾಡಿದ್ದೀರಿ. ರಂಗದಲ್ಲಿ ಮಾಡುವ ಪಾತ್ರಗಳಿಗೆ ಈ ಪ್ರಶಸ್ತಿ. ಇದು ಯಕ್ಷಗಾನ ಕಲೆಗೆ ಸಂದ ಗೌರವ ಎಂದರು.
ಕಾರ್ಪೊರೇಟರ್ ಮನೋಹರ ಶೆಟ್ಟಿ ಕದ್ರಿ, ಕಾರ್ಪೊರೇಟರ್ ಶಕಿಲಾ ಕಾವ, ಶಿವಳ್ಳಿ ಸ್ಪಂದನ ಅಧ್ಯಕ್ಷ ಕೃಷ್ಣ ಭಟ್ ಕದ್ರಿ, ಪೊಳಲಿ ಗಿರಿಪ್ರಕಾಶ್ ತಂತ್ರಿ, ಸುಧಾಕರ ರಾವ್ ಪೇಜಾವರ, ಆಯೋಜಕರಾದ ಕುಂಜತ್ತೋಡಿ ವಾಸುದೇವ ಭಟ್ ಕದ್ರಿ, ದೀಪಾ. ಕೆ.ಎಸ್., ಋತ್ವಿಕ್ ಅಲೆವೂರಾಯ, ಸಂಹಿತಾ ಅಲೆವೂರಾಯ, ಸುಜಾತ ಕುಮಾರಿ, ರಾಘವೇಂದ್ರ ಭಟ್ ಇದ್ದರು.