ಪುತ್ತಿಲ ಪರಿವಾರದ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಯಾವುದೇ ಸಹಭಾಗಿತ್ವ ಇಲ್ಲ : ಆಡಳಿತ ಸಮಿತಿಯಿಂದ ಸ್ಪಷ್ಟನೆ – ಕಹಳೆ ನ್ಯೂಸ್
ಪುತ್ತೂರು :ಪುತ್ತಿಲ ಪರಿವಾರ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಆಶ್ರಯದಲ್ಲಿ ಪುತ್ತೂರಿನ ಮಹಾಲಿಂಗೇಶ್ವರ ದೇವಳದ ಎದುರಿನ ದೇವರ ಮಾರು ಗದ್ದೆಯಲ್ಲಿ ಡಿ.24 ಮತ್ತು 25 ರಂದು ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಸನಾತನ ಸಮಾಗಮ ಕಾರ್ಯಕ್ರಮ ನಡೆಯಲಿದೆ. ಆದರೆ ಈ ಕಾರ್ಯಕ್ರಮಕ್ಕೂ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೋ ಯಾವುದೇ ಸಹಭಾಗಿತ್ವ ಇರುವುದಿಲ್ಲ ಎಂದು ದೇವಾಲಯದ ಆಡಳಿತ ಸಮಿತಿಯು ಪತ್ರಿಕಾ ಪ್ರಕಟನೆ ಹೊರಡಿಸುವ ಮೂಲಕ ಸ್ಪಷ್ಟೀಕರಣವನ್ನ ನೀಡಿದೆ.
ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಸನಾತನ ಸಮಾಗಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ, ಗೌರವ ಸಲಹೆಗಾರರನ್ನಾಗಿ ಪುತ್ತೂರು ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಾಲಯದ ವ್ಯವಸ್ಧಾಪನ ಸಮಿತಿ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯ, ಸರ್ವ ಸದಸ್ಯರುಗಳು, ವ್ಯವಸ್ಧಾಪನ ಸಮಿತಿ ಮತ್ತು ತಂತ್ರಿಗಳು, ಅರ್ಚಕ ವೃಂದ, ನೌಕರ ವರ್ಗ ಎಂದು ಹಾಕಲಾಗಿದೆ, ಆದರೆ ಈ ಹೆಸರನ್ನ ಹಾಕುವ ಮುನ್ನ ಶ್ರೀಮಹಾಲಿಂಗೇಶ್ವರ ದೇವಾಲಯದ ವ್ಯವಸ್ಧಾಪನ ಸಮಿತಿಯ ಯಾರ ಗಮನಕ್ಕೂ ತಾರದೇ ಆಮಂತ್ರಣ ಪತ್ರಿಕೆ ಮುದ್ರಿಸಲಾಗಿದೆ. ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಸನಾತನ ಸಮಾಗಮ ಕಾರ್ಯಕ್ರಮ ನಡೆಸಲು ಶ್ರೀದೇವಾಲಯದ ಗದ್ದೆಯ ಮೈದಾನದಲ್ಲಿ ಸ್ಧಳಾವಕಾಶವನ್ನ ಮನವಿಯ ಮೇರೆಗೆ ನೀಡಲಾಗಿದೆ. ಇದನ್ನ ಬಿಟ್ಟು ಮಹಾಲಿಂಗೇಶ್ವರ ದೇವಾಲಯ ಈ ಕಾರ್ಯಕ್ರಮದಲ್ಲಿ ಸಹಭಾಗಿಯಾಗಿಲ್ಲ ಎಂದು ದೇವಾಲಯದ ವತಿಯಿಂದ ಸ್ಪಷ್ಟನೆಯನ್ನ ನೀಡಿದ್ದಾರೆ.